ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ಜಿಲ್ಲೆಯಲ್ಲೂ ಗರಿಗೆದರಿದ ಸಚಿವ ಸ್ಥಾನದ ನಿರೀಕ್ಷೆ

ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ, ಕುಮಾರ್ ಬಂಗಾರಪ್ಪ ಹೆಸರು ಮುಂಚೂಣಿಗೆ
Last Updated 29 ಜುಲೈ 2021, 6:44 IST
ಅಕ್ಷರ ಗಾತ್ರ

ಶಿವಮೊಗ್ಗ: ಬಸರಾಜ ಬೊಮ್ಮಾಯಿ ಅವರು 30ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಂತೆ ಜಿಲ್ಲೆಯಲ್ಲೂ ಸಚಿವ ಸ್ಥಾನದ ನಿರೀಕ್ಷೆ ಗರಿಗೆದರಿದೆ.

2018ರಲ್ಲಿ ನಡೆದ ಚುನಾವಣೆ ಯಲ್ಲಿ ಜಿಲ್ಲೆಯ7 ವಿಧಾನಸಭಾ ಕ್ಷೇತ್ರಗಳಲ್ಲಿ 6ರಲ್ಲಿ ಬಿಜೆಪಿ ಗೆಲುವು ಸಾಧಿಸಿತ್ತು. ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾದ ಬಿ.ಎಸ್‌.ಯಡಿಯೂರಪ್ಪ ಅವರು 15 ತಿಂಗಳ ನಂತರ ಸಮ್ಮಿಶ್ರ ಸರ್ಕಾರ ಬೀಳಿಸಿ ಮುಖ್ಯಮಂತ್ರಿಯಾಗಿ ಅಧಿಕಾರ ಚುಕ್ಕಾಣಿ ಹಿಡಿದಿದ್ದರು. ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಕೆ.ಎಸ್.ಈಶ್ವರಪ್ಪ, ಸೊರಬ ವಿಧಾನಸಭಾ ಕ್ಷೇತ್ರದಿಂದ ಕುಮಾರ್ ಬಂಗಾರಪ್ಪ, ಸಾಗರ ಹರತಾಳು ಹಾಲಪ್ಪ, ತೀರ್ಥಹಳ್ಳಿ ಆರಗ ಜ್ಞಾನೇಂದ್ರ ಹಾಗೂ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಿಂದ ಕೆ.ಬಿ.ಅಶೋಕ ನಾಯ್ಕ ವಿಧಾನಸಭೆ ಪ್ರವೇಶಿಸಿದ್ದರು.

ಬಿಜೆಪಿ ಶಕ್ತಿ ಕೇಂದ್ರವೆಂದೇ ಗುರುತಿಸಿಕೊಂಡಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಯಡಿಯೂರಪ್ಪ (8 ಬಾರಿ) ಹೊರತುಪಡಿಸಿದರೆ ನಾಲ್ವರು ಮೂರರಿಂದ ಐದುಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕೆ.ಎಸ್.ಈಶ್ವರಪ್ಪ ಅವರು 5 ಬಾರಿ, ಆರಗ ಜ್ಞಾನೇಂದ್ರ 4 ಬಾರಿ, ಕುಮಾರ್ ಬಂಗಾರಪ್ಪ 4 ಬಾರಿ,ಹಾಲಪ್ಪ ಹರತಾಳು 3 ಬಾರಿ ಶಾಸಕರಾಗಿದ್ದಾರೆ. ಗ್ರಾಮಾಂತರ ಕ್ಷೇತ್ರದ ಅಶೋಕ ನಾಯ್ಕ ಒಬ್ಬರೇ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದವರು.

ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ಕೆ.ಎಸ್‌.ಈಶ್ವರಪ್ಪ ಅವರಿಗೆ ಮಂತ್ರಿಗಿರಿ ಸಿಕ್ಕಿತ್ತು. ಈಗ ಹೊಸ ಸರ್ಕಾರದಲ್ಲಿ ಜಿಲ್ಲೆಯ ಯಾರಿಗೆ ಮಂತ್ರಿಯಾಗುವ ಯೋಗ ದೊರಕಲಿದೆ ಎನ್ನುವ ಲೆಕ್ಕಾಚಾರ ಆರಂಭವಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದಾಗ ಶಾಸಕರಾದ ಆರಗ ಜ್ಞಾನೇಂದ್ರ, ಹರತಾಳು ಹಾಲಪ್ಪ ಅವರು ಮಂತ್ರಿ ಸ್ಥಾನದ ಆಕಾಂಕ್ಷಿಗಳಾಗಿದ್ದರು. ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾದ ನಂತರ ಹಿರಿಯ ಶಾಸಕ ಆರಗ, ಹರತಾಳು ಅವರಿಗೆ ನಿಗಮ ಮಂಡಳಿಯ ಜವಾಬ್ದಾರಿ ನೀಡಿದ್ದರು.

ಸಚಿವರಾಗಿದ್ದವರು ಮೂವರು: ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ನಾಲ್ವರಲ್ಲಿ ತೀರ್ಥಹಳ್ಳಿ ಕ್ಷೇತ್ರದ ಆರಗ ಜ್ಞಾನೇಂದ್ರ ಹೊರತುಪಡಿಸಿದರೆ ಉಳಿದ ಮೂವರಿಗೆ ಈ ಹಿಂದೆ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಕೆ.ಎಸ್. ಈಶ್ವರಪ್ಪ ಅವರು ಉಪಮುಖ್ಯಮಂತ್ರಿಯಾಗಿ, ಇಂಧನ ಸಚಿವ, ಬೃಹತ್ ನೀರಾವರಿ ಸಚಿವ, ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.1996ರಲ್ಲಿ ಸೊರಬ ಕ್ಷೇತ್ರದಿಂದ ಕಾಂಗ್ರೆಸ್ ಪರ ಸ್ಪರ್ಧಿಸಿ ಗೆಲುವು ಕಂಡಿದ್ದ ಕುಮಾರ್ ಬಂಗಾರಪ್ಪ ನಂತರ 1999ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸಣ್ಣ ನೀರಾವರಿ ಖಾತೆ ಸಚಿವರಾಗಿದ್ದರು. 2004 ಹಾಗೂ 2018ರಲ್ಲೂ ಗೆಲುವು ಸಾಧಿಸಿದ್ದರು.

ಹೊಸನಗರ ವಿಧಾನಸಭಾ ಕ್ಷೇತ್ರದಿಂದ 2004ರಲ್ಲಿ, ಸೊರಬ ವಿಧಾನಸಭಾ ಕ್ಷೇತ್ರದಿಂದ 2008ರಲ್ಲಿ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದಿಂದ 2018ರಲ್ಲಿ ಹಾಲಪ್ಪ ಹರತಾಳು ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. 2008ರಲ್ಲಿ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಸರ್ಕಾರದಲ್ಲಿ ಆಹಾರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

ಹೊಸ ಸಚಿವ ಸಂಪುಟದಲ್ಲಿ ಕೆ.ಎಸ್‌.ಈಶ್ವರಪ್ಪ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ ಕಡಿಮೆ. ಅವರನ್ನು ಪಕ್ಷದ ಜವಾಬ್ದಾರಿಗೆ ನಿಯೋಜಿಸಬಹುದು ಎನ್ನಲಾಗುತ್ತಿದೆ. ಹರತಾಳು ಹಾಲಪ್ಪ, ಕುಮಾರ್ ಬಂಗಾರಪ್ಪ ಜತೆ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಹೆಸರುಗಳು ಮುನ್ನೆಲೆಗೆ ಬಂದಿವೆ.

ಒಂದು ಕಾಲದಲ್ಲಿ ಮುಖ್ಯಮಂತ್ರಿ ಹಾಗೂ ಹೆಚ್ಚಿನ ಸಚಿವರನ್ನು ಹೊಂದಿದ್ದ ಹೆಗ್ಗಳಿಕೆ ಶಿವಮೊಗ್ಗ ಜಿಲ್ಲೆಯದ್ದಾಗಿತ್ತು. ಕ್ರಮೇಣ ಸಚಿವ ಸಂಪುಟದಲ್ಲಿ ಶಿವಮೊಗ್ಗ ಜಿಲ್ಲೆಯ ಪ್ರಾತಿನಿಧ್ಯ ಕಡಿಮೆಯಾಗತೊಡಗಿತು. ಮುಖ್ಯಮಂತ್ರಿ ತವರು ಜಿಲ್ಲೆ ಎಂಬ ಕಾರಣವೇ ಉಳಿದವರಿಗೆ ತೊಡಕಾಗಿತ್ತು. ಈ ಬಾರಿ ಆ ಕೊರತೆ ನೀಗಬಹುದು ಎಂಬ ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.

ಜ್ಞಾನೇಂದ್ರಗೆ ಒಲಿಯುವುದೇ ಅದೃಷ್ಟ?
ವಿಧಾನಸಭೆ ಹಾಗೂ ಪಕ್ಷದಲ್ಲಿ ಹಿರಿತನ, ಪಕ್ಷ ನಿಷ್ಠೆ, ವರ್ಚಸ್ಸು ಎಲ್ಲವೂ ಆರಗ ಜ್ಞಾನೇಂದ್ರ ಅವರಿಗೆ ಇದೆ. ಆದರೆ, ಜಿಲ್ಲೆ ಮತ್ತು ಜಾತಿ ಲೆಕ್ಕಾಚಾರಗಳು ಅವರ ಸಚಿವ ಸ್ಥಾನಕ್ಕೆ ತೊಡಕಾಗಿತ್ತು. 1999ರಲ್ಲಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಅವರಂತಹ ನಾಯಕರು ಸೋತಾಗಲೂ ಆರಗ ಜ್ಞಾನೇಂದ್ರ ಆ ಚುನಾವಣೆಯಲ್ಲಿ ಗೆದ್ದಿದ್ದರು. ಹಿರಿತನದ ಆಧಾರದ ಮೇಲೆ ಹೊಸ ಸರ್ಕಾರದಲ್ಲಿ ಅವಕಾಶ ಸಿಕ್ಕರೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.

ಕುಮಾರ್ ಬಂಗಾರಪ್ಪ ಹಾಗೂ ಹರತಾಳು ಹಾಲಪ್ಪ ಇಬ್ಬರಿಗೂ ಸಚಿವರಾಗಿ ಕೆಲಸ ಮಾಡಿದ ಅನುಭವವಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಈಡಿಗ ಸಮುದಾಯಕ್ಕೆ ಸೇರಿದವರು. ಜಿಲ್ಲೆಯಲ್ಲಿ ಈಡಿಗ ಸಮುದಾಯದ ಚರ್ಚೆ ಮುನ್ನೆಲೆಗೆ ಬಂದರೆ ಅವರಿಬ್ಬರ ಪೈಕಿ ಒಬ್ಬರಿಗೆ ಅವಕಾಶ ಸಿಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT