ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಡೇಶ್ವರಿ ದೇವಾಲಯದ ಪೂಜಾ ಹಕ್ಕಿನ ವಿವಾದ: ಧರ್ಮದರ್ಶಿ ವಿರುದ್ಧ ದಾವೆ

ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲು ಏರಿದ ಸಿಗಂದೂರು ದೇವಾಲಯದ ವಿವಾದ
Last Updated 24 ಸೆಪ್ಟೆಂಬರ್ 2022, 5:59 IST
ಅಕ್ಷರ ಗಾತ್ರ

ಸಾಗರ: ನವರಾತ್ರಿ ಉತ್ಸವ ಸಮೀಪಿಸುತ್ತಿರುವ ಬೆನ್ನಲ್ಲೇ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಸಿಗಂದೂರು ಚೌಡೇಶ್ವರಿ ದೇವಾಲಯದ ಪೂಜಾ ಹಕ್ಕಿನ ವಿವಾದ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲು ಏರಿದೆ.

ವಂಶಪಾರಂಪರ್ಯ ಹಕ್ಕಿ ನಿಂದ ನಾವು ಸಿಗಂದೂರು ಚೌಡೇಶ್ವರಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದು, ನಿತ್ಯ ಪೂಜೆ, ವಿಶೇಷ ಪೂಜೆ, ನವರಾತ್ರಿ ಪೂಜೆ, ಚಂಡಿಕಾ ಯಾಗ, ಪ್ರಸಾದ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಗಳಿಗೆ ಅಡ್ಡಿ ಆತಂಕ ಉಂಟು ಮಾಡಬಾರದು ಎಂದು ಅರ್ಚಕ ಎಸ್.ಪಿ.ಶೇಷಗಿರಿ ಭಟ್ ಖಾಯಂ ಪ್ರತಿಬಂಧಕಾಜ್ಞೆ ಪರಿಹಾರ ಕೋರಿ ಧರ್ಮದರ್ಶಿ ರಾಮಪ್ಪ ಅವರ ವಿರುದ್ಧ ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ಕಳೆದ ಸೆ. 20ರಂದು ದಾವೆ ಹೂಡಿದ್ದಾರೆ.

2020ನೇ ಸಾಲಿನ ನವರಾತ್ರಿಗೂ ಮುನ್ನ ಸಿಗಂದೂರು ದೇವಸ್ಥಾನದಲ್ಲಿ ಕೆಲವು ನಾಟಕೀಯ ಘಟನೆಗಳು ನಡೆದಿದ್ದು, ವಿವಾದ ಇಲ್ಲಿನ ಸಿವಿಲ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಆ ಸಂದರ್ಭದಲ್ಲಿ ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ ಅವರ ನಡುವೆ ರಾಜಿ ಸಂಧಾನದ ಮೂಲಕ ದಾವೆ ಇತ್ಯರ್ಥಗೊಂಡಿತ್ತು.

ಇದೀಗ ಮತ್ತೊಮ್ಮೆ ಶೇಷಗಿರಿ ಭಟ್ ಅವರು ತಮಗಿರುವ ಪೂಜೆಯ ಹಕ್ಕಿಗೆ ತೊಂದರೆ ಕೊಡಬಾರದು ಎಂದು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಶುಕ್ರವಾರ ನ್ಯಾಯಾಲಯದಲ್ಲಿ ಶೇಷಗಿರಿ ಭಟ್ ಹಾಗೂ ರಾಮಪ್ಪ ಅವರ ಪರ ವಕೀಲರು ವಾದ ಹಾಗೂ ಪ್ರತಿವಾದ ಮಂಡಿಸಿದರು.

ವಂಶಪಾರಂಪರ್ಯ ಶೇಷಗಿರಿ ಭಟ್ ಅವರಿಗೆ ಪೂಜೆಯ ಹಕ್ಕು ಲಭಿಸಿದೆ. ಸಾರ್ವಜನಿಕವಾದ ಸಿಗಂದೂರು ದೇವಾಲಯವನ್ನು ಖಾಸಗಿ ಸ್ವತ್ತು ಎಂಬಂತೆ ಬಿಂಬಿಸಲಾಗುತ್ತಿದೆ. ಹಣಬಲ, ಜನಬಲ ಬಳಸಿ ಶೇಷಗಿರಿ ಭಟ್ ಅವರ ಪೂಜೆಯ ಹಕ್ಕಿಗೆ ತೊಂದರೆ ನೀಡಲಾಗುತ್ತಿದೆ ಎಂದು ಅವರ ಪರ ವಕೀಲರು ವಾದ ಮಂಡಿಸಿದರು.

ಸಿಗಂದೂರು ದೇವಸ್ಥಾನದ ಸಂಪೂರ್ಣ ಜವಾಬ್ದಾರಿ ನೋಡಿಕೊಂಡು ಹೋಗುವಂತೆ ರಾಮಪ್ಪ ಅವರು ಶೇಷಗಿರಿ ಭಟ್ ಅವರಿಗೆ 2021ರ ಅಕ್ಟೋಬರ್ 15ರಂದು ನೀಡಿರುವ ಒಪ್ಪಿಗೆ ಪತ್ರವನ್ನು ಶೇಷಗಿರಿ ಭಟ್ ಪರ ವಕೀಲರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಸಿಗಂದೂರು ದೇವಾಲಯ ಖಾಸಗಿ ಟ್ರಸ್ಟ್‌ನ ಆಡಳಿತ ನಿರ್ವಹಣೆಗೆ ಒಳಪಟ್ಟಿದೆ. ಶೇಷಗಿರಿ ಭಟ್ ಅವರಿಗೆ ದೇವಸ್ಥಾನದಲ್ಲಿ ವಂಶಪಾರಿಕವಾಗಿ ಪೂಜೆಯ ಹಕ್ಕು ಇಲ್ಲ. ಆದಾಗ್ಯೂ ಅವರು ಅಲ್ಲಿ ಅರ್ಚಕರಾಗಿದ್ದಾರೆಯೇ ವಿನಾ ಪ್ರಧಾನ ಅರ್ಚಕರಲ್ಲ. ಅರ್ಚಕರಾಗಿ ಅವರ ಕಾರ್ಯವೈಖರಿ ಸಮರ್ಪಕವಾಗಿ ಇಲ್ಲದ ಕಾರಣ ಅರ್ಚಕ ಹುದ್ದೆಯಿಂದ ತೆರವುಗೊಳಿಸಬಹುದು ಎನ್ನುವ ಭೀತಿಯಿಂದ ಸುಳ್ಳು ಸಂಗತಿಗಳನ್ನು ನಿರೂಪಿಸಿ ನ್ಯಾಯಾಲಯಕ್ಕೆ
ದಾವೆಯನ್ನು ಸಲ್ಲಿಸಿದ್ದಾರೆ ಎಂದು ರಾಮಪ್ಪ ಪರ ವಕೀಲರು ಪ್ರತಿಪಾದಿಸಿದರು.

‘ದೇವಸ್ಥಾನದ ಜವಾಬ್ದಾರಿಯನ್ನು ರಾಮಪ್ಪ ಅವರು ಶೇಷಗಿರಿ ಭಟ್ ಅವರಿಗೆ ವಹಿಸಿಕೊಟ್ಟಿರುವುದಾಗಿ ಹಾಜರುಪಡಿಸಿರುವ ದಾಖಲೆಯನ್ನು ಶೇಷಗಿರಿ ಭಟ್ ಸೃಷ್ಟಿ ಮಾಡಿಕೊಂಡಿ ದ್ದಾರೆ. ಇದು ನೈಜ ದಾಖಲೆಯಲ್ಲ’ ಎಂದು ರಾಮಪ್ಪ ಪರ ವಕೀಲರು ಹೇಳಿದರು.

ಈ ಹಿಂದೆ ನ್ಯಾಯಾಲಯದಲ್ಲಿ ನಡೆದ ರಾಜಿಯಂತೆ ರಾಮಪ್ಪ
ಅವರು ನಡೆದುಕೊಳ್ಳುತ್ತಿಲ್ಲ. ಶೇಷಗಿರಿ ಭಟ್ ಅವರು ದೇವಸ್ಥಾನದ
ಪ್ರಧಾನ ಅರ್ಚಕರು ಎಂಬುದಕ್ಕೆ
ದಾಖಲೆಗಳಿವೆ ಎಂದು ಅವರ ಪರ ವಕೀಲರು ಪ್ರತಿವಾದ ಮಂಡಿಸಿದರು.

ವಾದ ಆಲಿಸಿದ ನ್ಯಾಯಾಧೀಶರಾದ ಶ್ರೀಶೈಲ ಭೀಮಸೇನ ಬಗಾಡಿ ಅವರು ದಾವೆಯ ಮಧ್ಯಂತರ ಅರ್ಜಿಯ ಆದೇಶವನ್ನು ಸೆ. 26ಕ್ಕೆ ಕಾದಿರಿಸಿದ್ದಾರೆ. ಶೇಷಗಿರಿ ಭಟ್ ಪರವಾಗಿ ವಕೀಲ ರವೀಶ್ ಕುಮಾರ್, ರಾಮಪ್ಪ ಪರವಾಗಿ ವಕೀಲರಾದ ಬಿ.ನಾಗರಾಜ್, ಎಚ್.ಎನ್.ದಿವಾಕರ್, ಮಹಾಬಲೇಶ್ವರ್ ವಾದ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT