ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

250 ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ ವಿತರಣೆ

Last Updated 9 ನವೆಂಬರ್ 2017, 9:38 IST
ಅಕ್ಷರ ಗಾತ್ರ

ಶಿಕಾರಿಪುರ: ಸಾಗುವಳಿದಾರ ಅರ್ಜಿಯನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಮೂಲಕ ತಾಲ್ಲೂಕಿನಲ್ಲಿ ಅತಿ ಹೆಚ್ಚು ರೈತರಿಗೆ ಹಕ್ಕುಪತ್ರ ವಿತರಿಸಲಾಗಿದೆ ಎಂದು ಶಾಸಕ ಬಿ.ವೈ.ರಾಘವೇಂದ್ರ ಹೇಳಿದರು. ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಬಗರ್‌ಹುಕುಂ ಸಾಗುವಳಿ ಹಕ್ಕುಪತ್ರಕ್ಕಾಗಿ ಜಿಲ್ಲೆಯಲ್ಲಿ 25,742 ರೈತರು ಅರ್ಜಿ ಸಲ್ಲಿಸಿದ್ದಾರೆ. ಹೊಸನಗರ 5,859, ಸೊರಬ 4,076, ಸಾಗರ 4,330, ತೀರ್ಥಹಳ್ಳಿಯಲ್ಲಿ 9,106 ಸಲ್ಲಿಸಿದ್ದಾರೆ. ಶಿಕಾರಿಪುರ ತಾಲ್ಲೂಕಿನಲ್ಲಿ 1,538 ಅರ್ಜಿಗಳು ಸಲ್ಲಿಕೆಯಾಗಿವೆ. ಪ್ರಸ್ತುತ 1,200 ಅರ್ಜಿಗಳನ್ನು ವಿಲೇವಾರಿ ಮಾಡಿ, ಹಕ್ಕುಪತ್ರ ನೀಡಲಾಗಿದೆ ಎಂದರು.

‘ಹಕ್ಕುಪತ್ರ ವಿತರಣೆಯಲ್ಲಿ ಯಾವುದೇ ರಾಜಕಾರಣ ಮಾಡಿಲ್ಲ. ಬಗರ್‌ಹುಕುಂ ಸಮಿತಿ ಸದಸ್ಯರ ಸಲಹೆಯಂತೆ ಕಾರ್ಯ ನಿರ್ವಹಿಸಿದ್ದೇನೆ. ತಾಂತ್ರಿಕ ಕಾರಣದಿಂದ ಕೆಲ ರೈತರ ಅರ್ಜಿಗಳು ವಿಲೇವಾರಿ ಆಗಿಲ್ಲ. ಉಳಿದ ಅರ್ಜಿಗಳನ್ನು ಶೀಘ್ರದಲ್ಲೇ ವಿಲೇವಾರಿ ಮಾಡಲಾಗುವುದು’ ಎಂದರು.

‘ಹಕ್ಕುಪತ್ರ ನೀಡುವ ವಿಷಯದಲ್ಲಿ ನನ್ನ ಹೆಸರು ಹೇಳಿಕೊಂಡು ಯಾರಾದರೂ ಹಣ ಪಡೆದಿದ್ದರೆ ಅದಕ್ಕೆ ನಾನು ಜವಾಬ್ದಾರನಲ್ಲ. ಹಕ್ಕುಪತ್ರ ನೀಡಲು ನಾನು ಯಾವುದೇ ಹಣ ಪಡೆದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಬಗರ್‌ಹುಕುಂ ಸಾಗುವಳಿದಾರರಿಗೆ ಭೂಮಿ ದೊರೆಯಲು ಸಂಸದ ಬಿ.ಎಸ್.ಯಡಿಯೂರಪ್ಪ ಹೋರಾಟ ನಡೆಸಿದ್ದಾರೆ. ರಾಚಯ್ಯ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸಲು ಆದೇಶ ನೀಡಿದ್ದರು. ಒಕ್ಕಲೆಬ್ಬಿಸುವ ಆದೇಶದ ವಿರುದ್ಧ ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಹಲವು ಹಿರಿಯರ ಹೋರಾಟದಿಂದ ರೈತರಿಗೆ ಭೂಮಿಯ ಹಕ್ಕು ದೊರೆಯುತ್ತಿದೆ ಎಂದರು.

ಬಗರ್‌ಹುಕುಂ ಸಮಿತಿ ಸದಸ್ಯ ನಗರದ ಮಹದೇವಪ್ಪ ಮಾತನಾಡಿ, ‘ಭೂಮಿ ಹಕ್ಕು ಪದೇ ಪದೇ ಸಿಗುವುದಿಲ್ಲ. ಸಿಕ್ಕಿರುವ ಜಮೀನಿನ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳಬೇಕು. ರೈತರು ಉತ್ತಮ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.

‘ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಸಲಹೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಹಿನ್ನೆಲೆಯಲ್ಲಿ ಶಾಸಕರ ನೇತೃತ್ವದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ, ಹಕ್ಕುಪತ್ರ ವಿತರಿಸುತ್ತಿದ್ದೇವೆ’ ಎಂದು ಮಹದೇವಪ್ಪ ಹೇಳಿದರು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಎ.ಪರಮೇಶ್ವರಪ್ಪ ಮಾತನಾಡಿ, ‘ಹಕ್ಕುಪತ್ರ ಪಡೆಯುತ್ತಿರುವ ಸಾಗುವಳಿದಾರರು ಸಂಸದ ಯಡಿಯೂರಪ್ಪ ಅವರನ್ನು ನೆನಪು ಮಾಡಿಕೊಳ್ಳಬೇಕು. ಬಗರ್‌ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಯಡಿಯೂರಪ್ಪ ಅವರು ಶಿವಮೊಗ್ಗದಿಂದ ಬೆಂಗಳೂರುವರೆಗೆ ಪಾದಯಾತ್ರೆ ನಡೆಸಿದ್ದರು’ ಎಂದು ನೆನಪಿಸಿಕೊಂಡರು.

ಜಿಲ್ಲಾ ಪಂಚಾಯ್ತಿ ಸದಸ್ಯರಾದ ರೇಣುಕಾ ಹನುಮಂತಪ್ಪ, ಅರುಂಧತಿ ರಾಜೇಶ್‌, ತಹಶೀಲ್ದಾರ್‌ ಬಿ.ಶಿವಕುಮಾರ್‌, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ರೂಪಾ ದಯಾನಂದ್, ಸದಸ್ಯರಾದ ಕವಲಿ ಸುಬ್ರಮಣ್ಯ, ಶಂಭು, ಬಗರ್‌ಹುಕುಂ ಸಮಿತಿ ಸದಸ್ಯರಾದ ಮಾರವಳ್ಳಿ ಉಮೇಶ್, ಯಶೋದಮ್ಮ ಕೃಷ್ಣೋಜಿರಾವ್‌, ಕೆಡಿಪಿ ಸದಸ್ಯ ಕೋಡಿಹಳ್ಳಿ ಉಮೇಶ್‌ ಅವರೂ ಇದ್ದರು. 215 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT