ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗದಲ್ಲಿ ಅಭಿವೃದ್ಧಿ ಪರ್ವ: ಜಲಪಾತಕ್ಕೆ ಸಿಗಲಿದೆ ವಿಶೇಷ ಕಳೆ

₹ 185 ಕೋಟಿ ವೆಚ್ಚದಲ್ಲಿ ಆರಂಭವಾಗಲಿವೆ ಅಭಿವೃದ್ಧಿ ಕಾಮಗಾರಿಗಳು
Last Updated 9 ಜುಲೈ 2021, 3:40 IST
ಅಕ್ಷರ ಗಾತ್ರ

ಕಾರ್ಗಲ್‌ (ಶಿವಮೊಗ್ಗ ಜಿಲ್ಲೆ): ವಿಶ್ವ ವಿಖ್ಯಾತ ಜೋಗ ಜಲಪಾತದಲ್ಲಿ ಈಗ ಅಭಿವೃದ್ಧಿ ಪರ್ವ. ₹185 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ತಯಾರಿ ನಡೆದಿದೆ.

ಕರ್ನಾಟಕ ವಿದ್ಯುತ್ ನಿಗಮದ ಮೇಲುಸ್ತುವಾರಿಯಲ್ಲಿ ಜಾಗತಿಕ ಟೆಂಡರ್ ಮೂಲಕ ಜಲಪಾತ ಪ್ರದೇಶದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಜೋಗ ಜಲಪಾತ ಪ್ರದೇಶಕ್ಕೆ ವಿಶೇಷ ಕಳೆ ನೀಡುತ್ತಿದ್ದ ಪ್ರಾಧಿಕಾರದ ಮುಖ್ಯ ಪ್ರವೇಶದ್ವಾರ ಮತ್ತು ಪುನರ್ವಸತಿಗೆ ಆಸರೆಯಾಗಿದ್ದ ಸ್ಥಳೀಯ ವ್ಯಾಪಾರಿಗಳ ವಾಣಿಜ್ಯ ಸಂಕೀರ್ಣ ಕಟ್ಟಡಗಳು ಕಾಮಗಾರಿಯ ಕಾರಣಕ್ಕೆ ನೆಲಸಮಗೊಳ್ಳಲಿವೆ. ಇದು ಸ್ಥಳೀಯ ವ್ಯಾಪಾರಿಗಳಲ್ಲಿ ಆತಂಕವನ್ನೂ ಉಂಟುಮಾಡಿದೆ.

ವಾಣಿಜ್ಯ ಸಂಕೀರ್ಣಗಳು ಹೊಸರೂಪ ಪಡೆಯಲಿವೆ. ಆತಂಕ ಬೇಡ ಎಂಬುದು ಪ್ರಾಧಿಕಾರದ ಮೂಲಗಳ ವಿವರಣೆ.

ಜಿಪ್‌ ಲೈನ್ ಕಾಮಗಾರಿ ಪೂರ್ಣ: ಬಹುನಿರೀಕ್ಷಿತ ಜಿಪ್‌ ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ‘ರಾಣಿ’ ಜಲಪಾತದ ನೆತ್ತಿಯ ಮೇಲಿನಿಂದ ಮೈಸೂರು ಬಂಗಲೆಯ ಮುಂಭಾಗದ ವೀಕ್ಷಣಾ ಗೋಪುರದವರೆಗೆ ತಂತಿಯ ಮೇಲೆ ತೇಲಿಬರುವ ಅಪರೂಪದ ಸಾಹಸ ವೀಕ್ಷಣಾ ಕಾರ್ಯ ಯೋಜನೆ ಸಿದ್ಧವಾಗಿ ಲೋಕಾರ್ಪಣೆಗೊಳ್ಳಲು ಕಾದುನಿಂತಿದೆ.

ಜೋಗದ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಮುಖ 5 ವಿಭಾಗಗಳಾಗಿ ಗುರುತಿಸಲಾಗಿದೆ. ಪ್ರಥಮ ಹಂತದ ಕಾಮಗಾರಿಗಳಲ್ಲಿ ಜೋಗ ಜಲಪಾತ ಮತ್ತು ರೋಪ್‌ವೇ, ಬೃಹತ್ ಪ್ರವೇಶದ್ವಾರ ಮತ್ತು ಶರಾವತಿಯ ವಿಗ್ರಹ, ವಿಜ್ಞಾನ ಮತ್ತು ಮಕ್ಕಳ ಉದ್ಯಾನ, ವ್ಯೂಡೆಕ್ ಮತ್ತು ಮುಖ್ಯ ವೀಕ್ಷಣಾ ಪ್ರದೇಶ, ಉಪಾಹಾರ ಗೃಹ ಮತ್ತು ವಿಶ್ರಾಂತಿ ಕೊಠಡಿ, ಪೆರಿಪೆರಲ್ ರಸ್ತೆ ಮತ್ತು ಇಂಟರ್ ಮೀಟೆಂಟ್ ರಸ್ತೆ, ಕಾಲುದಾರಿ ಮತ್ತು ಆಡಳಿತ ಕಚೇರಿ ಒಳಗೊಳ್ಳಲಿವೆ.

ಎರಡನೇ ಹಂತದಲ್ಲಿ ಮಹಾತ್ಮ ಗಾಂಧಿ ಜಲವಿದ್ಯುದಾಗರದಿಂದ ಜಲಪಾತದ ಕೆಳಹಂತದವರೆಗೆ ಸಂಪರ್ಕ, ಬ್ಯಾರೇಜ್ ಬೋಟಿಂಗ್ ಮತ್ತು ವ್ಯೂಡೆಕ್, ಡೆಕ್ ಸ್ಟೇಷನ್ ಮತ್ತು ಭದ್ರತಾ ಕೊಠಡಿಯನ್ನು ನಿರ್ಮಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3ನೇ ಹಂತದಲ್ಲಿ ದ್ವಿಚಕ್ರ, ಕಾರು, ಟೆಂಪೊ ಇತ್ಯಾದಿ ಪ್ರವಾಸಿ ವಾಹನಗಳ ನಿಲ್ದಾಣ, ಮಿನಿ ಬಸ್ ಮತ್ತು ಬಸ್‌ ನಿಲ್ದಾಣ, ಟಿಕೆಟ್ ಕೌಂಟರ್, ಕುಡಿಯುವ ನೀರು, ಪ್ರಥಮ ಚಿಕಿತ್ಸೆ ಮತ್ತು ವಿಶ್ರಾಂತಿ ಗೃಹಗಳು; 4ನೇ ಹಂತದಲ್ಲಿ ಹೋಂಸ್ಟೇ ಹಾಗೂ ಮಹಾತ್ಮ ಗಾಂಧಿ ಮತ್ತು ಮ್ಯೂಸಿಯಂಗೆ ಟ್ರಾಲಿ ಮೂಲಕ ತಾಂತ್ರಿಕ ಪ್ರವಾಸ.5ನೇ ಹಂತದಲ್ಲಿ ವಡನ್ ಬೈಲು ದೇವಸ್ಥಾನಕ್ಕೆ ಬೋಟಿಂಗ್ ಮತ್ತು ತಳಕಳಲೆ ಹಿನ್ನೀರಿನಲ್ಲಿ ಜಲಸಾಹಸ ಕ್ರೀಡೆಗೆ ಒತ್ತು ನೀಡಲಾಗುತ್ತದೆ.

ಅರಣ್ಯ ವಸತಿ ವಿಹಾರಧಾಮ ಮತ್ತು ವಡನ್ ಬೈಲು ಬಳಿ ಡೆಕ್ ಸ್ಟೇಷನ್, ಕಾರ್ಗಲ್‌ನಿಂದ ತಳಕಳಲೆ ಅರಣ್ಯ ವಸತಿ ವಿಹಾರಧಾಮದವರೆಗೆ ರಸ್ತೆ ಅಭಿವೃದ್ಧಿ, ಲ್ಯಾಂಡ್ ಸ್ಕೇಪ್ ಕಾಮಗಾರಿ, ಪಿಎಚ್ಇ ಕಾಮಗಾರಿ ನೀರು ಸರಬರಾಜು, ಒಳಚರಂಡಿ, ವಿದ್ಯುತ್ ಕಾಮಗಾರಿ ಮತ್ತು ಜಲಪಾತ ಪ್ರದೇಶಕ್ಕೆ ವಿದ್ಯುತ್ ದೀಪಾಲಂಕಾರ ಕಾಮಗಾರಿಗಳನ್ನು ಒಳಗೊಂಡಿರುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ
ಎಚ್.ಎಸ್. ರಾಮಕೃಷ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಸರ್ಕಾರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಅತ್ಯುತ್ತಮ ಗುಣಮಟ್ಟದಲ್ಲಿ, ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಸದರು, ಕ್ಷೇತ್ರದ ಶಾಸಕರು, ಜಿಲ್ಲಾಧಿಕಾರಿ ಪರಿವೀಕ್ಷಣೆಯಲ್ಲಿ ಕೆಪಿಸಿ ಇಲಾಖೆ ಸಿದ್ಧತೆ ನಡೆಸುತ್ತಿದೆ’
ಎಂದು ಅವರು ತಿಳಿಸಿದರು.

***

ಜೋಗ ಜಲಪಾತಕ್ಕೆ ಹೊಸ ಕಳೆ ನೀಡಲು ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೆಲ ಕಾಮಗಾರಿಗಳು ಆರಂಭವಾಗಿದ್ದು, ಉಳಿದವು ಚುರುಕು ಪಡೆಯಲಿವೆ.‌

ಎಚ್.ಎಸ್. ರಾಮಕೃಷ್ಣ, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT