ಶುಕ್ರವಾರ, ಮೇ 20, 2022
19 °C
ಮಹಿಳಾ ದಿನಾಚರಣೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಶ್ಲಾಘನೆ

ಉದ್ಯೋಗಸ್ಥರಿಗೆ ವರವಾದ ಶಿಶುಪಾಲನಾ ರಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಇತಿಹಾಸದಲ್ಲೇ ಮೊದಲ ಬಾರಿ ಸರ್ಕಾರಿ ಉದ್ಯೋಗದಲ್ಲಿರುವ ಮಹಿಳೆಯರಿಗೆ ಶಿಶುಪಾಲನಾ ರಜೆ ದೊರಕಿಸಿದ ಕೀರ್ತಿ ನೌಕರರ ಸಂಘಕ್ಕೆ ಸಲ್ಲುತ್ತದೆ. ವಿಶ್ವವನ್ನೇ ಆಳುವ ಮಟ್ಟಕ್ಕೆ ಪ್ರಗತಿ ಸಾಧಿಸಿದ ಮಹಿಳೆಯರ ತೊಟ್ಟಿಲು ತೂಗುವ ಕೈ ಬಲಪಡಿಸಲು ಹೊಸ ಮಾದರಿ ರಜೆ ವರದಾನವಾಗಿದೆ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಎಂದು ಸಂತಸ ವ್ಯಕ್ತಪಡಿಸಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘ ಮಂಗಳವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪುರುಷ ಪ್ರಧಾನ ವ್ಯವಸ್ಥೆಯಲ್ಲೂ ಮಹಿಳೆಯರು ಆಳ್ವಿಕೆ ಮಾಡುವ ಮೂಲಕ ಹೆಸರು ಮಾಡಿದ್ದರು. ಕೆಳದಿ ಚೆನ್ನಮ್ಮ, ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಝಾನ್ಸಿರಾಣಿ ಲಕ್ಷ್ಮೀಬಾಯಿ ಯಾವ ರಾಜರಿಗೂ ಕಡಿಮೆ  ಇಲ್ಲದಂತೆ ರಾಜ್ಯಭಾರ ಮಾಡಿದ್ದಾರೆ. ಸೇವಾ ಕ್ಷೇತ್ರದಲ್ಲಿ ಮದರ್‌ ಥೆರೆಸಾ, ಶಿಕ್ಷಣದಲ್ಲಿ ಸಾವಿತ್ರಿಬಾಯಿಫುಲೆ, ಖಗೋಳ ವಿಜ್ಞಾನದಲ್ಲಿ ಕಲ್ಪನಾ ಚಾವ್ಲಾ ಅವರು ಅಜರಾಮರರಾಗಿದ್ದಾರೆ. ಇಂದು ಮಹಿಳೆಯರು ಪುರುಷರಿಗೆ ಎಲ್ಲ ಕ್ಷೇತ್ರಗಳಲ್ಲೂ ಪೈಪೋಟಿ ನೀಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

‘ಇದೇ ಪ್ರಥಮ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ಸಂಘದಿಂದ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ. ಅದಕ್ಕಾಗಿ ಜಿಲ್ಲಾಧಿಕಾರಿಗಳು ಮಹಿಳಾ ಸಿಬ್ಬಂದಿಗೆ ಅನ್ಯ ಕಾರ್ಯ ನಿಮಿತ್ತ (ಒಒಡಿ) ನೀಡಿದ್ದಾರೆ. ಜಿಲ್ಲೆಯ ಸರ್ಕಾರಿ ಮಹಿಳಾ ನೌಕರರೂ ಕ್ರೀಡೆ, ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ದೇಶದಲ್ಲಿ ಮಹಿಳೆಯರಿಗೆ ಕೊಡುತ್ತಿರುವಷ್ಟು ವಿಶೇಷ ಗೌರವ ಜಗತ್ತಿನ ಯಾವ ರಾಷ್ಟ್ರದಲ್ಲೂ ಇಲ್ಲ. ದೇಶ ರಕ್ಷಣೆ ಮಾಡುವಲ್ಲೂ ಮಹಿಳೆಯರ ಪಾತ್ರ ಪ್ರಮುಖವಾಗಿದೆ. ಭಾರತದಲ್ಲಿ ಮಹಿಳೆಯನ್ನು ತಾಯಿ ಎಂದು ಕರೆಯಲಾಗುತ್ತಿದೆ. ತಾಯಿ ಎಂಬ ಪದಕ್ಕೆ ಆಳವಾದ, ವಿಶಾಲವಾದ ಅರ್ಥವಿದೆ ಎಂದು ಬಣ್ಣಿಸಿದರು.

‘ಭಾರತ, ಪಾಕಿಸ್ತಾನದ ಮಧ್ಯೆ ಯುದ್ಧ ನಡೆದಾಗ ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿಯವರು ‘ನಮ್ಮ ದೇಶ ಯುದ್ಧದಲ್ಲಿ ಗೆಲುವು ಸಾಧಿಸಲಿದೆ.  ದೇಶದ ಪ್ರಧಾನಿ ಇಂದಿರಾಗಾಂಧಿ ಅವರು ದುರ್ಗಿಯಂತೆ ಮುನ್ನುಗುತ್ತಿದ್ದಾರೆ. ಅವರೊಂದಿಗೆ ಎಲ್ಲರೂ ಜೊತೆಗೂಡೋಣ. ಶತ್ರುಸೈನ್ಯ ಮಟ್ಟಹಾಕೋಣ’ ಎಂದು ರಾಜಕೀಯ ಮರೆತು ಮಹಿಳಾ ಪ್ರಧಾನಿಯನ್ನು ಶ್ಲಾಘಿಸಿದ್ದರು. ಇದು ದೇಶದ ಜನರು ಮಹಿಳೆಯರಿಗೆ ಕೊಡುವ ಗೌರವ’ ಎಂದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮತ್ತೂರಿನ ಎಚ್.ಆರ್. ಕೇಶವಮೂರ್ತಿ, ವಾಗ್ಮಿ ಇಂದುಮತಿ ಸಾಲಿಮಠ್‌ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾಧಿಕಾರಿ ಆರ್‌. ಸೆಲ್ವಮಣಿ, ನೌಕರರ ಸಂಘದ ಬೆಂಗಳೂರು ವಿಭಾಗದ ಉಪಾಧ್ಯಕ್ಷ ಮೋಹನ್ ಕುಮಾರ್, ಧನಲಕ್ಷ್ಮೀ, ಸುಖಿತಾ, ಮಾಲತಿ, ಕೃಷ್ಣಮೂರ್ತಿ, ಮೋಹನ್‌ಕುಮಾರ್, ಪಾಪಣ್ಣ, ಅರುಣ್‌ಕುಮಾರ್ ಉಪಸ್ಥಿತರಿದ್ದರು.

ಕುವೆಂಪು ರಂಗಮಂದಿರದಲ್ಲಿ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಂತರ ‘ಮಾತೆ ಮಂಡೋದರಿ’ ನಾಟಕ ಪ್ರದರ್ಶನಗೊಂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.