ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪ: ಮಹಿಳಾ ಪಾಲಿಟೆಕ್ನಿಕ್‌ ಪ್ರವೇಶಕ್ಕೆ ಪೈಪೋಟಿ

ಉತ್ತಮ ಸೌಲಭ್ಯ ಹೊಂದಿದ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜು
Last Updated 2 ಜೂನ್ 2022, 5:58 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಅತ್ಯುತ್ತಮ ಮೂಲಸೌಕರ್ಯ ಲಭ್ಯವಿದ್ದರೂ ಎರಡು ವರ್ಷಗಳಿಂದ ವಿದ್ಯಾರ್ಥಿನಿಯರ ಕೊರತೆ ಅನುಭವಿಸುತ್ತಿದ್ದ ಪಟ್ಟಣದ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಈ ಭಾರಿ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ದಾಖಲಾಗುತ್ತಿದ್ದು, ಈಗಾಗಲೇ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಎಲ್ಲ ಸೀಟುಗಳು ಭರ್ತಿಯಾಗಿವೆ. ಇದೇ ಕೋರ್ಸ್‌ ಪಡೆಯಲು ವಿದ್ಯಾರ್ಥಿನಿಯರು ಸಾಕಷ್ಟು ಪೈಪೋಟಿ ನಡೆಸುತ್ತಿದ್ದಾರೆ.

ಅನುಭವಿ ಉಪನ್ಯಾಸಕ ವರ್ಗ, ಅತ್ಯುತ್ತಮ ಕಾಲೇಜು ಸಂಕೀರ್ಣ, ವಿಶಾಲವಾದ ಆವರಣ ಹಾಗೂ ಹಾಸ್ಟೆಲ್‌ ಸೌಲಭ್ಯ ಒದಗಿಸಿದ್ದರೂ ಪ್ರವೇಶ ಪಡೆಯಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದರು. ಆದರೆ, ಈ ಭಾರಿ ತಾಂತ್ರಿಕ ಶಿಕ್ಷಣ ಇಲಾಖೆಯ ಮಾರ್ಗದರ್ಶದಲ್ಲಿ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದ ಪರಿಶ್ರಮದಿಂದ ಸಾಕಷ್ಟು ಸಂಖ್ಯೆಯ ಮಕ್ಕಳು ಪ್ರವೇಶ ಪಡೆಯುತ್ತಿದ್ದಾರೆ.

ಈ ಕಾಲೇಜಿನಲ್ಲಿ ವಾರ್ಷಿಕ 252 ಮಕ್ಕಳಿಗೆ ಪ್ರವೇಶ ನೀಡುವ ಅವಕಾಶವಿದೆ. ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್, ಇ ಮತ್ತು ಸಿ ವಿಭಾಗ ಸೇರಿ ಪ್ರಾರಂಭದಲ್ಲಿ 4 ಕೋರ್ಸ್‌ಗಳಿದ್ದವು. ಈಗ ಕ್ಲೌಡ್‌ ಕಂಪ್ಯೂಟಿಂಗ್ ಹಾಗೂ ಬಿಗ್ ಡೇಟಾ ಕೋರ್ಸ್‌ ಕೂಡ ಆರಂಭವಾಗಿವೆ.

ಪಾಲಿಟೆಕ್ನಿಕ್‌ ಆವರಣದಲ್ಲಿಯೇ 300 ವಿದ್ಯಾರ್ಥಿನಿಯರು ವಾಸಮಾಡ ಬಹುದಾದ ಬೃಹತ್ ವಸತಿ ನಿಲಯ ನಿರ್ಮಾಣ ಮಾಡಲಾಗಿದೆ. ಇದರ ನಿರ್ವಹಣೆಯನ್ನು ಹಿಂದುಳಿದ ವರ್ಗಗಳ ಇಲಾಖೆಗೆ ನೀಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ.

ಇನ್ಫೊಸಿಸ್‌ ಪ್ರತಿಷ್ಠಾನದಿಂದ 160 ಕಂಪ್ಯೂಟರ್‌ಗಳನ್ನು ವಿದ್ಯಾರ್ಥಿಗಳಿಗಾಗಿ ನೀಡಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕ ಸೇರಿದಂತೆ ಹಲವಾರು ಬಗೆಯ ಮೂಲ ಸೌಕರ್ಯವನ್ನು ಸಂಸದ ಬಿ.ವೈ.ರಾಘವೇಂದ್ರ ಮುತುವರ್ಜಿ ವಹಿಸಿ ಮಾಡಿಸಿದ್ದಾರೆ. ಈಗಾಗಲೇ 180 ವಿದ್ಯಾರ್ಥಿನಿಯರು ಪ್ರವೇಶ ಪಡೆದಿದ್ದು, ಜೂನ್‌ 11ರವರೆಗೆ ಪ್ರವೇಶ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮೊದಲು ಬಂದವರಿಗೆ ಮೊದಲ ಸೀಟು ಮಾದರಿಯಲ್ಲಿ ಪ್ರವೇಶ ನೀಡಲಾಗುತ್ತಿದೆ.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಾಂತ್ರಿಕ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಜಿಲ್ಲೆಯ ಎಲ್ಲ ಸರ್ಕಾರಿ ಪಾಲಿಟೆಕ್ನಿಕ್‌ಗಳಿಗೆ ಖಾಸಗಿ ಕಾಲೇಜುಗಳಿಗಿಂತ ಉತ್ತಮವಾಗಿ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

‘ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗವನ್ನು ಒಳಗೊಂಡ 10 ತಂಡಗಳನ್ನು ರಚನೆ ಮಾಡಲಾಗಿತ್ತು. ಈ ತಂಡಗಳು 10ನೇ ತರಗತಿ ಫಲಿತಾಂಶ ಬರುವ ಮುಂಚೆಯೇ ಹಿರೆಕೆರೂರು, ರಟ್ಟಿಹಳ್ಳಿ, ದಾವಣಗೆರೆ, ಸೊರಬ, ಆನವಟ್ಟಿ, ಸಾಗರ ಹಾಗೂ ಶಿಕಾರಿಪುರ ತಾಲ್ಲೂಕಿನ ಪ್ರೌಢಶಾಲೆಗಳನ್ನು ಸಂಪರ್ಕಿಸಿ ಮಾಹಿತಿ ನೀಡುವ ಕಾರ್ಯ ಮಾಡಿವೆ. ದಾಖಲಾತಿ ಹೆಚ್ಚಾಗಲು ಸಹಕಾರಿಯಾಗಿದೆ’ ಎಂದು ಪ್ರಾಂಶುಪಾಲರಾದ ರವಿಶಂಕರ ತಿಳಿಸಿದರು.

ಪ್ರವೇಶ ಪಡೆಯಲು ಕೊನೆಯ ದಿನಾಂಕ ಜೂನ್‌ 11.

ಪ್ರಯೋಜನ ಪಡೆಯಿರಿ

‘ಶಿವಮೊಗ್ಗ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ಗೆ ₹ 7.5 ಕೋಟಿ, ಭದ್ರಾವತಿ ಸರ್ಕಾರಿ ಪಾಲಿಟೆಕ್ನಿಕ್‌ಗೆ ₹ 4.5 ಕೋಟಿ ಹಾಗೂ ಶಿರಾಳಕೊಪ್ಪ ಮಹಿಳಾ ಪಾಲಿಟೆಕ್ನಿಕ್‌ಗೆ ₹ 5.8 ಕೋಟಿ ವಿನಿಯೋಗಿಸಿ ಮೂಲಸೌಕರ್ಯ ನೀಡಲಾಗಿದೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿ ಇದರ ಪ್ರಯೋಜನ ಪಡೆಯಬೇಕು’ ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT