ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಡುತೋಪು ವಿರೋಧಿಸಿ ನ್ಯಾಯಾಲಯಕ್ಕೆ ಮೊರೆ

ನೀಲಗಿರಿ, ಅಕೇಶಿಯಾದಿಂದ ಸ್ವಾಭಾವಿಕ ಸಸ್ಯ ನಾಶ; ಗ್ರಾಮಸ್ಥರ ಆರೋಪ
Last Updated 7 ಜುಲೈ 2022, 4:48 IST
ಅಕ್ಷರ ಗಾತ್ರ

ತುಮರಿ: ಸಾಗರ ತಾಲ್ಲೂಕಿನ ಶರಾವತಿ ಹಿನ್ನೀರಿನ ಎಡದಂಡೆ ಭಾಗದಲ್ಲಿ ಮರು ನೆಡುತೋಪು ವಿಚಾರ ಮೈಸೂರು ಪೇಪರ್ ಮಿಲ್ (ಎಂಪಿಎಂ) ಹಾಗೂ ಕಿರುವಾಸೆ ಗ್ರಾಮಸ್ಥರ ನಡುವೆ ಕಾನೂನು ಸಮರಕ್ಕೆದಾರಿಯಾಗಿದೆ.

ಇಲ್ಲಿನ ಕರೂರು ಹೋಬಳಿ ತುಮರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಂದಾಯ ಹಾಗೂ ಕೆ.ಪಿ.ಸಿ ಭೂಮಿಯಲ್ಲಿ ಎಂಪಿಎಂ ಮರು ನೆಡುತೋಪು ಮಾಡಲು ಹೊರಟಿರುವುದರ ವಿರುದ್ಧ ಗ್ರಾಮಸ್ಥರಿಂದ ಸಾಗರದ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಈ ಹಿಂದೆ ಸಾರ್ವಜನಿಕ ರಸ್ತೆ ಪಕ್ಕದಲ್ಲಿ ಎಂಪಿಎಂ ಗಿಡಗಳು ಬೆಳೆದು ಸಂಚಾರಕ್ಕೆ ಆಡಚಣೆ, ಪ್ರಾಣಿಗಳಿಗೆ ಆರೋಗ್ಯ ಸಮಸ್ಯೆ ಆಗಿದೆ ಎಂದು ಆರೋಪಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು. ಸದ್ಯ ಎಂಪಿಎಂ ಕಡಿತಲೆ ಮಾಡಿರುವ ಜಾಗದಲ್ಲಿ ಪುನಃ ನೆಡುತೋಪು ಮಾಡಲು ಹೊರಟಿರುವ ವಿವಾದವೀಗ ನ್ಯಾಯಾಲಯದ ಮೆಟ್ಟಿಲೇರಿದೆ.

ಕಿರುವಾಸೆ ಗ್ರಾಮದ ಸರ್ವೆ ನಂ. 187ರಲ್ಲಿ 76 ಎಕರೆ 207ರಲ್ಲಿ 248 ಎಕರೆ, 214ರಲ್ಲಿ 214 ಎಕರೆ ಹಾಗೂ 185ರಲ್ಲಿ 121 ಎಕರೆ ಸೇರಿ ಒಟ್ಟು 626 ಎಕರೆ ಕಂದಾಯ ಹಾಗೂ ಕೆ.ಪಿ.ಸಿ ಭೂಮಿಯಲ್ಲಿ ಎಂಪಿಎಂ ಅಧಿಕಾರಿಗಳಿಂದ ಅರಣ್ಯ ಮರು ನೆಡುತೋಪು ಆರಂಭಿಸಲು ಸಿದ್ಧತೆ ನಡೆದಿದೆ. ಅದನ್ನು ಮಾಡದಂತೆ ತಡೆ ನೀಡಲು ಇಲ್ಲಿನ ಕಿರುವಾಸೆ ಗ್ರಾಮದ ಶಿವರಾಜ್ ಕೆ.ಎನ್, ಮಂಜುನಾಥ್, ಅರುಣ್, ಪರಮೇಶ್ವರ, ಮಂಜುನಾಥ ಮತ್ತಿತರರು ಸಾಗರದ ಹೆಚ್ಚುವರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಾಗರ ತಹಶೀಲ್ದಾರ್, ಎಂಪಿಎಂ, ಮುಖ್ಯ ಅರಣ್ಯಾಧಿಕಾರಿ, ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯಾಧಿಕಾರಿಯನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಜೂನ್ 28ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಿ ಜುಲೈ 16ಕ್ಕೆ ವಿಚಾರಣೆ ಮುಂದೂಡಿದೆ.

ಬೃಹತ್ ಯಂತ್ರಗಳಿಂದ ಭೂಮಿ ಉಳುಮೆ ಮಾಡಿ ಭೂಮಿಯ ಫಲವತ್ತತೆ ಹಾಳುಗೆಡವಿ ಸ್ವಾಭಾವಿಕ ಸಸ್ಯಗಳನ್ನು ನಾಶ ಮಾಡುವುದರಿಂದ ನೈಸರ್ಗಿಕ ಅರಣ್ಯ ನಾಶವಾಗಲಿದೆ. ಹೀಗಾಗಿ ಎಂಪಿಎಂ ನೆಡುತೋಪು ಅವೈಜ್ಞಾನಿಕ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಇಲ್ಲಿ ಅಕೇಶಿಯಾ, ನೀಲಗಿರಿ ಗಿಡಗಳನ್ನು ಬೆಳೆಸುವುದು ಬೇಡ. ಇದರಿಂದ ಭೂಮಿ ಸತ್ವ ಕಳೆದುಕೊಳ್ಳುತ್ತದೆ. ಜೊತೆಗೆ ಗ್ರಾಮದಲ್ಲಿನ ಜಾನುವಾರು ಹಾಗೂ ಪ್ರಾಣಿ, ಪಕ್ಷಿಗಳ ಆಹಾರಕ್ಕೂ ಆ ಗಿಡ–ಮರಗಳು ಒಗ್ಗುವುದಿಲ್ಲ ಎಂಬುದನ್ನು ಅರ್ಜಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT