ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುದಾನ ಹಂಚಿಕೆಯಲ್ಲಿ ತಾರತಮ್ಯ

ನಗರಸಭೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಆಕ್ರೋಶ
Last Updated 1 ಮಾರ್ಚ್ 2022, 4:01 IST
ಅಕ್ಷರ ಗಾತ್ರ

ಸಾಗರ: ನಗರಸಭೆ ವತಿಯಿಂದ ನಡೆಯುವ ವಿವಿಧ ಕಾಮಗಾರಿಗಳಿಗೆ ಅನುದಾನ ಹಂಚಿಕೆ ಮಾಡುವಾಗ ಆಡಳಿತ ಪಕ್ಷದ ಸದಸ್ಯರು ಇರುವ ವಾರ್ಡ್‌ಗಳಿಗೆ ಮಾತ್ರ ಹೆಚ್ಚಿನ ಅನುದಾನ ನೀಡಿ ವಿರೋಧ ಪಕ್ಷದ ಸದಸ್ಯರ ವಾರ್ಡ್‌ಗಳಿಗೆ ಕಡಿಮೆ ಅನುದಾನ ನೀಡುತ್ತಿರುವ ವಿಷಯ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು.

ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯೆ ಎನ್. ಲಲಿತಮ್ಮ, ‘ನಗರೋತ್ಥಾನ ಯೋಜನೆ ಸೇರಿ ವಿವಿಧ ಯೋಜನೆಗಳ ಕಾಮಗಾರಿಗೆ ಕ್ರಿಯಾಯೋಜನೆ ರೂಪಿಸುವಾಗ ಬಿಜೆಪಿ ಸದಸ್ಯರು ಇಲ್ಲದ ವಾರ್ಡ್‌ಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ನಡೆದುಕೊಳ್ಳಲಾಗುತ್ತಿದೆ. ನಾವು ಕೂಡ ಜನರಿಂದ ಆರಿಸಿ ಬಂದಿದ್ದೇವೆ. ಈ ರೀತಿಯಾದರೆ ನಾವು ಜನರಿಗೆ ಉತ್ತರ ಕೊಡುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನ ಇತರ ಸದಸ್ಯರಾದ ಮಧು ಮಾಲತಿ ಹಾಗೂ ಗಣಪತಿ ಮಂಡಗಳಲೆ ಅವರೂ ಲಲಿತಮ್ಮ ಅವರ ಮಾತಿಗೆ ದನಿಗೂಡಿಸಿದರು. ಈ ಹಂತದಲ್ಲಿ ಸಭೆಯ ವಿಷಯಸೂಚಿಯಲ್ಲಿ ಇಲ್ಲದ ವಿಷಯಗಳನ್ನು ಪ್ರಸ್ತಾಪಿಸುವ ಬಗ್ಗೆ ಬಿಜೆಪಿ ಸದಸ್ಯ ಟಿ.ಡಿ. ಮೇಘರಾಜ್ ಕ್ರಿಯಾಲೋಪ ಎತ್ತಿದರು.

ಇಲ್ಲಿನ ನಗರಸಭೆಯಲ್ಲಿ ಹಲವು ಹಿರಿಯರು ಈ ಹಿಂದೆ ಮುತ್ಸದ್ಧಿಗಳಂತೆ ಕಾರ್ಯನಿರ್ವಹಿಸಿದ್ದಾರೆ. ಈ ಪರಂಪರೆ ಮುಂದುವರಿಯಬೇಕಿದೆ. ನಿಯಮಾನುಸಾರ ಸಭೆ ನಡೆಸದಿದ್ದರೆ ಸಭೆಗೆ ಗೌರವ ಬರುವುದಿಲ್ಲ. ಅನುದಾನ ಹಂಚಿಕೆ ವಿಷಯದಲ್ಲಿ ವಿರೋಧ ಪಕ್ಷದ ಸದಸ್ಯರೊಂದಿಗೆ ಚರ್ಚಿಸಿ ನಂತರ ಕ್ರಿಯಾಯೋಜನೆ ರೂಪಿಸುವುದು ಸೂಕ್ತ ಎಂದರು.

ನಗರದ 2ನೇ ವಾರ್ಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮದರಸಾದಲ್ಲಿ ಪ್ರಾರ್ಥನೆ ನಡೆಸಲು ಅನಗತ್ಯ ತೊಂದರೆ ನೀಡುತ್ತಿರುವ ವಿಷಯವನ್ನು ಜೆಡಿಎಸ್ ಸದಸ್ಯ ಸೈಯದ್ ಜಾಕೀರ್ ಪ್ರಸ್ತಾಪಿಸಿದರು. ಹಿಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದರೂ ಮದರಸಾಕ್ಕೆ ತೊಂದರೆ ಕೊಡುವುದನ್ನು ಕೆಲವರು ಮುಂದುವರಿಸಿದ್ದಾರೆ ಎಂದು ಅವರು ಆಕ್ಷೇಪಿಸಿದರು.

ಬಿಜೆಪಿ ಸದಸ್ಯ ಕೆ.ಆರ್. ಗಣೇಶ್ ಪ್ರಸಾದ್, ‘ಊರಿನ ವಾತಾವರಣ ಸರಿಯಿಲ್ಲದ ಹೊತ್ತಿನಲ್ಲಿ ಸೂಕ್ಷ್ಮ ವಿಷಯಗಳ ಬಗ್ಗೆ ಚರ್ಚಿಸಿ ಅನಗತ್ಯ ಗೊಂದಲ ಉಂಟುಮಾಡುವುದು ಸರಿಯಲ್ಲ. ಯಾವುದೇ ಪ್ರದೇಶದಲ್ಲಿನ ಧಾರ್ಮಿಕ ಶ್ರದ್ಧಾಕೇಂದ್ರದಿಂದ ಸ್ಥಳೀಯರಿಗೆ ತೊಂದರೆಯಾಗಬಾರದು’ ಎಂದು ಪ್ರತಿಪಾದಿಸಿದರು.

ಕಾಂಗ್ರೆಸ್ ಸದಸ್ಯ ಟಿಪ್ ಟಾಪ್ ಬಶೀರ್, ‘ಧಾರ್ಮಿಕ ಶ್ರದ್ಧಾಕೇಂದ್ರದಲ್ಲಿನ ಧಾರ್ಮಿಕ ಆಚರಣೆಗಳು ಸುಗಮವಾಗಿ ನಡೆದುಕೊಂಡು ಹೋಗುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ’ಎಂದರು.

ಈ ವಿಷಯದಲ್ಲಿ ಮಾತಿಗೆ ಮಾತು ಬೆಳೆದು ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.

ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ವಿ. ಮಹೇಶ್, ಪೌರಾಯುಕ್ತ ರಾಜು ಡಿ. ಬಣಕಾರ್ ಅವರೂ ಈ ಸಂದರ್ಭದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT