ಶುಕ್ರವಾರ, ಸೆಪ್ಟೆಂಬರ್ 24, 2021
23 °C
ಜನಾಶೀರ್ವಾದ ಯಾತ್ರೆಗೆ ಕೋವಿಡ್‌ ಹೆದರುತ್ತಾ: ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನೆ

ಗಣೇಶೋತ್ಸವ ಮಾಡಿದರಷ್ಟೇ ಕೊರೊನಾ ಬರುತ್ತಾ?: ಗೋಪಾಲಕೃಷ್ಣ ಬೇಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ‘ಬಿಜೆಪಿ ನಾಯಕರು ಯಾತ್ರೆಗಳ ಹೆಸರಲ್ಲಿ ಸಾವಿರಾರು ಜನರನ್ನು ಸೇರಿಸಿ ಸಮಾರಂಭ ಮಾಡಿದರೆ ಕೊರೊನಾ ಬರುವುದಿಲ್ಲ. ನೂರಾರು ಜನ ಸೇರಿ ಗಣೇಶೋತ್ಸವ ಮಾಡಿದರೆ ಕೊರೊನಾ ಬರುತ್ತದೆಯೇ’ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಪ್ರಶ್ನಿಸಿದರು.

ಜನಾಶೀರ್ವಾದ ಯಾತ್ರೆಯಲ್ಲಿ ಸಾವಿರಾರು ಜನರನ್ನು ಸೇರಿಸಿದರು. ಆಗ ಯಾರಿಗೂ ಕೊರೊನಾ ಬರಲಿಲ್ಲ. ಅದೇ ಬೇರೆಯವರು ಮಾಡಿದರೆ ಮಾತ್ರ ಕೊರೊನಾ ಬರುತ್ತೆ. ಸಭೆ, ಸಮಾರಂಭಗಳಿಗೆ ಇಲ್ಲದ ನಿರ್ಬಂಧ ಗಣೇಶೋತ್ಸವಕ್ಕೆ ಏಕೆ? ಕೊನೆಪಕ್ಷ ಒಂದು ದಿನದ ಗಣೇಶೋತ್ಸವಕ್ಕಾದರೂ ಸರ್ಕಾರ ಅನುಮತಿ ನೀಡಬೇಕು’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಒಂದೊತ್ತಿನ ಊಟಕ್ಕೂ ಪರದಾಡುತ್ತಿರುವ ಬಡ ವರ್ಗದ ಜನರು ಈಗ ಸಾವಿರ ರೂಪಾಯಿ ಕೊಟ್ಟು ಅಡುಗೆ ಅನಿಲ ಖರೀದಿಸಬೇಕಾದ ಪರಿಸ್ಥಿತಿ ಬಂದಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆಯೂ ಗನನಕ್ಕೇರಿದೆ. ಜನರನ್ನು ಕಷ್ಟದ ಕೂಪಕ್ಕೆ ನೂಕಿ ಈಗ ಅವರ ಆಶೀರ್ವಾದ ಪಡೆಯಲು ಕಾರ್ಯಕ್ರಮ ಮಾಡುತ್ತಿದ್ದಾರೆ ಎಂದು ಛೇಡಿಸಿದರು.

ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಅಡುಗೆ ಅನಿಲ ಬೆಲೆ ಏರಿಕೆ ₹ 5 ಮಾಡಿದ್ದಕ್ಕೆ ಬೀದಿಗಿಳಿದ ಬಿಜೆಪಿ ನಾಯಕರು ಈಗ ₹ 50 ಏರಿಕೆಯಾದರೂ ಯಾರೊಬ್ಬರೂ ತುಟಿ ಬಿಚ್ಚುತ್ತಿಲ್ಲ. ರಾಜ್ಯದಲ್ಲಿ ಸರ್ಕಾರ ಬಿದ್ದು ಹೋಗಿದೆ. ಎರಡು ವರ್ಷಗಳಿಂದ ನೆರೆ ಪರಿಹಾರ ಬಿಡುಗಡೆಯಾಗಿಲ್ಲ. ರೈತರ ಮುರಿದು ಬಿದ್ದ ಕೊಟ್ಟಿಗೆಗಳು ಸರಿಯಾಗಿಲ್ಲ. ಬಿದ್ದ ಮನೆಗಳನ್ನು ಕಟ್ಟಲಾಗುತ್ತಿಲ್ಲ. ಎಷ್ಟೋ ಜನ ಜೀವ ಕಳೆದುಕೊಂಡಿದ್ದಾರೆ. ಪರಿಹಾರ ನೀಡುವ ಸರ್ಕಾರದ ಆದೇಶ ಕಾಗದದಲ್ಲೇ ಇದೆ ಎಂದು ದೂರಿದರು.

‘ಸಚಿವ ಸಿ.ಟಿ.ರವಿ ಅವರಿಗೆ ನೆಹರೂ ಕುಟುಂಬದ ಬಗ್ಗೆ ಮಾತನಾಡುವ ಯೋಗ್ಯತೆ ಇಲ್ಲ. ಈತ ಮಾತನಾಡಬೇಕು ಎಂದರೆ, ಅವರ ಪಕ್ಷದವರ ಘನ ಕಾರ್ಯಗಳನ್ನು ನೆನಪಿಸಿಕೊಳ್ಳಲಿ. ಸದನದಲ್ಲಿ ನೀಲಿಚಿತ್ರ ವೀಕ್ಷಿಸಿದವರ ಬಗ್ಗೆ ಮಾತನಾಡಲಿ. ಜಾರಕಿಹೊಳಿ ನೆನಪು ಮಾಡಿಕೊಳ್ಳಲಿ, ಸ್ನೇಹಿತನ ಮನೆಗೆ ಹೋಗಿ ಅತ್ಯಾಚಾರ ಮಾಡಿದವರ ಕುರಿತು ಧ್ವನಿ ಎತ್ತಲಿ’ ಎಂದು ಹರಿಹಾಯ್ದರು.

ಸಾಗರ ಈಗ ಕುಡುಕರ ಸಾಮ್ರಾಜ್ಯ

‘ಸಾಂಸ್ಕೃತಿಕ ನಾಡಾಗಿದ್ದ ಸಾಗರವನ್ನು ಶಾಸಕರು ಕುಡುಕರ ಸಾಮ್ರಾಜ್ಯ ಮಾಡಲು ಹೊರಟಿದ್ದಾರೆ. ಸಾಗರ ಪಟ್ಟಣದಲ್ಲಿ ಮೂಲೆ ಮೂಲೆಯಲ್ಲಿ ಬಾರ್‌ಗಳು ನಿರ್ಮಾಣವಾಗಿವೆ. ಗಾಂಜಾ, ಮಟ್ಕಾ ದಂಧೆ ಕಡಿವಾಣಕ್ಕೆ ಸಿಗದಂತಾಗಿದೆ. ಪೊಲೀಸರು ಇದೆಲ್ಲ ನೋಡಿಕೊಂಡು ಸುಮ್ಮನಿದ್ದಾರೆ. ಜಿಲ್ಲೆಗೆ ಬಂದಿರುವ ಎಸ್‌ಪಿ ಯಾರ ಕಡೆಯವರು ಎಂದು ಕೇಳುವ ಪರಿಸ್ಥಿತಿ ಬಂದಿದೆ’ ಎಂದು ವಿಷಾದಿಸಿದರು.

ಬೆಲೆ ಏರಿಕೆಗೆ ಹಿಂದಿನ ಸರ್ಕಾರದ ಸಾಲ ಕಾರಣವಲ್ಲ. ಎರಡು ವರ್ಷ ಮುಖ್ಯಮಂತ್ರಿಯಾಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಈಗ ಅಧಿಕಾರದಿಂದ ಕೆಳಗಿಳಿದಿದ್ದಾರೆ. ಅವರನ್ನೇ ಕೇಳಲಿ ಎಷ್ಟು ಸಾಲ ಮಾಡಿದ್ದಾರೆ ಎಂದು ಗೊತ್ತಾಗುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಗಿರೀಶ್, ಸಾಗರದ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಚಿನ್ಮಯ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು