ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಜಾರರ ಸಮಗ್ರ ಅಭಿವೃದ್ಧಿಗೆ ಬದ್ಧ: ಯಡಿಯೂರಪ್ಪ

ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಯಡಿಯೂರಪ್ಪ
Last Updated 31 ಜನವರಿ 2023, 6:03 IST
ಅಕ್ಷರ ಗಾತ್ರ

ಶಿವಮೊಗ್ಗ: ಬಂಜಾರ ಸಮುದಾಯದ ಯಾರೊಬ್ಬರೂ ಗುಡಿಸಲಿನಲ್ಲಿ ವಾಸ ಮಾಡಬಾರದು. ಇದು ನಮ್ಮ ಸರ್ಕಾರದ ಭರವಸೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿನ ಬಾಲರಾಜ್ ಅರಸ್ ರಸ್ತೆಯ ಬಂಜಾರ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಸೋಮವಾರ ಭಾಗವಹಿಸಿ ಮಾತನಾಡಿದ ಅವರು, ‘ಲಂಬಾಣಿ ಸಮುದಾಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ತಾಂಡಾ ನಿಗಮ ಮಂಡಳಿ ಸ್ಥಾಪಿಸಲಾಗಿದೆ’ ಎಂದರು.

‘ಬಂಜಾರ ಸಮುದಾಯಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು 52,000 ಹಕ್ಕಪತ್ರ ವಿತರಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ 5,000 ಹಕ್ಕು ಪತ್ರ ವಿತರಿಸುವ ಯೋಜನೆ ರೂಪಿಸಲಾಗಿದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಅದೇ ರೀತಿ ಬಂಜಾರ ಸಮುದಾಯವನ್ನೂ ಕೂಡ ಮುಖ್ಯ ವಾಹಿನಿಗೆ ತರುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ನೀಡುವ ಉದ್ದೇಶ ಸರ್ಕಾರಕ್ಕೆ ಇದೆ’ ಎಂದು
ಹೇಳಿದರು.

‘ಇತಿಹಾಸ ಪುಟದಲ್ಲಿ ಬರೆದಿಡುವ ಕಾರ್ಯಕ್ರಮ ಇದು. ಕಷ್ಟದ ಬದುಕನ್ನು ಸಾಗಿಸುವ ಶ್ರಮ ಜೀವಿಗಳು ಬಂಜಾರ ಸಮುದಾಯದವರು. ಫೆ. 27 ರಂದು ಸೋಗಾನೆ ವಿಮಾನ ನಿಲ್ದಾಣ ಹಾಗೂ ಸೂರಗೊಂಡನಕೊಪ್ಪದಲ್ಲಿ ಭಾಯಾಘಡ್ ರೈಲ್ವೆ ನಿಲ್ದಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಿದ್ದಾರೆ’ ಎಂದು ಸಂಸದ ಬಿ.ವೈ ರಾಘವೇಂದ್ರ ಹೇಳಿದರು.

ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ‘ಬ್ರಿಟಿಷರ ಹಾಗೂ ಮೊಘಲರ ಜೊತೆ ವ್ಯಾಪಾರ ನಡೆಸುತ್ತಿದ್ದ ಜನಾಂಗ ಬಂಜಾರ ಸಮುದಾಯ. ಶ್ರೀಮಂತ ಸಂಸ್ಕೃತಿ ಹೊಂದಿರುವ ಸಮಾಜ ಬಂಜಾರ ಸಮುದಾಯ. ಸಮುದಾಯದಲ್ಲಿ ಪ್ರತಿ ಮಕ್ಕಳಿಗೂ ಶಿಕ್ಷಣ ಕೊಡಿಸುವ ಕೆಲಸ ಆಗಲಿ’ ಎಂದರು.

ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಮಾತನಾಡಿ, ‘ಬಂಜಾರ ಸಮುದಾಯದವರು ಎಲ್ಲಾ ಕ್ಷೇತ್ರದಲ್ಲೂ ಮುಂದೆ ಇದ್ದಾರೆ. ಆದರೆ ಅವರಿಗೆ ಸರಿಯಾದ ಪ್ರಮಾಣದಲ್ಲಿ ಸಹಕಾರ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಬಂಜಾರ ಸಮುದಾಯದ ಜೊತೆ ನಿಲ್ಲಲಿದೆ’ ಎಂದರು.

ವಿಧಾನ ಪರಿಷತ್ ಶಾಸಕ ಆಯನೂರು ಮಂಜುನಾಥ್ ಮಾತನಾಡಿ, ‘ಬಂಜಾರ ಸಮುದಾಯದ ಸಂಸ್ಕೃತಿಯನ್ನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಇವರು ಕೇವಲ ಅಲೆಮಾರಿಗಳಲ್ಲ. ಅವರಲ್ಲಿಯೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಯಾವುದೇ ಕವಿಗಳಿಗೂ ಬಂಜಾರ ಸಮುದಾಯದವರು ಕಡಿಮೆ ಇಲ್ಲ. ಸ್ಥಳದಲ್ಲಿಯೇ ಪದ ಕಟ್ಟಿ ಹಾಡುವ ಕೌಶಲ ಅವರಲ್ಲಿ ಇದೆ’ ಎಂದರು.

ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಸ್ ಗುರುಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್ ‍ಷಡಕ್ಷರಿ, ಮಹಾನಗರ ಪಾಲಿಕೆ ಸದಸ್ಯರಾದ ಸುರೇಖಾ ಮುರುಳೀಧರ್, ಆರ್.ಸಿ ನಾಯ್ಕ, ಬೆಂಗಳೂರು ಉಗ್ರಾಣ ನಿಗಮ ಅಧ್ಯಕ್ಷ ವಿ.ಎಸ್. ಬಳಿಗಾರ್, ಬಂಜಾರ ಸಂಘ ಅಧ್ಯಕ್ಷ ರಾಮನಾಯ್ಕ, ನಿರ್ದೇಶಕರಾದ ಬೋಜ್ಯಾ ನಾಯ್ಕ್, ಈರಾ ನಾಯ್ಕ, ಜಯ ನಾಯ್ಕ ಸೇರಿದಂತೆ ಸಮುದಾಯದ ಮುಖಂಡರು
ಇದ್ದರು.

ಬ್ಯಾನರ್ ವಿಚಾರವಾಗಿ ವಾಗ್ವಾದ

ಬಂಜಾರ ಸಮುದಾಯದ ಕಾರ್ಯಕ್ರಮದಲ್ಲಿ ಶಾಸಕ ಅಶೋಕ್ ನಾಯ್ಕ್ ಅವರದ್ದೇ ಹೆಚ್ಚಿನ ಬ್ಯಾನರ್ ಹಾಕಲಾಗಿದೆ. ಸೇವಾಲಾಲ್ ಭಾವಚಿತ್ರಗಳನ್ನು ಗಡೆಗಣಿಸಲಾಗಿದೆ. ಸಮುದಾಯದ ಕಾರ್ಯಕ್ರಮವನ್ನು ರಾಜಕೀಯ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಬಂಜಾರ ಸಮುದಾಯದ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಮಧ್ಯ ಪ್ರವೇಶಿಸಿ ಎಲ್ಲರನ್ನು ಸಮಾಧಾನ ಪಡಿಸಿದರು. ಜಿಲ್ಲೆಯ ವಿವಿಧೆಡೆಯಿಂದ ಬಂಜಾರ ಸಮುದಾಯದವರು ಮಧ್ಯಾಹ್ನ ಊಟದ ವ್ಯವಸ್ಥೆ ಇಲ್ಲದೆ ಪರದಾಡಿದರು. ಸಂಜೆ 5 ಗಂಟೆಗೆ ಊಟದ ವ್ಯವಸ್ಥೆ ಕಲ್ಪಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT