ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಹಲಸಿನ ಖಾದ್ಯಕ್ಕೆ ಮಾರುಹೋದ ಗ್ರಾಹಕರು

ತರಹೇವಾರಿ ಹಲಸಿನ ತಳಿಯ ಗಿಡಗಳ ಪ್ರದರ್ಶನ
Last Updated 26 ಜೂನ್ 2022, 5:49 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ಹೆಗ್ಗೋಡು ಗ್ರಾಮದ ಬಾಲನಂದನ ಟ್ರಸ್ಟ್ ಹಲಸು–ಬೆಳೆಸು ಅಭಿಯಾನದ ಅಂಗವಾಗಿ ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ಹಲಸಿನ ಸಂತೆ–2022ರಲ್ಲಿ ಸಾರ್ವಜನಿಕರು ವಿವಿಧ ತಳಿಯ ಹಲಸಿನ ಸಸಿಗಳನ್ನು ಖರೀದಿಸುವ ಜೊತೆಗೆ ಖಾದ್ಯಗಳನ್ನು ಸವಿದರು.

ಗ್ರಾಮೀಣ ಭಾಗದ ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು ಇಲ್ಲಿ ಮಳಿಗೆಯನ್ನು ತೆರೆದಿದ್ದು, ಆವಿನಹಳ್ಳಿ ಗ್ರಾಮದ ಶಶಿಧರ್ ಮತ್ತು ತಂಡದವರು ಹಲಸಿನ ಅಂಬೊಡೆ, ಹಲಸಿನ ಬೋಂಡಾ ತಯಾರಿಸಿದ್ದರೆ, ಮಾಲ್ವೆ ಗ್ರಾಮದ ನಂದಿನಿ ಸ್ವಸಹಾಯ ಸಂಘದ ಸುಪ್ರಿಯಾ ಮತ್ತು ಸಂಗಡಿಗರು ತೆರೆದಿದ್ದ ಮಳಿಗೆಯಲ್ಲಿ ಹಲಸಿನ ಬನ್ಸ್, ಹಲಸಿನ ಹೋಳಿಗೆ, ಹಲಸಿನ ಹಪ್ಪಳದ ಮಸಾಲ ಪೂರಿ, ಹಣ್ಣಿನ ಕಡುಬು, ಹಲಸಿನ ಚಿಪ್ಸ್‌ಗೆ ಬೇಡಿಕೆ ಇತ್ತು.

ಮುಂಗರವಳ್ಳಿಯ ಪ್ರಜ್ಞಾ ಅವರು ಹಲಸಿನ ಕಾಯಿ ವಡೆ ತಯಾರಿಸಿದ್ದರೆ, ಮೇಲಿನ ಮನೆ ಗ್ರಾಮದ ವೃಂದಾ ರಾಮಕೃಷ್ಣ ಹಲಸಿನ ಮಸಾಲ ಹಪ್ಪಳದ ಹಿಟ್ಟನ್ನು ಸಿದ್ಧಪಡಿಸಿಕೊಂಡು ಬಂದಿದ್ದರು. ಗೀತಾ ಶ್ರೀನಾಥ್ ಸ್ಥಳದಲ್ಲಿಯೇ ಹಲಸಿನ ರಸಾಯನವನ್ನು ಕ್ಷಣಾರ್ಧದಲ್ಲಿ ತಯಾರಿಸಿ ಕೊಡುತ್ತಿದ್ದರು.

ಮುಟುಗುಪ್ಪೆ ಗ್ರಾಮದ ಉಷಾ ಸುಮಾ ಅವರು ಸಿದ್ಧಪಡಿಸಿದ್ದ ಹಲಸಿನ ಮಂಚೂರಿಗೆ ಹೆಚ್ಚಿನ ಬೇಡಿಕೆ ಇತ್ತು. ಹುಳೆಗಾರು ಗ್ರಾಮದ ಶ್ರೀನಿಧಿ ಹಾಗೂ ಶ್ರೀಮಾತಾ ಸ್ತ್ರೀಶಕ್ತಿ ಸಂಘದ ಹಲಸಿನ ಬೀಜದಲ್ಲಿ ಸೂಪ್, ಹಲಸಿನ ತೊಳೆಯಿಂದ ಎಣ್ಣೆಗಾಯಿ, ಹೋಳಿಗೆ ತಯಾರಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದರು. ರಿಪ್ಪನ್‌ಪೇಟೆಯ ಅಂಕುರ್ ನರ್ಸರಿಯ ಅನಂತಮೂರ್ತಿ ಜವಳಿಯವರು ಮಂಕಾಳೆ ರೆಡ್, ಭದ್ರಾವತಿ ಯೆಲ್ಲೋ, ರುದ್ರಾಕ್ಷಿ ಕೆಂಪು, ರುದ್ರಾಕ್ಷಿ ಹಳದಿ, ಬ್ರೆಜಿಲ್ 365, ಸಿಂಧೂರ, ಗಮ್ ಲೆಸ್ , ಸಿಂಗಾಪುರ ವಾಡಾ, ಥೈಲಾಂಡ್ ರೆಡ್ ಮೊದಲಾದ ತಳಿಯ ಹಲಸಿನ ಸಸಿಗಳನ್ನು ಮಾರಾಟಕ್ಕೆ ಇಟ್ಟಿದ್ದರು. ಕೆಲವು ತಳಿಗಳ ಮೂಲಕ ಬೆಳೆದ ಹಲಸಿನ ಸೊಳೆಗಳ ಸ್ಯಾಂಪಲ್ ಕೂಡ ಅಲ್ಲಿತ್ತು.

‘ಗ್ರಾಮೀಣ ಮಹಿಳೆಯರಿಗೆ ಹಲಸಿನ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಉದ್ದೇಶ ನಮ್ಮದು’ ಎಂದು ಬಾಲನಂದನ ಟ್ರಸ್ಟ್‌ನ ರವೀಂದ್ರ ಕಾಶಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT