ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲೆಗಳ ಆಧುನೀಕರಣ ರೈತರ ಜಮೀನುವರೆಗೆ ಇರಲಿ

ಭದ್ರಾವತಿ: ಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಎಚ್.ಆರ್.ಬಸವರಾಜಪ್ಪ ಒತ್ತಾಯ
Last Updated 28 ಜುಲೈ 2022, 4:56 IST
ಅಕ್ಷರ ಗಾತ್ರ

ಭದ್ರಾವತಿ: ‘ಭದ್ರಾ ಜಲಾಶಯದ ನಾಲೆಗಳ ಆಧುನೀಕರಣ ಕಾಮಗಾರಿ ನಡೆಯದೆ ನೀರು ಪೋಲಾಗುತ್ತಿದೆ. ಹಾಗಾಗಿ, ರೈತರ ಜಮೀನುಗಳವರೆಗೆ ಉಪಕಾಲುವೆಗಳ ನಿರ್ಮಾಣಕ್ಕೆ ಅಂದಾಜು ವೆಚ್ಚಪಟ್ಟಿ ಸಿದ್ಧಪಡಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಡಿ’ ಎಂದು ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಒತ್ತಾಯಿಸಿದರು.

ಭದ್ರಾ ಜಲಾಶಯಕ್ಕೆ ಮಂಗಳವಾರ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ‘ನಾಲೆಗಳ ಆಧುನೀಕರಣ ಸಮರ್ಪಕವಾದಲ್ಲಿ 12.5 ಟಿಎಂಸಿ ಅಡಿ ನೀರು ಉಳಿತಾಯವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಅಷ್ಟು ಪ್ರಮಾಣದ ನೀರು ಉಳಿತಾಯವಾಗಿಲ್ಲ. ಹೀಗಾಗಿ, ತುಂಗಾ ನದಿಯಿಂದಲೇ ಬಾಕಿ ನೀರು ಕೊಡುವ ಪ್ರಸ್ತಾವಕ್ಕೆ ಶಿಫಾರಸ್ಸು ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

‘ಬಯಲುಸೀಮೆ ಭಾಗಕ್ಕೆ ನೀರು ಹರಿಸಲು ನಮ್ಮ ವಿರೋಧವಿಲ್ಲ. ಆದರೆ, ಅಣೆಕಟ್ಟು ತುಂಬದೇ ಇರುವ ಸಂದರ್ಭದಲ್ಲಿ ನೀರಿನ ಅಭಾವ ಸೃಷ್ಟಿಯಾಗುತ್ತದೆ. ಹಾಗಾಗಿ ಹೊಸ ಡಿಪಿಆರ್ ಮೂಲಕ ತುಂಗಾ ನದಿಯಿಂದ 12.5 ಟಿಎಂಸಿ ನೀರೆತ್ತಿಕೊಡುವ ಪ್ರಸ್ತಾವದ ಅಗತ್ಯವಿದೆ’ ಎಂದರು.

‘ಪ್ರಸಕ್ತ ವರ್ಷ ಜಲಾಶಯ ಬಹಳ ಬೇಗನೆ ತುಂಬಿದೆ. ಇದರಿಂದಾಗಿ ಸುಮಾರು 2,60,000 ಎಕರೆ ಪ್ರದೇಶದ ಬೆಳೆಗಳು ಸಮೃದ್ಧವಾಗಿವೆ. ಕೃಷಿಕರು ನೀರನ್ನು ಪೋಲು ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು. ಈ ಸಂಕಲ್ಪದೊಂದಿಗೆ ಬಾಗಿನ ಸಮರ್ಪಣೆ ಮಾಡಲಾಗಿದೆ’ ಎಂದರು.

ರೈತ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಎಂ.ಚಂದ್ರಪ್ಪ, ಜಿಲ್ಲಾ ಗೌರವಾಧ್ಯಕ್ಷ ಈಶಣ್ಣ, ಜಿಲ್ಲಾಧ್ಯಕ್ಷ ಶಿವಮೂರ್ತಿ, ಇ.ಬಿ.ಜಗದಿಶ್, ಕೆ.ರಾಘವೇಂದ್ರ, ಎಂ.ಮಹೇಶ್ವರಪ್ಪ, ಎಂ.ಡಿ.ನಾಗರಾಜ್ ಮಳವಳ್ಳಿ, ಸಿ.ಚಂದ್ರಪ್ಪ, ಜಿ.ಎನ್.ಪಂಚಾಕ್ಷರಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT