ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಅಡಿಕೆ ಬಣ್ಣಕ್ಕೆ ವಿದೇಶದಲ್ಲಿ ಬೇಡಿಕೆ ಹೆಚ್ಚು

ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಕೃಷಿ ತಜ್ಞ ಶ್ರೀ ಪಡ್ರೆ ಅನಿಸಿಕೆ
Last Updated 19 ಮಾರ್ಚ್ 2023, 7:58 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಅಡಿಕೆಗೆ ಕೊಡುವ ಪ್ರಾಮುಖ್ಯತೆ ಅಡಿಕೆ ಚೊಗರಿಗೂ ಕೊಡಬೇಕು. ಅದರಿಂದ ಬಣ್ಣ ತಯಾರಿಸಿ ವಿದೇಶಕ್ಕೆ ರಪ್ತು ಮಾಡಿ ಲಾಭ ಪಡೆಯಬಹುದು’ ಎಂದು ಕೃಷಿ ತಜ್ಞ ಶ್ರೀ ಪಡ್ರೆ ಹೇಳಿದರು.

ಇಲ್ಲಿನ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ಇಲಾಖೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ‘ಕೃಷಿ ಮತ್ತು ತೋಟಗಾರಿಕಾ ಮೇಳದಲ್ಲಿ ಸೆಕೆಂಡರಿ ಕೃಷಿ ಮತ್ತು ಮೌಲ್ಯವರ್ಧನೆ’ ವಿಷಯದ ಕುರಿತು ಅವರು ಮಾತನಾಡಿದರು.

‘ಅಡಿಕೆ ಬಣ್ಣದ ನೈಸರ್ಗಿಕ ಸೌಂದರ್ಯ ಅಡಿಕೆ ಬೆಳೆಗಾರರಿಗಿಂತ, ಆ ಬಣ್ಣದಲ್ಲಿ ಪಳಗಿದವರಿಗೆ ಮಾತ್ರ ಕಾಣುತ್ತಿದೆ. ಅಂತರರಾಷ್ಟ್ರೀಯ ವ್ಯಕ್ತಿಯೊಬ್ಬರು ಕಲಂಕಾರಿ ಶ್ರೀನಿವಾಸ ಎನ್ನುವವರು ನಿಮ್ಮ ಅಡಿಕೆ ಬಣ್ಣ ನಮ್ಮ ಕಲಂಕಾರಿ ಕಲೆಗೆ ಒಂದು ಕಿರೀಟದ ಮೇಲೆ ತುರಾಯಿ ಇದ್ದಂತೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಅಂದರೆ ಅರ್ಥ ವಿದೇಶದಲ್ಲಿರುವವರಿಗೆ ಈ ಅಡಿಕೆ ಬಣ್ಣದ ಮಹತ್ವ ತಿಳಿದಿದೆ. ಆದರೆ ಆ ಬಣ್ಣವನ್ನು ಉತ್ಪಾದನೆ ಮಾಡುವುದಕ್ಕೆ ನಾವು ಏಕೆ ಹಿಂದೇಟು ಹಾಕುತ್ತಿದ್ದೇವೆ ಎಂದು ತಿಳಿಯುತ್ತಿಲ್ಲ’ ಎಂದರು.

‘ಚನ್ನಪಟ್ಟಣದ ಗೊಂಬೆಗಳಿಗೆ ಈ ಅಡಿಕೆ ಬಣ್ಣ ಬಳಸಲಾಗುತ್ತದೆ. ಅಡಿಕೆ ಬಣ್ಣವನ್ನು ಸೀರೆ, ಚೂಡಿದಾರ್, ಅಷ್ಟೇ ಅಲ್ಲದೆ ಶಾಂಪೂ
ತಯಾರಿಕೆಯಲ್ಲಿ ಬಳಸಲಾಗುತ್ತದೆ. ಜಪಾನ್ ದೇಶದಿಂದ ಹೆಚ್ಚಿನ ಬೇಡಿಕೆ ಅಡಿಕೆ ಬಣ್ಣಕ್ಕಿದೆ. ಸುಮಾರು 10 ದೇಶಗಳಲ್ಲಿ ಅಡಿಕೆ ಬಣ್ಣ ಬಳಕೆ ಆಗುತ್ತಿದೆ. ಆದ್ದರಿಂದ ಮುಂದಿನ ದಿನದಲ್ಲಿ ವಿಶ್ವವಿದ್ಯಾಲಯಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಗಾರ ಮಾಡಿ ಅರಿವು ಮೂಡಿಸಬೇಕು’ ಎಂದರು.

‘ಮಲೇಷಿಯಾದಲ್ಲಿ ಹಲಸಿನ ಹಣ್ಣಿನ ಬಗ್ಗೆ ಹೆಚ್ಚು ಕಾಳಜಿ ವಹಿಸಿ, ಉದ್ಯಮವಾಗಿಸಿಕೊಂಡಿದ್ದಾರೆ. ಇಂಡೊನೇಷ್ಯಾದಲ್ಲಿ ಗುಡಿ ಕೈಗಾರಿಕೆ ಮೂಲಕ ಹಲಸು ಉದ್ಯಮ ಮಾಡಿ ಜೀವನ ಕಟ್ಟಿಕೊಂಡಿದ್ದಾರೆ. ವಿದೇಶದಲ್ಲಿ ಹಲಸಿನ ಹಪ್ಪಳ ತಯಾರಿಸಲು ಉತ್ಕೃಷ್ಟ ಯಂತ್ರೋಪಕರಣಗಳಿವೆ. ಆದರೆ ನಾವು ಮಾತ್ರ ಹಿಂದೆ ಉಳಿದಿದ್ದೇವೆ. ಹಲಸಿನ ಹಣ್ಣಿನಿಂದ ಐಸ್ ಕ್ರೀಂ, ಹಲ್ವ, ಪೇಡಾ, ಮಹಾರಾಷ್ಟ್ರದಲ್ಲಿ ಮೋದಕ ಸಹ ತಯಾರಿಸಲಾಗುತ್ತದೆ’ ಎಂದರು.

‘ಬಾಳೆ ಬೆಳಗಾರರ ಬಾಳು ಬೆಳಗಲು, ಬಾಳೆ ಕಾಯಿ ಹುಡಿ (ಬಾಕಾಹು) ಮಾಡುವ ಮೂಲಕ ಹತ್ತು ದಿನಗಳಲ್ಲಿ ಹಾಳಾಗುವ ಬಾಳೆಗೆ ಆರು ತಿಂಗಳು ಜೀವ ಕೊಡಬಹುದು. ಪೋಷಕಾಂಶದ ದೃಷ್ಠಿಯಲ್ಲಿ ನೋಡಿದರೆ ಮಧುಮೇಹಕ್ಕೆ ಇದನ್ನು ಬಳಸಬಹುದು. ಉತ್ತರ ಕನ್ನಡದ ಮಹಿಳೆಯರು ಬಾಕಾಹು ಮೂಲಕ ಉಪ್ಪಿಟ್ಟು, ಜಾಮೂನು, ಪಡ್ಡು ಸೇರಿದಂತೆ ಅನೇಕ ತಿಂಡಿ ತಿನಿಸು ತಯಾರಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ’ ಎಂದರು.

ಜೇನು ಕೃಷಿಕ ಮಧುಕೇಶ್ವರ ಜನಕ ಹೆಗಡೆ ಮಾತನಾಡಿ, ರೈತರು ಕೇವಲ ಸರ್ಕಾರದ ಸಬ್ಸಿಡಿ ತೆಗೆದುಕೊಂಡು ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಕೃಷಿ ಜೊತೆಗೆ ಹೈನುಗಾರಿಕೆ ಅಳವಡಿಸಿಕೊಳ್ಳಬೇಕು ಎಂದ ಅವರು, ಕೇವಲ ₹ 20,000 ಬಂಡವಾಳ ಹೂಡಿ ಜೇನು ಕೃಷಿ ಹಾಗೂ ಜೇನಿನ ಉಪ ಉತ್ಪನ್ನದಿಂದ ಉತ್ತಮ ಲಾಭ ಪಡೆಯಲು ಸಾಧ್ಯವಿದೆ
ಎಂದರು.

ಸಾಂಬಾರು ಬೆಳೆಗಳ ಮೌಲ್ಯವರ್ಧನೆ ಕುರಿತು ಕೃಷಿ ವಿಜ್ಞಾನಿ ಮಾಧವನ್ ನಾಯ್ಡು ಅವರು ತಿಳಿಸಿದರು. ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಆರ್.ಸಿ. ಜಗದೀಶ್, ಕೃಷಿ ಮತ್ತು ತೋಟಗಾರಿಕೆ ಮೇಳದ ವಿಸ್ತರಣಾ ನಿರ್ದೇಶಕ ಬಿ. ಹೇಮ್ಲಾ ನಾಯಕ್, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಮೃತ್ಯುಂಜಯ ವಾಲಿ, ಮೂಡಿಗೆರೆ ಯುವ ಕೃಷಿಕ ದಿನೇಶ್, ಸುಜಾತಾ ಶೆಟ್ಟಿ, ಕೆಂಚರೆಡ್ಡಿ, ಶ್ರೀನಿವಾಸ್, ಜಯಶ್ರೀ ಅವರೂ ಈಸ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT