ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಬದಲಾವಣೆಯ ಪರ್ವಕ್ಕೆ ಮೋದಿ ನಾಂದಿ: ಬಿ.ವೈ.ವಿಜಯೇಂದ್ರ ಬಣ್ಣನೆ

ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ
Last Updated 17 ಸೆಪ್ಟೆಂಬರ್ 2021, 9:14 IST
ಅಕ್ಷರ ಗಾತ್ರ

ಶಿವಮೊಗ್ಗ: ನರೇಂದ್ರ ಮೋದಿ ಅವರು ದೇಶದ ಪ್ರಧಾನಿಯಾದ ಮೇಲೆ ಭಾರತದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಅವರ ಜನಪ್ರಿಯತೆ ಸಹಿಸದ ಕಾಂಗ್ರೆಸ್ ಅನಗತ್ಯ ಟೀಕೆ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಬಣ್ಣಿಸಿದರು.

ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮೋದಿ ಅವರ 71ನೇ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪಕ್ಷದ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಅವರು ಮಾತನಾಡಿದರು.

ಮೋದಿ ಅವರು ದೇಶದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ರಾಮ ಮಂದಿರ ನಿರ್ಮಾಣ, ಕಾಶ್ಮೀರದಲ್ಲಿ ಉಗ್ರರರನ್ನು ಮಣಿಸಿದರು. 370ನೇ ವಿಧಿ ತೆಗೆದು ಹಾಕಿದರು ಕೊರೊನಾದಂತಹ ಸಂದಿಗ್ಧ ಸಮಯದಲ್ಲೂ ಜಗತ್ತೇ ಅಚ್ಚರಿಪಡುವಷ್ಟು ಉಚಿತ ಲಸಿಕೆ ನೀಡಿದ್ದಾರೆ. ಅವರ ಆಡಳಿತದಲ್ಲಿ ಇವೆಲ್ಲ ವಿಸ್ಮಯ ಮೂಡಿಸಿವೆ. ಹಾಗಾಗಿ ಮೋದಿ ಒಬ್ಬರು ಸಂತ ಎಂದು ಬಣ್ಣಿಸಿದರು.

ಮೋದಿಯವರ ಜನಪ್ರಿಯತೆ ಸಹಿಸದ ಕಾಂಗ್ರೆಸ್‌ ವಿನಾಕಾರಣ ದೂಷಣೆ ಮಾಡುತ್ತಿದೆ. ರಾಹುಲ್ ಗಾಂಧಿ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಬಿಜೆಪಿಯಯದು ನಾಟಕದ ಹಿಂದುತ್ವ ಎಂದು ಹೇಳಿದ್ದಾರೆ. ಈ ದೇಶದ ಜನರಿಗೆ ಯಾರು ನಾಟಕ ಮಾಡುತ್ತಾರೆ ಎಂದು ಗೊತ್ತಿದೆ. ಅಧಿಕಾರ ಕಳೆದುಕೊಂಡು ಹಪಹಪಿಸುತ್ತಿರುವ ಕಾಂಗ್ರೆಸ್ ತಿರುಕನ ಕನಸು ಕಾಣುತ್ತಿದೆ. ವ್ಯಕ್ತಿ ಒಂದು ಶಕ್ತಿಯಾಗುವುದು ಸಹಿಸಲು ಅವರಿಗೆ ಆಗುತ್ತಿಲ್ಲ ಎಂದು ಕುಟುಕಿದರು.

ಪ್ರಾಸ್ತಾವಿಕ ಮಾತನಾಡಿದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಇಡೀ ದಿನ ಹಲವು ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗಿದೆ. ಮೋದಿ ಅವರ ಸಾಧನೆ ತಿಳಿಸುವುದು. ಕಾರ್ಯಕರ್ತರಲ್ಲಿ ಸಂಘಟನೆ ಮನೋಭಾವ ಬೆಳೆಸುವುದು, ಅಭಿವೃದ್ಧಿಯ ಅನುಕರಣೆ ಮಾಡಲು ಪ್ರೋತ್ಸಾಹ ನೀಡಲು ಜಿಲ್ಲೆಯಾದ್ಯಂತ ಕಾರ್ಯಕ್ರಮ ಮುಂದುವರಿಯಲಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ,ಮಾಜಿ ಸದಸ್ಯ ಆರ್.ಕೆ.ಸಿದ್ಧರಾಮಣ್ಣ, ಗಿರೀಶ್ ಪಟೇಲ್, ‘ಸೂಡಾ’ ಅಧ್ಯಕ್ಷ ಎಸ್‌.ಎಸ್‌.ಜ್ಯೋತಿಪ್ರಕಾಶ್, ‘ಕಾಡಾ’ ಅಧ್ಯಕ್ಷೆ ಪವಿತ್ರಾರಾಮಯ್ಯ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್‌.ದತ್ತಾತ್ರಿ, ರಾಜ್ಯ ಆರ್ಯವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಮೇಯರ್ ಸುನಿತಾ ಅಣ್ಣಪ್ಪ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT