ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಗನ್ನಡ ಕಾವ್ಯದಲ್ಲಿ ಮನುಷ್ಯ ಧರ್ಮಕ್ಕೆ ಪ್ರಾಮುಖ್ಯತೆ: ಕೃಷ್ಣಮೂರ್ತಿ ಹನೂರು

Published 24 ಅಕ್ಟೋಬರ್ 2023, 13:47 IST
Last Updated 24 ಅಕ್ಟೋಬರ್ 2023, 13:47 IST
ಅಕ್ಷರ ಗಾತ್ರ

ಸಾಗರ: ಮನುಷ್ಯ ಧರ್ಮವೇ ದೊಡ್ಡದು ಎಂಬ ಧೋರಣೆ ಹಳೆಗನ್ನಡ ಕಾವ್ಯದಲ್ಲಿ ಪ್ರಧಾನವಾಗಿದೆ. ಧರ್ಮದ ವಿಷಯ ಬಂದಾಗಲೆಲ್ಲಾ ಮನುಷ್ಯ ಧರ್ಮಕ್ಕೆ ಪ್ರಾಮುಖ್ಯತೆ ನೀಡಿರುವುದನ್ನು ಹಳೆಗನ್ನಡ ಕಾವ್ಯದಲ್ಲಿ ಗುರುತಿಸಬಹುದು ಎಂದು ಲೇಖಕ ಕೃಷ್ಣಮೂರ್ತಿ ಹನೂರು ಹೇಳಿದರು.

ಸಮೀಪದ ಹೆಗ್ಗೋಡಿನಲ್ಲಿ ನೀನಾಸಂ ಸಂಸ್ಥೆ ಆಯೋಜಿಸಿರುವ ‘ಕಲೆಗಳ ಸಂಗಡ ಮಾತುಕತೆ’ ಕಾರ್ಯಕ್ರಮದಲ್ಲಿ ಹಳೆಗನ್ನಡ ಕಾವ್ಯದ ‘ಉದ್ಯೋಗ ಪರ್ವ’ ಕುರಿತು ಅವರು ಸೋಮವಾರ ಉಪನ್ಯಾಸ ನೀಡಿದರು.

ಭಕ್ತಿ, ಯುಕ್ತಿ, ಉಪಾಯ, ಪರಾಕ್ರಮ, ಶಕ್ತಿ, ಬದುಕಿನ ತೊಳಲಾಟಗಳು ಹಾಗೂ ಅದರಿಂದ ಹೊರ ಬರುವ ಮಾರ್ಗಗಳ ಮೇಲೆ ಹಳೆಗನ್ನಡ ಕಾವ್ಯ ಬೆಳಕು ಚೆಲ್ಲಿದೆ. ಅಧಿಕಾರಸ್ಥರ ದ್ವಂದ್ವಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರೂಪಿಸಿರುವುದನ್ನು ಉದ್ಯೋಗ ಪರ್ವ ಸೇರಿದಂತೆ ಹಲವು ಹಳೆಗನ್ನಡ ಕಾವ್ಯಗಳಲ್ಲಿ ಕಾಣಬಹುದು ಎಂದು ಅವರು ತಿಳಿಸಿದರು.

ಪ್ರಭುತ್ವದ ಜೊತೆಗಿದ್ದುಕೊಂಡು ಪ್ರಭುತ್ವವನ್ನು ವಿಮರ್ಶಿಸುವ ನಿಲುವನ್ನು ಹಳೆಗನ್ನಡ ಕಾವ್ಯದ ಕವಿಗಳು ಹೊಂದಿರುವುದನ್ನು ಹಲವೆಡೆ ಗುರುತಿಸಬಹುದು. ಯುದ್ಧದ ವಿವರಗಳನ್ನು ವಿಜೃಂಭಿಸುತ್ತಲೇ ಯುದ್ಧ ವಿರೋಧಿ ನೀತಿ ತಾಳುವುದು ಹಳೆಗನ್ನಡ ಕಾವ್ಯದ ವೈಶಿಷ್ಟ್ಯವಾಗಿದೆ ಎಂದು ಅವರು ವಿಶ್ಲೇಷಿಸಿದರು.

ಇತಿಹಾಸವು ಯುದ್ಧವನ್ನು ಕೇವಲ ಪರಾಕ್ರಮದ ದೃಷ್ಟಿಕೋನದಲ್ಲಿ ನೋಡುತ್ತದೆ. ಆದರೆ ಯುದ್ಧದ ದುರಂತವನ್ನು ವಿಭಿನ್ನ ನೋಟದ ಮೂಲಕ ಗ್ರಹಿಸುವ ಕ್ರಮ ನಮ್ಮ ಜಾನಪದ ಪರಂಪರೆಯಲ್ಲಿದೆ. ಇದೇ ರೀತಿ ಯುದ್ಧವನ್ನು ಸಾಮಾಜಿಕ ನೆಲೆಯಲ್ಲಿ ನೋಡುವ ಪ್ರಯತ್ನವನ್ನು ಹಳೆಗನ್ನಡ ಕವಿಗಳು ಮಾಡಿದ್ದಾರೆ ಎಂದು ಅವರು ವಿವರಿಸಿದರು.

ಪ್ರಖರ ವೈಚಾರಿಕತೆಯನ್ನು ಹಾಗೆಯೇ ಜನರ ಎದುರು ಇಟ್ಟರೆ ಅವರು ಅದನ್ನು ಸ್ವೀಕರಿಸುವುದು ಕಷ್ಟ ಎಂಬ ಅರಿವು 15ನೇ ಶತಮಾನದ ಹೊತ್ತಿಗೆ ಹಳೆಗನ್ನಡ ಕವಿಗಳಿಗೆ ಬಂದಿತ್ತು. ಈ ಕಾರಣಕ್ಕಾಗಿ ಕುಮಾರವ್ಯಾಸ ಭಕ್ತಿರಸದೊಂದಿಗೆ ವೈಚಾರಿಕತೆಯನ್ನು ಬೆಸೆಯುವ ಮಾರ್ಗ ಅನುಸರಿಸಿದ್ದ ಎಂದು ಹೇಳಿದರು.

ಜನ್ನ ಕವಿಯ ಯಶೋಧರ ಚರಿತೆ ಕುರಿತು ಮಾತನಾಡಿದ ಲೇಖಕಿ ತಮಿಳ್ ಸೆಲ್ವಿ, ಲೌಕಿಕ ಹಾಗೂ ಅಲೌಕಿಕ ಸಂಗತಿಗಳನ್ನು ಧಾರ್ಮಿಕ ನೆಲೆಗಟ್ಟಿನ ಮೇಲೆ ವಿವರಿಸಿರುವುದು ಯಶೋಧರ ಚರಿತೆಯ ವಿಶೇಷತೆಯಾಗಿದೆ. ಕನ್ನಡ ಸಾಹಿತ್ಯದಲ್ಲಿ ಮತ್ತೆ ಮತ್ತೆ ಚರ್ಚೆಯ ಮುನ್ನಲೆಗೆ ಬರುವ ಕುಲದ ಪ್ರಶ್ನೆ ಈ ಕಾವ್ಯದಲ್ಲೂ ಧ್ವನಿಸುತ್ತದೆ ಎಂದು ತಿಳಿಸಿದರು.

‘ತಲೆಯಲ್ಲಿ ಹುಟ್ಟುವ ಯುದ್ಧ ತಲೆಯನ್ನೆ ಬೇಡುತ್ತದೆ’: ಮುನುಷ್ಯನ ತಲೆಯಲ್ಲಿ ಹುಟ್ಟುವ ಯುದ್ಧ ಅಂತಿಮವಾಗಿ ಮನುಷ್ಯನ ತಲೆಯನ್ನೆ ಬೇಡುತ್ತದೆ ಎಂಬ ಹಳೆಗನ್ನಡ ಕಾವ್ಯದ ಸಾಲನ್ನು ಉಲ್ಲೇಖಿಸಿದ ಕೃಷ್ಣಮೂರ್ತಿ ಹನೂರು ಅವರು ‘ರಾಜಕಾರಣದ ವೈರಕ್ಕೆ ಹೇಗೆ ವೈರವೇ ಇಲ್ಲದ ಎಲ್ಲರೂ ಬಲಿಯಾಗುತ್ತಾರೆ ಎಂಬ ವಿದ್ಯಮಾನಕ್ಕೆ ಪಂಪ ವ್ಯಾಸ ಕುಮಾರವ್ಯಾಸ ಮುಖಿಮುಖಿಯಾಗಿದ್ದಾರೆ ಎಂಬುದನ್ನು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT