ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಕೃಷಿ ಪದ್ಧತಿಯಿಂದ ಏಳಿಗೆ ಕಂಡ ರೈತ

ಭದ್ರಾವತಿ ಸಮೀಪದ ಕೆ.ಎಚ್‌. ನಗರದ ರೈತ ನಂಜುಂಡೇಶ್ವರ ಸಾಧನೆ
Last Updated 16 ಫೆಬ್ರುವರಿ 2022, 6:23 IST
ಅಕ್ಷರ ಗಾತ್ರ

ಭದ್ರಾವತಿ: ‘ಮೂರನೇ ತರಗತಿಯಲ್ಲಿದ್ದಾಗ ತಂದೆಯವರು ತೀರಿಕೊಂಡರು. ಓದು ಕೈ ಹಿಡಿಯಲಿಲ್ಲ. ಏಳನೇ ತರಗತಿ ಅನುತ್ತೀರ್ಣನಾದ ನಂತರ ಕೃಷಿ ಕೆಲಸಕ್ಕೆ ಮುಂದಾದೆ. ಕೃಷಿ ನನ್ನ ಕೈ ಹಿಡಿಯಿತು’ ಎನ್ನುತ್ತಾರೆ ಇಲ್ಲಿಗೆ ಸಮೀಪದ ಕೆ.ಎಚ್. ನಗರದ ಕೆ. ನಂಜುಂಡೇಶ್ವರ.

ಇವರು ಕೃಷಿಯಲ್ಲಿನ ಸಾಧನೆಗಾಗಿ ಕೃಷಿ ಪ್ರಶಸ್ತಿಗೂ ಭಾಜನರಾಗಿದ್ದಾರೆ. ತಂದೆಯವರಿಂದ ಸಿಕ್ಕ ಒಂದು ಎಕರೆ ಜಮೀನಿನಲ್ಲಿ ಕೃಷಿ ಚಟುವಟಿಕೆ ಆರಂಭಿಸಿ 20 ವರ್ಷಗಳು ಕಳೆದಿವೆ. ಇದೀಗ ಅವರು ಐದೂವರೆ ಎಕರೆ ಜಮೀನಿನ ಒಡೆಯರಾಗಿದ್ದು, ಇದರಲ್ಲಿ ಭತ್ತ, ಅಡಿಕೆ, ತೆಂಗು, ಕಬ್ಬು, ಶುಂಠಿ ಬೆಳೆಯುವ ಮೂಲಕ ಸಮಗ್ರ ಕೃಷಿ ಪದ್ಧತಿ ಅನುಸರಿಸುತ್ತಿದ್ದಾರೆ. ಈ ಮೂಲಕ ಯಶಸ್ಸಿನ ಹಾದಿ ತುಳಿದಿದ್ದಾರೆ.

ಕೆ.ಎಚ್. ನಗರ, ಕಾಚಗೊಂಡನಹಳ್ಳಿ, ದೇವರನರಸೀಪುರ, ಕೊರಲಕೊಪ್ಪ ಭಾಗದಲ್ಲಿ ಜಮೀನು ಹೊಂದಿದ್ದು, ಇವರ ನೆರವಿಗೆ ತಾಯಿ, ಪತ್ನಿಯೂ ಕೈ ಜೋಡಿಸಿದ್ದಾರೆ. ಇದರಿಂದಾಗಿ ಜಮೀನು ಇರುವ ಜಾಗಗಳಿಗೆ ತೆರಳಿ ಕೃಷಿ ಮಾಡಲು ಸಹಾಯವಾಗಿದೆ ಎನ್ನುತ್ತಾರೆ ನಂಜುಂಡೇಶ್ವರ.

ಇಷ್ಟಕ್ಕೇ ಸೀಮಿತವಾಗದ ಇವರು ಕುರಿ, ಮೇಕೆ, ಕೋಳಿ ಸಾಕಾಣಿಕೆ ಜತೆಗೆ ಐದಾರು ಹಸುಗಳನ್ನೂ ಕಟ್ಟಿಕೊಂಡು ಕೃಷಿಗೆ ಪೂರಕವಾದ ಚಟುವಟಿಕೆಯಲ್ಲೂ ಸೈ ಎನಿಸಿಕೊಂಡಿದ್ದಾರೆ. ಅಡಿಕೆ ಸಸಿ ಮಾಡಿ ಮಾರಾಟ ಮಾಡುತ್ತಾರೆ. ಮನೆಗೆ ಅಗತ್ಯ ಸೊಪ್ಪು, ತರಕಾರಿ ಜತೆಗೆ ತೊಗರಿ ಬೆಳೆಯುವ ಮೂಲಕ ಸ್ವಾವಲಂಬನೆ ಸಾಧಿಸಿದ್ದಾರೆ. ಇವರ ಕೃಷಿ ಕಾಯಕವನ್ನು ಅರಿತ ಕೃಷಿ ಇಲಾಖೆ ಆತ್ಮ ಯೋಜನೆಯ 2020–21ನೇ ಸಾಲಿನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ತರಬೇತಿ ಆಗಿದೆ: ‘ಕೃಷಿ ಇಲಾಖೆಯು ಹಲವು ರೀತಿಯ ನೆರವು ನೀಡಿದೆ. ಇಲಾಖೆಯ ತರಬೇತಿ ಕಾರ್ಯಾಗಾರ ಹಾಗೂ ಕೃಷಿಯೇತರ ಚಟುವಟಿಕೆ ಶಿಬಿರಗಳಲ್ಲಿ ಭಾಗವಹಿಸಿ ಅದರ ಲಾಭ ಪಡೆದಿದ್ದೇನೆ’ ಎನ್ನುತ್ತಾರೆ ನಂಜುಂಡೇಗೌಡ.

‘ಇಲಾಖೆ ಅಧಿಕಾರಿಗಳು ಕಾಲಕಾಲಕ್ಕೆ ನೀಡುತ್ತಾ ಬಂದ ಸಲಹೆ, ಸೂಚನೆ, ಮಾರ್ಗದರ್ಶನದಿಂದ ಸಹಜವಾಗಿಯೇ ಉತ್ಪಾದನೆ ಹೆಚ್ಚಿಸಲು ನೆರವಾಗಿದೆ. ಸಬ್ಸಿಡಿ ಮೂಲಕ ಟ್ರ್ಯಾಕ್ಟರ್ ಸಿಕ್ಕಿದ್ದು, ಎಲ್ಲಾ ರೀತಿಯ ಬೇಸಾಯಕ್ಕೆ ಅನುಕೂಲವಾಗಿದೆ. ಬೇಸಿಗೆಯಲ್ಲಿ ಮೇವಿನ ತೊಂದರೆ ಆಗಬಾರದು ಎಂದು ಬೆಲ್ಲ, ಉಪ್ಪು ನೀರು ಮಿಶ್ರಣ ಮಾಡಿ ರಸಮೇವು ತಯಾರಿಸುತ್ತೇವೆ. ಇದರಿಂದ ಜಾನುವಾರು ಸಾಕಾಣಿಕೆಗೆ ಸುಲಭವಾಗಿದೆ’ ಎನ್ನುತ್ತಾರೆ ಅವರು.

ಸಮಗ್ರ ಕೃಷಿ ಚುಟವಟಿಕೆ ಮೂಲಕ ಕೃಷಿಯೇತರ ಕೆಲಸದಲ್ಲೂ ತಮ್ಮ ಕೈಚಳಕ ತೋರಿರುವ ನಂಜುಂಡೇಶ್ವರ ಅವರ ಸಾಧನೆ ಇನ್ನಿತರ ಕೃಷಿಕರಿಗೆ ಮಾದರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT