ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂವಿಧಾನ ಬದಲಿಸುವ ಮಾತನಾಡುವವರಿಗೆ ಎಚ್ಚರಿಕೆ ನೀಡಿ

ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ
Published 14 ಮಾರ್ಚ್ 2024, 15:54 IST
Last Updated 14 ಮಾರ್ಚ್ 2024, 15:54 IST
ಅಕ್ಷರ ಗಾತ್ರ

ಸಾಗರ: ‘ರಾಜಕೀಯ ಲಾಭಕ್ಕಾಗಿ ಸಂವಿಧಾನವನ್ನು ಬದಲಿಸುವ ಮಾತನಾಡುವವರಿಗೆ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ ನೀಡಿದರು.

ಇಲ್ಲಿನ ಅಣಲೆಕೊಪ್ಪ ಬಡಾವಣೆಯ ಡಿಎಸ್ಎಸ್ ಸಮುದಾಯ ಭವನದಲ್ಲಿ ಗುರುವಾರ ನಡೆದ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಸ್ಥಾಪನೆಯ 50ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಂವಿಧಾನದ ತಿದ್ದುಪಡಿ ಹಲವು ಬಾರಿ ಆಗಿರುವುದು ನಿಜ. ಆದರೆ, ಸಂವಿಧಾನದ ತಿದ್ದುಪಡಿಗೂ ಅದರ ಬದಲಾವಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಸಂವಿಧಾನವನ್ನು ಬದಲಿಸುತ್ತೇನೆ ಎಂದು ಹೇಳುವವರಿಗೆ ಸಾಮಾಜಿಕ ನ್ಯಾಯದ ಬಗ್ಗೆ ನಂಬಿಕೆ ಇಲ್ಲ ಎಂದರ್ಥ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಮಾತನಾಡುವವರಿಗೆ ದಲಿತ ಸಂಘಟನೆ ಕಾರ್ಯಕರ್ತರು ತಕ್ಕ ಪಾಠ ಕಲಿಸಬೇಕು’ ಎಂದರು.

ಉಪನ್ಯಾಸ ನೀಡಿದ ಉಪನ್ಯಾಸಕ ಪ್ರೊ.ಬಿ.ಎಲ್.ರಾಜು, ‘ತಳ ಸಮುದಾಯಗಳಿಗೆ ಸಿಕ್ಕಿರುವ ರಾಜಕೀಯ ಸ್ವಾತಂತ್ರ್ಯ ಅರ್ಥಪೂರ್ಣವಾಗಬೇಕಾದರೆ ಸಾಮಾಜಿಕ, ಆರ್ಥಿಕ ಸ್ವಾತಂತ್ರ್ಯವೂ ಸಿಗಬೇಕು. ಸಮುದಾಯದವರ ಸಾಮಾಜಿಕ ಘನತೆಯನ್ನು ಹೆಚ್ಚಿಸುವ ಕೆಲಸದಲ್ಲಿ ದಲಿತ ಸಂಘರ್ಷ ಸಮಿತಿ ನಿರತವಾಗಿರುವುದು ಶ್ಲಾಘನೀಯ’ ಎಂದು ಹೇಳಿದರು.

50 ವರ್ಷಗಳ ಹಿಂದೆ ಬಿ.ಕೃಷ್ಣಪ್ಪ ಅವರು ಹುಟ್ಟುಹಾಕಿದ ದಲಿತ ಚಳವಳಿ ಇಂದಿಗೂ ಜೀವಂತವಾಗಿದೆ ಎಂದರೆ ಅಸಮಾನತೆಯ ನೆಲೆಗಳು ಇನ್ನೂ ಸಮಾಜದಲ್ಲಿ ಬೇರೂರಿದೆ ಎಂದರ್ಥ. ಶೋಷಿತ, ನೊಂದ ಸಮುದಾಯಗಳು, ಮಹಿಳೆಯರು, ಆದಿವಾಸಿಗಳು ನಿರಂತರವಾಗಿ ಹೋರಾಟದ ಮೂಲಕವೇ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಎಂ.ಗುರುಮೂರ್ತಿ ಅಭಿಪ್ರಾಯಪಟ್ಟರು.

ನೊಂದವರಿಗೆ ನ್ಯಾಯ ಒದಗಿಸುವ ಕೆಲಸವನ್ನು ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಮಾಡುತ್ತಲೆ ಇದೆ. ಈ ಮೂಲಕ ಪ್ರಗತಿಪರ ವಿಚಾರಗಳನ್ನು ಸಮಾಜಕ್ಕೆ ದಾಟಿಸುವ ಕೆಲಸವೂ ಸಂಘಟನೆಯಿಂದ ಆಗುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತ ಶಿವಾನಂದ ಕುಗ್ವೆ ಹೇಳಿದರು.

ಸಂಘಟನೆಯ ಹಿರಿಯ ಮುಖಂಡರನ್ನು ಸನ್ಮಾನಿಸಲಾಯಿತು. ಡಿಎಸ್ಎಸ್  ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಎಲ್.ಚಂದ್ರಪ್ಪ, ನಾರಾಯಣ ಮಂಡಗಳಲೆ, ಏಳುಕೋಟಿ, ಸೈಯದ್ ಜಾಕೀರ್, ಐ.ಎನ್.ಸುರೇಶ್ ಬಾಬು, ಮೋಹನ್ ಮೂರ್ತಿ, ನಾರಾಯಣ ಗೋಳಗೋಡು, ರಂಗಪ್ಪ ಹೊನ್ನೆಸರ, ಶಿವಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT