ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಕ್ಷೇತ್ರದ ಎಲ್ಲೆಡೆ ಶಾಂತಿಯುತ ಮತದಾನ

ಮೂರು ಗ್ರಾಮಗಳಲ್ಲಿ ಬಹಿಷ್ಕಾರ, ಮನವೊಲಿಕೆ ನಂತರ ಮತದಾನ
Last Updated 23 ಏಪ್ರಿಲ್ 2019, 13:52 IST
ಅಕ್ಷರ ಗಾತ್ರ

ಶಿವಮೊಗ್ಗ:ಮೂರು ಮತಗಟ್ಟೆಗಳಲ್ಲಿ ಮತದಾನ ಬಹಿಷ್ಕಾರ, ಕೆಲವು ಕಡೆ ಮತಯಂತ್ರಗಳಲ್ಲಿ ದೋಷ, ಸಾಗರ, ತೀರ್ಥಹಳ್ಳಿಯ ಕೆಲವು ಭಾಗಗಳಲ್ಲಿ ಮತದಾನಕ್ಕೆ ಮಳೆ ಅಡಚಣೆ ಹೊರತುಪಡಿಸಿದರೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ನಡೆದ ಮತದಾನ ಸಂಪೂರ್ಣ ಶಾಂತಿಯುತವಾಗಿತ್ತು.

ಶಿವಮೊಗ್ಗ ಹೊರವಲಯದ ಹಕ್ಕಿಪಿಕ್ಕಿ ಕ್ಯಾಂಪ್, ಸಾಗರ ತಾಲ್ಲೂಕು ಶರಾವತಿ ಹಿನ್ನೀರಿನ ಶಿಗ್ಗಾ, ಕುಂಸಿ ಸಮೀಪದ ದೊಡ್ಡಮಟ್ಟಿ ಗ್ರಾಮಸ್ಥರು ಮೂಲ ಸೌಕರ್ಯಕ್ಕೆ ಆಗ್ರಹಿಸಿ ಮತದಾನ ಬಹಿಷ್ಕರಿಸಿದ್ದರು. ಕೊನೆಗೆ ಚುನಾವಣಾಧಿಕಾರಿ ಮನವಿಗೆ ಸ್ಪಂದಿಸಿ ಬಹಿಷ್ಕಾರ ಹಿಂಪಡೆದು ಮತ ಚಲಾಯಿಸಿದರು. ಮಂಗನಕಾಯಿಲೆ ಪೀಡಿತ ಅರಲಗೋಡು ವ್ಯಾಪ್ತಿಯಲ್ಲಿ ಗುಳೆ ಹೋಗಿದ್ದ ಬಹುತೇಕ ಜನರು ಗ್ರಾಮಕ್ಕೆ ಬಂದು ಮತ ಚಲಾಯಿಸಿದ್ದು ವಿಶೇಷ.

ಸೊರಬ ತಾಲ್ಲೂಕಿನ ತವನಂದಿ ಮತಗಟ್ಟೆಯಲ್ಲಿ ಮತಗಟ್ಟೆ ಅಧಿಕಾರಿಯೊಬ್ಬರು ಮತದಾನ ಮಾಡಿದ ಜನರ ಬೆರಳಿಗೆ ಶಾಯಿ ಹಾಕುವಾಗ ಕಮಲದ ಚಿಹ್ನೆ ಬಿಡುಸುತ್ತಿದ್ದರು ಎಂದು ಆರೋಪಿಸಿ ಗ್ರಾಮದ ಹಲವರು ಪ್ರತಿಭಟನೆ ನಡೆಸಿದರು.

ತೀರ್ಥಹಳ್ಳಿ ತಾಲ್ಲೂಕಿನ ಕುಶಾವತಿ, ಸಾಗರ ತಾಲ್ಲೂಕಿನ ತುಮರಿ, ಸಿಗಂದೂರು ಸೇರಿದಂತೆ ಕೆಲವೆಡೆ ಮಳೆಗೆ ಮರಗಳು ಬಿದ್ದ ಪರಿಣಾಮ ಮತದಾನಕ್ಕೆ ಅಡ್ಡಿಯಾಗಿತ್ತು. ಮರಗಳನ್ನು ತೆರವುಗೊಳಿಸಿದ ನಂತರ ಜನರು ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಹೊಸನಗರ ತಾಲ್ಲೂಕಿನ ಹುಂಚ, ಕೆರೆಹಳ್ಳಿ, ಮಾರುತಿಪುರ ವ್ಯಾಪ್ತಿಯಲ್ಲಿ ಮಧ್ಯಾಹ್ನ ಮಳೆ ಸುರಿದ ಕಾರಣ ಮತದಾನಕ್ಕೆ ಸ್ವಲ್ಪ ಸಮಯ ವಿರಾಮ ನೀಡಲಾಗಿತ್ತು.

ಭದ್ರಾವತಿ ತಾಲ್ಲೂಕಿನಲ್ಲಿ ಬೆಳಿಗ್ಗೆ ಮತದಾನ ಚುರುಕಿನಿಂದ ನಡೆಯಿತು. ಮಧ್ಯಾಹ್ನ ಬಿಸಿಲ ಝಳಕ್ಕೆ ತತ್ತರಿಸಿದ ಜನರು ಮನೆಬಿಟ್ಟು ಹೊರಗೆ ಬರಲಿಲ್ಲ. ಮಧ್ಯಾಹ್ನ 12ರಿಂದ 3ರವರೆಗೆ ಮತದಾನ ಪ್ರಮಾಣದಲ್ಲಿ ಇಳಿಕೆ ಕಂಡು ಬಂತು. ಸಂಜೆ ಮಳೆ ಬಂದ ನಂತರ ತಂಪು ವಾತಾವರಣ ನಿರ್ಮಾಣವಾಗಿತ್ತು. ಹಾಗಾಗಿ, ಮತದಾನ ವೇಗ ಪಡೆಯಿತು. ಶಿಕಾರಿಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೂ ಒಂದೇ ತೆರನಾಗಿ ಮತದಾನ ಪ್ರಮಾಣ ಸಾಗಿತು.

ಮಾದರಿ ಹಾಗೂ ಸಖೀ ಮತಗಟ್ಟೆಗಳು ಜನಾಕರ್ಷಣೆಯ ಕೇಂದ್ರಗಳಾಗಿದ್ದವು. ಹಲವು ಮತಗಟ್ಟೆಗಳಲ್ಲಿ ಜನರು ಉದ್ದದ ಸರದಿಯಲ್ಲಿ ನಿಂತು ಮತ ಚಲಾಯಿಸಿದರು.

ಮತಯಂತ್ರ ದೋಷ:ತೀರ್ಥಹಳ್ಳಿ ತಾಲ್ಲೂಕಿನ ಮುತ್ತೂರು ಹೋಬಳಿ ವ್ಯಾಪ್ತಿಯ ಮುಂಡುಬಳ್ಳಿ, ಸೊರಬ ತಾಲ್ಲೂಕಿನ ಹೊರಬೈಲು ಸೇರಿದಂತೆ ಕೆಲವು ಮತಗಟ್ಟೆಗಳ ಮತಯಂತ್ರಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಕಾರಣ ಒಂದೆರಡು ತಾಸು ಮತದಾನ ವಿಳಂಬವಾಯಿತು.

ಪಟ್ಟಿಯಲ್ಲಿ ಹೆಸರು ನಾಪತ್ತೆ:ಸಹ್ಯಾದ್ರಿ ಕಾಲೇಜು ಮತಗಟ್ಟೆವ್ಯಾಪ್ತಿಯ ವಿದ್ಯಾನಗರದ ಹಲವು ಮತದಾರರ ಬಳಿ ಎಪಿಕ್‌ ಕಾರ್ಡ್‌ ಇದ್ದರೂ, ಮತದಾರರ ಪಟ್ಟಿಯಲ್ಲಿ ಇರಲಿಲ್ಲ. ಇದರಿಂದ ಮತ ಚಾಲಾಯಿಸಲು ಬಂದವರು ಪರದಾಡಿದರು. ಚುನಾವಣಾಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಲಿಲ್ಲ. ‘ಏಕೆ ಇಂತಹ ಅವ್ಯವಸ್ತೆ ಎಂದು ಅರ್ಥವಾಗಲಿಲ್ಲ. ಕೊನೆಗೆಬೇಸರದಿಂದ ಮನೆಯತ್ತ ಹೆಜ್ಜೆ ಹಾಕಿದೆವು’ ಎಂದು ಸಂತೋಷ್ ಬೇಸರ ತೋಡಿಕೊಂಡರು.

ಕುರುಡು ಕಾಂಚಾಣಕ್ಕೆ ಕಾತರ: ಗ್ರಾಮೀಣ ಭಾಗದ ಹಲವು ಮತಗಟ್ಟೆಗಳಲ್ಲಿ ಜನರು ಹಣ ಹಂಚಿಕೆ ಮಾಡಿದ್ದಾರೆ ಎಂದು ಬಹಿರಂಗವಾಗಿ ಹೇಳಿಕೊಂಡರು. ಭದ್ರಾವತಿಯಲ್ಲಿ ಒಂದು ಪಕ್ಷ ಮಾತ್ರ ಹಣ ಹಂಚಿದೆ. ಇನ್ನೊಂದು ಪಕ್ಷ ನೀಡಿಲ್ಲ. ಅವರಿಗೆ ಐಟಿ ಭಯ ಕಾಡಿರಬಹುದು ಎಂದು 76 ಯಜಮಾನರೊಬ್ಬರು ವ್ಯಂಗ್ಯವಾಡಿದರು. ಆ ಪಕ್ಷಕ್ಕೆ ಮತ ಹಾಕುವ ಕೆಲವರು ಹಣ ನೀಡಿಲ್ಲ ಎಂದು ಮತಗಟ್ಟೆಗೆ ಬಾರದೆ ಮನೆಯಲ್ಲಿ ಉಳಿದಿದ್ದಾರೆ ಎಂದು ವಿವರ ನೀಡಿದರು.

ಪ್ರತಿ ಮತಗಟ್ಟೆಯ ಹೊರಗೂ ಜನರು ಗುಂಪು ಗುಂಪಾಗಿ ನಿಂತು ಚರ್ಚಿಸುತ್ತಿದ್ದರು. ತಮ್ಮ ಕಡೆಯವರು ಬಂದಾಗ ಆತ್ಮೀಯವಾಗಿ ಸ್ವಾಗತಿಸಿ, ಕಿವಿಯಲ್ಲಿ ಪಿಸುಗುಟ್ಟಿ, ಬೆನ್ನುತಟ್ಟಿ ಕಳುಹಿಸುತ್ತಿದ್ದರು. ಕೆಲವರು ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಿ ಸಂಖ್ಯೆ ಹೇಳುತ್ತಿದ್ದರು. ಭಾವಚಿತ್ರ ಇರುವ ಚೀಟಿ ನೀಡಿ ಕಳುಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT