ಗುರುವಾರ , ಜುಲೈ 29, 2021
23 °C

ವಿಮಾನದ್ವಾರ ನೀಲನಕ್ಷೆಯಲ್ಲಿ ಕಮಲಾಕಾರ: ಈಶ್ವರಪ್ಪ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ‘ಕಮಲ ಅಭಿವೃದ್ಧಿಯ ಸಂಕೇತ. ಅದಕ್ಕಾಗಿಯೇ ವಿಮಾನನಿಲ್ದಾಣದ ಪ್ರವೇಶ ದ್ವಾರ ನೀಲನಕ್ಷೆಯಲ್ಲಿ ಬಳಸಲಾಗಿದೆ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಸಮರ್ಥಿಸಿಕೊಂಡರು.

ಶಿವಮೊಗ್ಗದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

‘ಕಾಂಗ್ರೆಸ್‌ ಮುಖಂಡರು ಎಲ್ಲ ವಿಷಯದಲ್ಲೂ ರಾಜಕೀಯ ಮಾಡುತ್ತಿದ್ದಾರೆ. ವಿಮಾನನಿಲ್ದಾಣಕ್ಕೆ ಕಮಲದ ಗುರುತಿನ ಪ್ರವೇಶ ದ್ವಾರ ಬಳಸುವ ಮೂಲಕ ಬಿಜೆಪಿ  ಪಕ್ಷದ ಲಾಂಛನ ಸ್ಥಾಪಿಸುತ್ತಿದೆ. ಸಾರ್ವಜನಿಕರ ತೆರಿಗೆ ಹಣ ವ್ಯಯವಾಗುತ್ತಿದೆ’ ಎಂದು ಹೇಳಿಕೆ ನೀಡುವ ಮೂಲಕ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.

‘ಇದು ಸಾರ್ವಜನಿಕರ ತೆರಿಗೆ ಹಣವೇ. ಆದರೆ, ಕಮಲ ಅಭಿವೃದ್ಧಿಯ ಸಂಕೇತ, ಕಮಲದ ಬಳಕೆ ಇದ್ದರೆ ಅಭಿವೃದ್ಧಿ ಆಗಲಿದೆ. ಮನೆಗಳ ದೇವರ ಫೋಟೊದಲ್ಲಿ ಕಮಲ ಇದ್ದರೆ ಬಿಜೆಪಿಯ ಪಕ್ಷದ ಚಿಹ್ನೆ ಎಂದು ಕಿತ್ತು ಹಾಕಲು ಸಾಧ್ಯವೇ?. ಲೋಟಸ್ ಮಹಲ್‌ನಲ್ಲಿ ಕಮಲ ಬಳಸಲಾಗಿದೆ ಎಂದು ತೆರವುಗೊಳಿಸಲು ಆಗುತ್ತದೆಯೇ?’ ಎಂದು ಕುಟುಕಿದರು.

ಮುಖ್ಯಮಂತ್ರಿ ಸ್ಥಾನ ಜೇಬಲಿಲ್ಲ: ‘ಕಾಂಗ್ರೆಸ್‌ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಅನ್ನೋ ವಿಷಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಮುಂದೆಯೂ ಬಿಜೆಪಿಯೇ ಆಡಳಿತಕ್ಕೆ ಬರುತ್ತೆ. ಇಂತಹ ಸನ್ನಿವೇಶದಲ್ಲೂ ಸಿದ್ದರಾಮಯ್ಯ ಮುಂದಿನ ಮುಖ್ಯ ಮಂತ್ರಿ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸ್ಥಾನ ಜೇಬಲಿಲ್ಲ, ತೆಗೆದು ಒಬ್ಬರಿಗೆ ಕೊಡೋಕೆ’ ಎಂದು ಲೇವಡಿ ಮಾಡಿದರು.

‘ರಾಜ್ಯದ ಜನ ಕಾಂಗ್ರೆಸ್ ಪಕ್ಷ ತಿರಸ್ಕಾರ ಮಾಡಿದ್ದಾರೆ. ಉಪ ಚುನಾವಣೆಯಲ್ಲೂ ಬುದ್ಧಿ ಕಲಿಸಿದ್ದಾರೆ. ಆದರೂ ಅವರಿಗೆ ಬುದ್ಧಿ ಬಂದಿಲ್ಲ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಕ್ಕೂ ಅವಕಾಶ ಸಿಗುತ್ತದೋ ಇಲ್ಲವೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು.

‘ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ಈಗಲೇ ಈ ರೀತಿ ಹೇಳಿಕೆ ನೀಡುತ್ತಿರುವ ಕಾಂಗ್ರೆಸ್ ನಾಯಕರು ಮೊದಲು ಗೆದ್ದು ಬರಬೇಕು. ಆಮೇಲೆ ಶಾಸಕರು ಸೇರಿ ತೀರ್ಮಾನ ಮಾಡುತ್ತಾರೆ. ಅದನ್ನು ಕೇಂದ್ರದ ನಾಯಕರು ಒಪ್ಪಬೇಕು. ಹೀಗಿರುವಾಗ, ಕಾಂಗ್ರೆಸ್‌ ನಡೆ ಕರಿಬೆಕ್ಕನ್ನು ಕತ್ತಲೆ ಕೋಣೆಯಲ್ಲಿ ಹುಡುಕುವಂತಿದೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.