ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಾವತಿ ಹಿನ್ನೀರು ಬಳಸಿ ಕಡಿಮೆ ಖರ್ಚಿನ ಗೋಡಂಬಿ ಕೃಷಿ

ಕೃಷಿ ಭೂಮಿಯ ಅಂಚಿನಲ್ಲಿ 950 ಗೇರು ಸಸಿಗಳ ಪೋಷಣೆ
Last Updated 9 ಮಾರ್ಚ್ 2022, 7:31 IST
ಅಕ್ಷರ ಗಾತ್ರ

ತುಮರಿ: ರೈತರು ಕೃಷಿಯಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲೇ ಜಿಲ್ಲೆಯ ಶರಾವತಿ ಹಿನ್ನೀರಿನಲ್ಲಿ ರೈತರೊಬ್ಬರು ಗೋಡಂಬಿ ಬೆಳೆದು ಯಶಸ್ವಿಯಾಗಿದ್ದಾರೆ.

ಕರಾವಳಿ ಭಾಗದಲ್ಲಿ ಬಿಟ್ಟರೆ ಮಲೆನಾಡಿನಲ್ಲಿ ಹೆಚ್ಚು ಗೋಡಂಬಿ ಬೆಳೆಯಲಾಗುತ್ತದೆ. ಅನಿಶ್ಚಿತ ಹವಾಮಾನದಿಂದ ಕೃಷಿಯು ಕೈ ಹಿಡಿಯದ ಸಮಯದಲ್ಲಿ ಇಲ್ಲಿಯ ತುಮರಿ ಗ್ರಾಮದ ಕರೂರಿನ ರೈತ ಬಸವರಾಜ್ ಅವರಿಗೆ ಗೇರು ಬೆಳೆಯುವ ಉತ್ಸಾಹ ಬಂದಿತು.

ತಮಗಿರುವ 2 ಎಕರೆ ಅಲ್ಪ ಕೃಷಿ ಭೂಮಿಯ ಅಂಚಿನಲ್ಲಿ 800ರಿಂದ 900 ಗೇರು ಸಸಿಗಳನ್ನು ಇವರು ಬೆಳೆದಿದ್ದಾರೆ. ಮಳೆ ಆಶ್ರಯದಲ್ಲಿ ಬೆಳೆಯುವ ಈ ಬೆಳೆಗೆ ಯಾವುದೇ ವಿಶೇಷ ಆರೈಕೆ ಬೇಕಿಲ್ಲ. ಆದರೆ, ಪ್ರತಿ ವರ್ಷ ಕೈ ತುಂಬಾ ಆದಾಯ ತಂದು ಕೊಡುತ್ತದೆ. ಉತ್ತಮ ಹೈಬ್ರೀಡ್‌ ತಳಿಯ ಗಿಡಗಳನ್ನು ನಾಟಿ ಮಾಡಿದರೆ ಒಂದೇ ವರ್ಷದಲ್ಲಿ ಫಸಲು ಕೈಗೆ ಸಿಗುತ್ತದೆ.

ಹತ್ತು ವರ್ಷಗಳ ಹಿಂದೆ ಕೃಷಿಯಲ್ಲಿ ಹಿಂದುಳಿದಿದ್ದ ಬಸವರಾಜ್ ಸಂಕಷ್ಟಕ್ಕೆ ಒಳಗಾಗಿದ್ದರು. ಹತ್ತಿರದ ಸಂಬಂಧಿಯೊಬ್ಬರ ಮನೆಯಲ್ಲಿ ಯಥೇಚ್ಛವಾಗಿ ಗೋಡಂಬಿ ಬೆಳೆದುದನ್ನು ಕಂಡರು. ಕಡಿಮೆ ಖರ್ಚಿನಲ್ಲಿ ಮಾಡಬಹುದಾದ ಕೃಷಿ ಎಂಬುದನ್ನು ಗಮನಿಸಿದ ಇವರು ತಾವು ಕೂಡ ಈ ಕೃಷಿಗೆ ಮುಂದಾದರು.

6 ವರ್ಷಗಳ ಹಿಂದೆ 200 ಗೇರು ಸಸಿಗಳನ್ನು ತಂದು ತಮ್ಮ ಅಡಿಕೆ ತೋಟದ ಉಳಿದ ಪ್ರದೇಶದಲ್ಲಿ ಕೃಷಿ ಮಾಡಿದರು. ಅದು ಉತ್ತಮ ಇಳುವರಿ ಕೊಟ್ಟ ಬೆನ್ನಲ್ಲೇ ಕೃಷಿಯನ್ನು ವಿಸ್ತರಿಸಿದರು. ಈಗ 950ಕ್ಕೂ ಹೆಚ್ಚು ಗಿಡಗಳು ಸಮೃದ್ಧವಾಗಿದ್ದು ಫಸಲು ನೀಡುತ್ತಿವೆ. ಬೆಳೆಗೆ ಯಾವುದೇ ನೀರಾವರಿ ಸೌಲಭ್ಯ ಕಲ್ಪಿಸಿಲ್ಲ. ಕೊಳವೆ ಬಾವಿಗಳು ಸಹ ಇಲ್ಲ. ಮಳೆಯ ನೀರಷ್ಟೇ ಸಾಕು.

ಗೋಡಂಬಿ ವಾರ್ಷಿಕ ಬೆಳೆ. ಮಲೆನಾಡಿನ ಗುಡ್ಡಗಾಡು, ಇಳಿಜಾರು ಪ್ರದೇಶಗಳಲ್ಲಿ ಗೇರನ್ನು ಸರಳವಾಗಿ ಬೆಳೆಯಬಹುದು. ಮೃದುವಾದ ಹದ ಒತ್ತಿರುವ ಭೂಮಿ ಯಥೇಚ್ಛವಾಗಿ ಇರುವುದರಿಂದ ವಿಶೇಷ ಆರೈಕೆಯ ಅಗತ್ಯ ಇಲ್ಲ. ಇದರ ಜೊತೆಗೆ ಮಿಶ್ರ ಬೆಳೆಯಾಗಿ ವೆನಿಲ್ಲಾ, ಕಾಳುಮೆಣಸನ್ನು ಸಹ ಬೆಳೆಯಬಹುದು.

ಸಾವಯವ ಕೃಷಿಗೆ ಆದ್ಯತೆ: ಇವರು ಸಾವಯುವ ಕೃಷಿ ಪ್ರಿಯರು. ಕೀಟನಾಶಕ ಬಳಸದೇ ಹಸುವಿನ ಗೊಬ್ಬರದಿಂದಲೇ ಗರಿಷ್ಠ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಗೇರು ಗಿಡಗಳ ಎಲೆಗಳನ್ನು ಶೇಖರಿಸಿ, ಹಸುವಿನ ಗೊಬ್ಬರದ ಮಿಶ್ರಣದಿಂದ ಸಾವಯುವ ಗೊಬ್ಬರ ತಾವೇ ತಯಾರಿಸುತ್ತಾರೆ.

ಉಳಿದ ಕೃಷಿ ಭೂಮಿಯ ತಲಾ 1 ಎಕರೆ ಪ್ರದೇಶದಲ್ಲಿಯ ಅಡಿಕೆ ಬೆಳೆ ಇನ್ನೊಂದು ವರ್ಷದಲ್ಲಿ ಕೈಗೆ ಸಿಗಲಿದೆ. ಜೊತೆಗೆ ಶುಂಠಿ, ಕಾಳುಮೆಣಸು, ಬಾಳೆ, ವೀಳ್ಯದೆಲೆಯ ಕೃಷಿಯೂ ಕೈಹಿಡಿದಿದೆ. ಬೀನ್ಸ್, ಬದನೆ, ಟೊಮೆಟೊ ಸಹ ಬೆಳೆದು ದಿನನಿತ್ಯದ ಅಡುಗೆಗೆ ಬೇಕಾಗುವ ತರಕಾರಿಯಲ್ಲಿ ಸ್ವಾವಲಂಬನೆ ಸಾಧಿಸಿದ್ದಾರೆ.

ಮಾರುಕಟ್ಟೆ ಸಮಸ್ಯೆ ಇಲ್ಲ

ಇತರ ಬೆಳೆಗೆ ಇರುವಷ್ಟು ಮಾರುಕಟ್ಟೆ ಸಮಸ್ಯೆ ಗೋಡಂಬಿಗೆ ಇಲ್ಲ. ಕೃಷಿ ಖರ್ಚು ಕಡಿಮೆ ಇರುವುದರಿಂದ ಸರಿದೂಗಿಸುತ್ತದೆ. ಸದ್ಯ ವರ್ಷಕ್ಕೆ 15 ಕ್ವಿಂಟಲ್‌ಗೂ ಹೆಚ್ಚು ಗೋಡಂಬಿ ಬೆಳೆದು ಸಾಗರದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದೇವೆ. ಇದರಿಂದ ವರ್ಷಕ್ಕೆ ₹ 1 ಲಕ್ಷಕ್ಕೂ ಹೆಚ್ಚು ಲಾಭ ಸಿಗುತ್ತದೆ

– ಶಶಿಧರ್, ಬಸವರಾಜ್ ಅವರ ಪುತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT