ಶ್ರೀಗಳ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ನೀರವ ಮೌನ

7
ನಿಜವಾಯ್ತು ಜಂಗಮವಾಣಿ; ಸನ್ಯಾಸಿಯಾದ ‘ಶಿವಣ್ಣ’

ಶ್ರೀಗಳ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದಲ್ಲಿ ನೀರವ ಮೌನ

Published:
Updated:

ರಾಮನಗರ: ಸಿದ್ಧಗಂಗಾ ಮಠದ ಶಿವಕುಮಾರ ಶ್ರೀಗಳ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಹುಟ್ಟೂರಾದ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಶಿವಕುಮಾರ ಸ್ವಾಮಿಗಳು ಈ ನೆಲದ ಹೆಮ್ಮೆಯ ಪುತ್ರ. ಇಲ್ಲಿನ ಗಂಗಮ್ಮ ಮತ್ತು ಹೊನ್ನೇಗೌಡ ದಂಪತಿಗೆ ಒಟ್ಟು 13 ಮಕ್ಕಳು. ಅದರಲ್ಲಿ ಎಂಟು ಪುತ್ರರಾದರೆ, ಐವರು ಪುತ್ರಿಯರು. ಈ ಎಲ್ಲರಲ್ಲಿ ‘ಶಿವಣ್ಣ’ ಕಡೆಯವರು. ಶಿವಣ್ಣ ಎಂಬುದು ಶ್ರೀಗಳ ಪೂರ್ವಾಶ್ರಮದ ಹೆಸರು. 1908ರ ಏಪ್ರಿಲ್‌ 1ರಂದು ಶಿವಣ್ಣ ಜನಿಸಿದರು. ಇದೇ ಸಂದರ್ಭ ಗ್ರಾಮಕ್ಕೆ ಬಂದಿದ್ದ ಜಂಗಮರೊಬ್ಬರು ಅವರ ಮುಖ ನೋಡಿ ಅವರಲ್ಲಿ ಮಹಾಪುರುಷನ ಕಳೆ ಕಾಣುತ್ತಿದೆ ಎಂದಿದ್ದರಂತೆ. ಆ ಮಾತು ಸುಳ್ಳಾಗಲಿಲ್ಲ.

ಶಿವಣ್ಣ ಬಾಲ್ಯದ ದಿನಗಳನ್ನು ಇಲ್ಲಿಯೇ ಕಳೆದರು. ತಂದೆ ಹೊನ್ನಪ್ಪ ಗಮಕ ವಾಚಕರಾಗಿದ್ದು, ಪುರಾಣಗಳ ಓದು ಬಾಲ್ಯದಲ್ಲಿಯೇ ಅವರ ಕಿವಿಗೆ ಬಿದ್ದು ಸಂಸ್ಕಾರ ಮೈಗೂಡಿತು. ಗ್ರಾಮದ ಬಸವಣ್ಣ ದೇಗುಲದ ಸಮೀಪ ಅವರ ಮನೆ ಇತ್ತು. ಗ್ರಾಮದ ಕೂಲಿಮಠದಲ್ಲಿ ಮರಳಿನ ಮೇಲೆ ಅಕ್ಷರ ತಿದ್ದುವ ಮೂಲಕ ಅವರ ವಿದ್ಯಾಭ್ಯಾಸ ಆರಂಭವಾಯಿತು. ಎಂಟನೇ ವಯಸ್ಸಿನಲ್ಲಿ ಅವರ ತಾಯಿ ತೀರಿಕೊಂಡಿದ್ದು, ಮುಂದೆ ಅಕ್ಕನ ಆಸರೆಯಲ್ಲಿ ನಾಗವಲ್ಲಿಯಲ್ಲಿ ಶಿಕ್ಷಣ ಮುಂದುವರಿಯಿತು.


ಮಾಗಡಿ ತಾಲ್ಲೂಕು ವೀರಾಪುರ ಗ್ರಾಮದಲ್ಲಿರುವ ಶ್ರೀಗಳ ತಂದೆ–ತಾಯಿ ಸಮಾಧಿ

ಮುಂದೆ ತುಮಕೂರಿನಲ್ಲಿ ಪ್ರೌಢಶಾಲೆ ಸೇರಿದ ಶಿವಣ್ಣ ಅಲ್ಲಿಂದ ತುಮಕೂರಿನ ಸಿದ್ಧಗಂಗ ಮಠದ ಸಂಪರ್ಕಕ್ಕೆ ಬಂದರು. ಆರಂಭದಲ್ಲಿ ಮಠದ ಅಂದಿನ ಶ್ರೀಗಳಾದ ಉದ್ಧಾವ ಶಿವಯೋಗಿಗಳಲ್ಲಿ ಉಚಿತ ವಿದ್ಯಾರ್ಥಿನಿಲಯದಲ್ಲಿ ಜಾಗ ಕೇಳಲು ಹಿಂಜರಿದು ಬಾಡಿಗೆ ಮನೆಯಲ್ಲಿ ಉಳಿದರು. ಕಡೆಗೆ ಇವರ ಶಿಸ್ತು, ನಿಷ್ಠೆ ನೋಡಿದ ಕಾಳಪ್ಪ ಮತ್ತು ಮಠದ ಉತ್ತರಾಧಿಕಾರಿ ಮರುಳಾರಾಧ್ಯರು ಶ್ರೀಗಳಿಗೆ ಮನವಿ ಮಾಡಿ
ವಿದ್ಯಾರ್ಥಿನಿಲಯದಲ್ಲಿ ಪ್ರವೇಶ ಕಲ್ಪಿಸಿಕೊಟ್ಟರು. ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಮುಗಿಸಿದ ಶಿವಣ್ಣರಿಗೆ 1930ರಲ್ಲಿ ಮರುಳಾರಾಧ್ಯರ ನಿಧನದಿಂದಾಗಿ ಸಿದ್ಧಗಂಗಾ ಮಠದ ಉತ್ತರಾಧಿಕಾರಿ ಆಗುವ ಅವಕಾಶ ಬಂದಿತು. ಈ ಮೂಲಕ ಶಿವಣ್ಣ ಶಿವಕುಮಾರ ಶ್ರೀಗಳಾಗಿ ಬದಲಾದರು.

ಸದ್ಯ ವೀರಾಪುರ ಗ್ರಾಮದಲ್ಲಿ ಶ್ರೀಗಳ ವಂಶಸ್ಥರು ಬೆರಳೆಣಿಕೆಯಷ್ಟಿದ್ದಾರೆ. ಶ್ರೀಗಳ ಪೂರ್ವಾಶ್ರಮದ ತಂದೆ–ತಾಯಿಗಳ ಸಮಾಧಿಗಳು ಮಾತ್ರ ಕುರುಹಾಗಿ ಉಳಿದಿದೆ. ಅವರು ಬಾಲ್ಯದಲ್ಲಿ ಈಜಾಟವಾಡುತ್ತಿದ್ದ ಕೆರೆ ಬರಿದಾಗಿ ನಿಂತಿದೆ. ದಶಕದ ಹಿಂದೆಯೇ ಗ್ರಾಮದ ಅಭಿವೃದ್ಧಿಗೆ ಸರ್ಕಾರ ಮುಂದಾದರೂ ಹೆಚ್ಚೇನು ಬದಲಾವಣೆ ಆಗಿಲ್ಲ.


ಮಾಗಡಿಯಲ್ಲಿ 2004ರಲ್ಲಿ ನಡೆದ ಶಿವಕುಮಾರ ಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಅಂದಿನ ಶಾಸಕ ಎಚ್.ಸಿ. ಬಾಲಕೃಷ್ಣ ಶ್ರೀಗಳ ಪ್ರತಿಮೆ ಅನಾವರಣಗೊಳಿಸಿದರು. ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ ಹಾಗೂ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜೊತೆಗಿದ್ದರು.

ಜಗವೆಲ್ಲ ನನ್ನದೇ ಊರೆಂದ ಉದಾತ್ತವಾದಿ

ಶಿವಕುಮಾರ ಶ್ರೀಗಳು ಸಿದ್ಧಗಂಗಾ ಮಠದ ಸ್ವಾಮೀಜಿಗಳಾದ ಮೇಲೆ ತಮ್ಮ ಹುಟ್ಟೂರಿಗೆ ಬಂದದ್ದು ತೀರಾ ಅಪರೂಪ.
ವೀರಾಪುರ ಗ್ರಾಮಸ್ಥರು ಸಾಕಷ್ಟು ಬಾರಿ ಶ್ರೀಗಳನ್ನು ಭೇಟಿ ಮಾಡಿ ಗ್ರಾಮಕ್ಕೆ ಬರುವಂತೆ ಪ್ರೀತಿಪೂರ್ವಕವಾಗಿ ಮಾಡುತ್ತಿದ್ದ ಒತ್ತಾಯವನ್ನು ಅವರು ಅಷ್ಟೇ ವಿನಯಪೂರ್ವಕವಾಗಿ ನಿರಾಕರಿಸುತ್ತಿದ್ದರು. ‘ಸನ್ಯಾಸಿ ಆದವನಿಗೆ ನನ್ನದು, ನನ್ನವರು ಎಂಬ ಮೋಹ ಇರಕೂಡದು. ಜಗವೇ ನನ್ನೂರು’ ಎನ್ನುತ್ತಿದ್ದರು. ಅದರಂತೆಯೇ ಬಾಳಿದರು. ‘ಸರ್ಕಾರ, ಅಧಿಕಾರಿಗಳಿಗೆ ಹೇಳಿ ನಿಮ್ಮೂರನ್ನು ನೀವೇ ಅಭಿವೃದ್ಧಿ ಮಾಡಿ’ ಎಂದು ಗ್ರಾಮಸ್ಥರಿಗೆ ಕಿವಿಮಾತು ಹೇಳಿದ್ದರು.

ಸರ್ಕಾರಿ ಕೆಲಸ ಬಿಟ್ಟರು!

‘ಶ್ರೀಗಳು ಉನ್ನತ ವಿದ್ಯಾಭ್ಯಾಸ ಮುಗಿಸಿ ವೀರಾಪುರಕ್ಕೆ ಮರಳುವ ವೇಳೆಗೆ ಅವರಿಗೆ ಸರ್ಕಾರಿ ಕೆಲಸದ ಆದೇಶ ಬಂದಿತ್ತು. ಆದರೆ ಕೆಲಸವನ್ನು ತಿರಸ್ಕರಿಸಿದ ಅವರು, ತಾವು ಸಿದ್ಧಗಂಗಾ ಮಠದ ಅಡಿಯಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿರುವುದಾಗಿ ಹೇಳಿದರು. ಇದಕ್ಕೆ ಅವರ ತಂದೆ ಮತ್ತು ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆದರೆ ಅದಾಗಲೇ ಧೃಢ ನಿರ್ಧಾರ ಮಾಡಿದ್ದ ಶ್ರೀಗಳು ಮನಸ್ಸು ಬದಲಿಸದೇ ಸಿದ್ಧಗಂಗಾ ಮಠಕ್ಕೆ ತೆರಳಿದರು’ ಎಂದು ವೀರಾಪುರ ಗ್ರಾಮಸ್ಥರಾದ ಶಿವಣ್ಣ ಮತ್ತು ಕೆಂಪಣ್ಣ ನೆನಪು ಮಾಡಿಕೊಳ್ಳುತ್ತಾರೆ.

 

ಬರಹ ಇಷ್ಟವಾಯಿತೆ?

 • 27

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !