ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಕಾವಾಡಿಗಳ ಮೇಲಿನ ದ್ವೇಷ ಆನೆ ಬಾಲಕ್ಕೆ ಎರವಾಯಿತೇ?

ಸಕ್ರೆಬೈಲು ಹೆಣ್ಣಾನೆ ಭಾನುಮತಿಗೆ ಗಾಯ: ಎಸಿಎಫ್‌ಗೆ ತನಿಖೆ ಹೊಣೆ
Published 18 ಅಕ್ಟೋಬರ್ 2023, 14:35 IST
Last Updated 18 ಅಕ್ಟೋಬರ್ 2023, 14:35 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಸಕ್ರೆಬೈಲಿನ ಆನೆ ಬಿಡಾರದ ಹೆಣ್ಣಾನೆ ಭಾನುಮತಿಯ ಬಾಲಕ್ಕೆ ಮಂಗಳವಾರ ಆಳವಾದ ಗಾಯ ಆಗಿದೆ. ಆನೆಯನ್ನು ನೋಡಿಕೊಳ್ಳುವ ಮಾವುತ ಹಾಗೂ ಕಾವಾಡಿ ನಡುವಣ ದ್ವೇಷವೇ ಈ ಕೃತ್ಯಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. 

ಯಾರೋ ಚೂಪಾದ ವಸ್ತುವಿನಿಂದ ಹೊಡೆದ ಕಾರಣ ಆನೆಯ ಬಾಲ ಕತ್ತರಿಸಿದ ರೀತಿ ಆಗಿದೆ. ಅದಕ್ಕೆ ಆನೆ ಕ್ಯಾಂಪಿನ ವೈದ್ಯರು ಎಂಟು ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ.

ವಾಡಿಕೆಯಂತೆ ಕ್ಯಾಂ‍ಪಿನಿಂದ ಕಾಡಿಗೆ ಆಹಾರ ಅರಸಿ ಹೋದಾಗ ಆನೆಗೆ ಗಾಯ ಆಗಿದೆ ಎಂದು ಹೇಳಲಾಗಿದೆ. ಆನೆ ಕ್ಯಾಂಪಿನ ಅಕ್ಕರೆಯ ಸದಸ್ಯೆ ಭಾನುಮತಿ ಈಗ 18 ತಿಂಗಳ ತುಂಬು ಗರ್ಭಿಣಿ. ಹೀಗಾಗಿ ಆಕೆಯ ಮೇಲೆ ವಿಶೇಷ ನಿಗಾ ಇಡಲಾಗಿದೆ.

‘ಆನೆಗಳನ್ನು ನೋಡಿಕೊಳ್ಳುವ ಮಾವುತರು ಹಾಗೂ ಕಾವಾಡಿಗಳ ನಡುವೆ ಬಡ್ತಿಯ ವಿಚಾರದಲ್ಲಿ ಸಂಘರ್ಷ ಇದ್ದು, ಈ ದ್ವೇಷ ಆನೆಯ ಬಾಲಕ್ಕೆ ಮುಳುವಾಗಿದೆ. ಅರಣ್ಯ ಇಲಾಖೆಯು 10 ದಿನಗಳ ಹಿಂದೆ ಕ್ಯಾಂಪಿನ ನಾಲ್ವರು ಕಾವಾಡಿಗಳಿಗೆ ಮಾವುತರಾಗಿ ಬಡ್ತಿ ನೀಡಲು ಪಟ್ಟಿ ಸಿದ್ಧಪಡಿಸಲಾಗಿದೆ. ಅದರಲ್ಲಿ ಭಾನುಮತಿಯನ್ನು ನೋಡಿಕೊಳ್ಳುವ ಕಾವಾಡಿಯ ಹೆಸರು ಇದೆ. ಭಾನುಮತಿಗೆ ಆಗಿರುವ ಗಾಯವನ್ನು ನೋಡಿದರೆ ಅದು ಕಾಡಿನಲ್ಲಿ ಆಹಾರ ಅರಸುವಾಗ ಆಗಿರುವ ಆಕಸ್ಮಿಕ ಗಾಯವಲ್ಲ. ಉದ್ದೇಶ‍ಪೂರ್ವಕವಾಗಿ ಚೂಪಾದ ವಸ್ತುವಿನಿಂದ ಹೊಡೆದಂತೆ ಕಾಣುತ್ತಿದೆ’ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಹೇಳುತ್ತಾರೆ. 

ಎಸಿಎಫ್‌ಗೆ ತನಿಖೆ ಹೊಣೆ: ಭಾನುಮತಿ ಗಾಯಗೊಂಡಿರುವುದಕ್ಕೆ ಕಾವಾಡಿ ಮತ್ತು ಮಾವುತರ ನಡುವಣ ಸಂಘರ್ಷ ಕಾರಣ ಎಂಬುದನ್ನು ಶಿವಮೊಗ್ಗ ವನ್ಯಜೀವಿ ವಿಭಾಗದ ಡಿಸಿಎಫ್‌ ಪ್ರಸನ್ನ ಪಟಗಾರ್‌ ನಿರಾಕರಿಸಿದ್ದಾರೆ.

‘ಈ ಕುರಿತು ತನಿಖೆ ನಡೆಸಲು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿಯ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ’ ಎಂದರು.

‘ಆನೆಗೆ ಸೂಕ್ತ ಚಿಕಿತ್ಸೆ ಕೊಡಲಾಗಿದೆ. ಅಗತ್ಯ ಬಿದ್ದಲ್ಲಿ ಪೊಲೀಸರಿಗೆ ದೂರು ನೀಡುವಂತೆ ಎಸಿಎಫ್ ಅವರಿಗೆ ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ಭಾನುಮತಿಯ ಬಾಲಕ್ಕೆ ಆಗಿರುವ ಗಾಯ
ಭಾನುಮತಿಯ ಬಾಲಕ್ಕೆ ಆಗಿರುವ ಗಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT