ಶನಿವಾರ, ಮೇ 15, 2021
24 °C
ಸರ್ವೆ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್ ನೇತೃತ್ವ

ಹೈಕೋರ್ಟ್‌ ಆದೇಶ: ಗಣಪತಿ ಕೆರೆ ಮರು ಸರ್ವೆ ಶುರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಗರ: ಹೈಕೋರ್ಟ್ ಆದೇಶದಂತೆ ಶನಿವಾರ ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆಯ ಮರು ಸರ್ವೆ ಕಾರ್ಯ ನಡೆಯಿತು.

ರಾಜ್ಯ ಸರ್ವೆ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಇ. ನೇತೃತ್ವದಲ್ಲಿ 10ಕ್ಕೂ ಹೆಚ್ಚು ಜನರ ತಂಡ ಸರ್ವೆ ಕಾರ್ಯದಲ್ಲಿ ಭಾಗಿಯಾಗಿತ್ತು.

ಇತಿಹಾಸ ಪ್ರಸಿದ್ಧ ಗಣಪತಿ ಕೆರೆಯನ್ನು ಪ್ರಭಾವಿ ವ್ಯಕ್ತಿಗಳು, ಧಾರ್ಮಿಕ ಸಂಸ್ಥೆಗಳು ಒತ್ತುವರಿ ಮಾಡಿವೆ ಎಂದು ನಗರದ ಕಿರಣ್ ಗೌಡ ಮತ್ತು ಮಹೇಶ್ ಕುಮಾರ್ ಟಿ. ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ದಾಖಲಿಸಿದ್ದರು. ಕೆರೆ ಒತ್ತುವರಿಯನ್ನು ತೆರವುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಅವರು ಕೋರಿದ್ದರು.

ಹಲವು ಬಾರಿ ಗಣಪತಿ ಕೆರೆಯನ್ನು ಸರ್ವೆ ಮಾಡಿದ್ದರೂ ಅದರ ನಿಖರ ಅಳತೆಯನ್ನು ಗುರುತಿಸುವಲ್ಲಿ, ಒತ್ತುವರಿಯ ಪ್ರಮಾಣವನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಲಾಗಿತ್ತು. ಈ ಕಾರಣ ಕೆರೆಯ ಮರು ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಹೈಕೋರ್ಟ್ ಸರ್ವೆ ಇಲಾಖೆಗೆ ಸೂಚನೆ ನೀಡಿತ್ತು.

ಸುದ್ದಿಗಾರರೊಂದಿಗೆ ಮಾತನಾಡಿದ ಸರ್ವೆ ಇಲಾಖೆಯ ಜಂಟಿ ನಿರ್ದೇಶಕ ಪ್ರಕಾಶ್ ಇ., ‘ಸ್ಥಳೀಯ ಅಧಿಕಾರಿಗಳೊಂದಿಗೆ ಸರ್ವೆ ನಡೆಸುವುದು ಬೇಡ ಎಂಬ ಹೈಕೋರ್ಟ್ ಸೂಚನೆಯನ್ನು ಪಾಲಿಸಿ ಸರ್ವೆ ನಡೆಸಲಾಗುತ್ತಿದೆ. ಕೆರೆ ವಿಸ್ತೀರ್ಣದ ಕುರಿತ ಮೂಲ ದಾಖಲೆಗಳನ್ನು ಪರಿಶೀಲಿಸಿ 81 ಕೆರೆ ಅಚ್ಚುಕಟ್ಟುದಾರರಿಗೆ ನೋಟಿಸ್ ನೀಡಿದ ನಂತರವೇ ಸರ್ವೆ ಮಾಡಲಾಗುತ್ತಿದೆ. ಎಲ್ಲಾ ಅಂಶ ಪರಿಶೀಲಿಸಿನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.

ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ನಗರಸಭೆ ಪೌರಾಯುಕ್ತ ಎಚ್.ಕೆ. ನಾಗಪ್ಪ, ನಗರ ಠಾಣೆ ವೃತ್ತ ನಿರೀಕ್ಷಕ ಅಶೋಕ್ ಕುಮಾರ್, ಪಿಎಸ್‌ಐ ತುಕಾರಾಮ್ ಸಾಗರ್ ಕರ್, ದೂರುದಾರ ಕಿರಣ್ ಗೌಡ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು