ಪ್ರಜಾವಾಣಿ ವಾರ್ತೆ
ಸಾಗರ: ನಗರದ ಹೃದಯ ಭಾಗದಲ್ಲಿರುವ ಇತಿಹಾಸ ಪ್ರಸಿದ್ಧ ಗಣಪತಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ಕೆ.ದಿವಾಕರ್ ಆರೋಪಿಸಿದ್ದಾರೆ.
ಮಂಗಳವಾರ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಲ್ಲಿ ನಡೆಯುತ್ತಿರುವ ಕಾಮಗಾರಿಯಲ್ಲಿ ಶೇ 40ರಷ್ಟು ಕಮಿಷನ್ ವಹಿವಾಟು ನಡೆಯುತ್ತಿರುವ ಅನುಮಾನಗಳಿದ್ದು ಈ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಲಾಗುವುದು’ ಎಂದು
ತಿಳಿಸಿದರು.
‘ಗಣಪತಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಕೆರೆಯ ನೀರಿನ ಮೂಲವನ್ನೇ ಹಾಳು ಮಾಡಿ ಜನರ ಕಣ್ಣಿಗೆ ಮಣ್ಣೆರುಚುವ ಕೆಲಸ ನಡೆಯುತ್ತಿದೆ. ಜಲದ ಮೂಲ ಬತ್ತಿದ್ದು ಶರಾವತಿ ನದಿಯ ಹಿನ್ನೀರಿನಿಂದ ಸಾಗರ ನಗರಕ್ಕೆ ತರುತ್ತಿರುವ ಕುಡಿಯುವ ನೀರನ್ನು ಗಣಪತಿ ಕೆರೆಗೆ ಹರಿಸಿ ಕೆರೆಗೆ ಜೀವಕಳೆ ಬಂದಿದೆ ಎಂದು ಜನರಿಗೆ ಮೋಸ ಮಾಡಲಾಗುತ್ತಿದೆ’ ಎಂದು ಅವರು ಆರೋಪಿಸಿದರು.
‘ಈಗ ನಡೆಯುತ್ತಿರುವ ಕೆರೆ ಅಭಿವೃದ್ಧಿ ಕಾಮಗಾರಿ ತೀರಾ ಕಳಪೆಯಾಗಿದೆ. ಕೆರೆಯ ವಿಸ್ತೀರ್ಣವನ್ನು ಕಡಿಮೆ ಮಾಡಿ ಕಾಮಗಾರಿ ನಡೆಸಲು ಅವಕಾಶವೇ ಇಲ್ಲ. ಈ ವಿಷಯದಲ್ಲಿ ಸುಪ್ರೀಂಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಲಾಗಿದೆ. ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಸಮಗ್ರ ವರದಿ ಸಲ್ಲಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.
‘ಶಾಸಕ ಹಾಲಪ್ಪ ಅವರು ವಾಣಿಜ್ಯ ಪದವೀಧರರೇ ಹೊರತು ಸಿವಿಲ್ ಎಂಜಿನಿಯರ್ ಅಲ್ಲ. ಆದಾಗ್ಯೂ ಅವರು ಕೆರೆಯ ಕುರಿತು ತಜ್ಞರಂತೆ ಮಾತನಾಡುತ್ತಿದ್ದಾರೆ. ಕೆರೆ ಹಬ್ಬದ ಆಚರಣೆ ಮೂಲಕ ಜನರ ಕಣ್ಣೊರೆಸುವ ತಂತ್ರ ಮಾಡುತ್ತಿದ್ದಾರೆ. ಕೆರೆ ಒತ್ತುವರಿ ತೆರವು ಮಾಡದೇ ಅಭಿವೃದ್ಧಿ ಕಾಮಗಾರಿ’ ಎಂದು ಹೇಳುತ್ತಿರುವುದು ಸರಿಯಾದ ಕ್ರಮವಲ್ಲ ಎಂದರು.
ಮಾರ್ಕೆಟ್ ರಸ್ತೆ ವಿಸ್ತರಣೆಗೆ ಸಂಬಂಧಿಸಿ ಪೂರ್ಣ ಪ್ರದೇಶದ ಭೂ ಸ್ವಾಧೀನ ಪ್ರಕ್ರಿಯೆ ಇನ್ನೂ ಮುಕ್ತಾಯಗೊಂಡಿಲ್ಲ. ಒಂದಿಷ್ಟು ಭಾಗದ ರಸ್ತೆ ವಿಸ್ತರಣೆ ಮಾಡಿ ದೀಪ ಅಳವಡಿಸಿ ಶಾಸಕರು ಸನ್ಮಾನ ಮಾಡಿಸಿಕೊಳ್ಳುತ್ತಿರುವುದು ಅರೆಬರೆ ಅಭಿವೃದ್ಧಿ ಕೆಲಸದ ಮಾದರಿ ಹಾಗೂ ಪ್ರಚಾರದ ಹವಣಿಕೆಯಾಗಿದೆ ಎಂದು ಅವರು ಟೀಕಿಸಿದರು.
ಗಣಪತಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಬಗ್ಗೆ ಈಗಾಗಲೇ ಸಾಗರದ ಸಿವಿಲ್ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಾಗಿದ್ದು ಸತ್ಯಾಂಶ ಹೊರಬೀಳಲಿದೆ ಎಂದು ಅವರು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.