ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರರ ಅಭ್ಯುದಯ ಗುರಿ: ಕೆ.ರಘುಪತಿ ಭಟ್‌

Published 30 ಮೇ 2024, 5:17 IST
Last Updated 30 ಮೇ 2024, 5:17 IST
ಅಕ್ಷರ ಗಾತ್ರ

ವಿಧಾನ ಪರಿಷತ್‌ ನೈರುತ್ಯ ಪದವೀಧರರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಉಡುಪಿಯ ಮಾಜಿ ಶಾಸಕರೂ ಆಗಿರುವ ಕೆ.ರಘುಪತಿ ಭಟ್‌ ಸ್ಪರ್ಧಿಸಿದ್ದಾರೆ. ಪದವೀಧರರ ಹಾಗೂ ಶಿಕ್ಷಕರ ಸಮಸ್ಯೆಗಳಿಗೆ ವಿಶೇಷ ಕಾರ್ಯಯೋಜನೆ ರೂಪಿಸಿರುವುದಾಗಿ ಹೇಳುವ  ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

*ನಿಮಗೆ ಯಾಕೆ ಮತ ಹಾಕಬೇಕು ?

ಮೂರು ಬಾರಿ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಸಂಸದೀಯ ವ್ಯವಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ಕೆಲಸ ಮಾಡುವ ಜನಪ್ರತಿನಿಧಿ ಎಂಬ ಕಾರಣಕ್ಕೆ ಮತದಾರರು ನಿರಂತರವಾಗಿ ಗೆಲ್ಲಿಸಿಕೊಂಡು ಬಂದಿದ್ದಾರೆ. ಉದ್ಯಮ ವಿಸ್ತರಣೆ ಮಾಡುವುದಕ್ಕಾಗಲಿ, ಸ್ಥಾನಮಾನ ಪಡೆಯುವುದಕ್ಕಾಗಲಿ ಚುನಾವಣೆಗೆ ಸ್ಪರ್ಧಿಸಿಲ್ಲ. ಗೆದ್ದ 6 ತಿಂಗಳೊಳಗೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ ಭೇಟಿನೀಡಿ ಮತದಾರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುತ್ತೇನೆ. ನಿರಂತರವಾಗಿ ಮತದಾರರ ಸಂಪರ್ಕದಲ್ಲಿ ಇರುತ್ತೇನೆ.

*ನಿಮ್ಮ ಸ್ಪರ್ಧೆ ಬಿಜೆಪಿ ವಿರುದ್ಧವಾ ಅಥವಾ ನಾಯಕರ ವಿರುದ್ಧವಾ ?

ನನ್ನ ಸ್ಪರ್ಧೆ ಬಿಜೆಪಿ ವಿರುದ್ಧವೂ ಅಲ್ಲ, ಯಾವ ನಾಯಕರ ವಿರುದ್ಧವೂ ಅಲ್ಲ. ಸಮಸ್ತ ಕಾರ್ಯಕರ್ತರ ಪ್ರತಿನಿಧಿಯಾಗಿ ಸ್ಪರ್ಧಿಸಿದ್ದೇನೆ. ಪರಿಷತ್ ಚುನಾವಣೆಯಲ್ಲಿ ಟಿಕೆಟ್‌ ನೀಡಲು ಪಕ್ಷದ ನಾಯಕರು ಅನುಸರಿಸಿದ ಮಾನದಂಡದ ಬಗ್ಗೆ ಅಸಮಾಧಾನ ಇದೆ. ದಶಕಗಳ ಕಾಲ ಪಕ್ಷಕ್ಕೆ ದುಡಿದವರನ್ನು ಬದಿಗಿಟ್ಟು ಈಚೆಗೆ ಪಕ್ಷ ಸೇರಿದ, ಸಂಘ ಪರಿವಾರದ ವಿರುದ್ಧ ಪ್ರತಿಭಟಿಸಿದ ವ್ಯಕ್ತಿಗೆ ಮಣೆ ಹಾಕಿದ್ದಕ್ಕೆ ವಿರೋಧವಿದೆ. ನಾಲ್ಕು ದಶಕಗಳಿಂದ ಮಲೆನಾಡು ಕರಾವಳಿಗೆ ತಲಾ ಒದೊಂದು ಸ್ಥಾನ ಹಂಚಿಕೆ ಮಾಡಿಕೊಂಡು ಬರಲಾಗುತ್ತಿದ್ದ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟಿರುವುದಕ್ಕೆ ವಿರೋಧವಿದೆ. 

*ಆಯ್ಕೆಯಾದರೆ ಯಾವ ಕೆಲಸಗಳಿಗೆ ಆದ್ಯತೆ ನೀಡುತ್ತೀರಿ ?

ಶಿಕ್ಷಕರ, ಉಪನ್ಯಾಸಕರ ಹಾಗೂ ಸರ್ಕಾರಿ ನೌಕರರ ಪ್ರತಿನಿಧಿಯಾಗಿ ವಿಧಾನ ಪರಿಷತ್‌ನಲ್ಲಿ ಗಟ್ಟಿಯಾಗಿ ದನಿ ಎತ್ತುತ್ತೇನೆ. ಎನ್‌ಪಿಎಸ್‌ ರದ್ದುಗೊಳಿಸಿ ಒಪಿಎಸ್‌ ಜಾರಿಗೆ ಹೋರಾಟ ಮಾಡುತ್ತೇನೆ, ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿ, ಪಿಂಚಣಿ ಸೌಲಭ್ಯ, ಶಿಕ್ಷಕರ ನೇಮಕಾತಿ ಸೇರಿದಂತೆ ಶಿಕ್ಷಕರ ಹಾಗೂ ಪದವೀಧರರ ಬಹುದಿನಗಳ ಬೇಡಿಕೆ ಈಡೇರಿಕೆಗೆ ಸರ್ಕಾರದ ಮೇಲೆ ಒತ್ತಡ ಹೇರುತ್ತೇನೆ.

*ಪದವೀಧರರ ಅಭ್ಯುದಯಕ್ಕೆ ವಿಶೇಷ ಕಾರ್ಯಕ್ರಮಗಳು ಇವೆಯೇ ?

ಹೌದು, ರಾಜ್ಯದ ಎಲ್ಲ ಪದವೀಧರರನ್ನೊಳಗೊಂಡ ಡಾಟಾ ಬೇಸ್‌ ತಂತ್ರಾಂಶ ವ್ಯವಸ್ಥೆ ರೂಪಿಸುವ ಆಶಯವಿದೆ. ಪದವೀಧರರ ಸಮಸ್ಯೆಗಳನ್ನು ಚರ್ಚಿಸಲು ಪರಿಹರಿಸಿಕೊಳ್ಳಲು ಇದು ಸೂಕ್ತ ವೇದಿಕೆಯಾಗಲಿದೆ.  ಪದವೀಧರರಿಗೆ ಉದ್ಯೋಗಾವಕಾಶಗಳ ಮಾಹಿತಿ ನೀಡಲು, ಸಮಸ್ಯೆಗಳನ್ನು ಅರಿತು ಸದನದಲ್ಲಿ ದನಿ ಎತ್ತಲು ಸಹಕಾರಿಯಾಗಲಿದೆ.

*ಮೊದಲ ಬಾರಿಗೆ ಬಿಜೆಪಿ ಬಿಟ್ಟು ಸ್ಪರ್ಧಿಸಿದ್ದೀರಿ, ಸ್ಪಂದನೆ ಹೇಗಿದೆ ?

‘ಶಿಕಾರಿಪುರ’ದಲ್ಲೇ (ಯಡಿಯೂರಪ್ಪ ಅವರ ತವರು ಕ್ಷೇತ್ರ) ದೊಡ್ಡ ಸಂಖ್ಯೆಯ ಕಾರ್ಯಕರ್ತರ ಬೆಂಬಲ ಸಿಕ್ಕಿರುವುದು ಗೆಲುವಿನ ಹುಮ್ಮಸ್ಸನ್ನು ಹೆಚ್ಚಿಸಿದೆ. ಮತದಾರರಿಗೆ ಹೊಸದಾಗಿ ಪರಿಚಯ ಮಾಡಿಕೊಳ್ಳುವ ಪ್ರಸಂಗ ಎಲ್ಲೂ ಎದುರಾಗಿಲ್ಲ. ಹಿಂದೆ ರಾಷ್ಟ್ರೀಯವಾದದ ಪರ ಹಾಗೂ ಹಿಜಾಬ್ ವಿರುದ್ಧ ನಡೆಸಿ ಹೋರಾಟಗಳನ್ನು ಮತದಾರರು ಗುರುತಿಸಿ ಬೆಂಬಲ ನೀಡುತ್ತಿದ್ದಾರೆ. ಬಹುಕಾಲ ಸಕ್ರಿಯ ರಾಜಕಾರಣದಲ್ಲಿದ್ದ ಪರಿಣಾಮ ಎಲ್ಲ ಜಿಲ್ಲೆಗಳಲ್ಲಿ ಉತ್ತಮ ಸ್ಪಂದನ ವ್ಯಕ್ತವಾಗುತ್ತಿದೆ.

*ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ, ಮುಂದಿನ ರಾಜಕೀಯ ನಿಲುವು ಏನು ?

ಪಕ್ಷದಿಂದ ಉಚ್ಛಾಟನೆ ಮಾಡಿದ್ದನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಿಂದೆ, ವಜಾಗೊಂಡವರು ಪ್ರಸ್ತುತ ಬಿಜೆಪಿಯಲ್ಲೇ ದೊಡ್ಡ ಹುದ್ದೆಯಲ್ಲಿದ್ದಾರೆ. ಜಗದೀಶ ಶೆಟ್ಟರ್ ಕೂಡ ವಜಾಗೊಂಡಿದ್ದರು. ಒಂದೇ ವರ್ಷದಲ್ಲಿ ಪಕ್ಷಕ್ಕೆ ಮರಳಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಗೆದ್ದರೂ ಸೋತರೂ ಬಿಜೆಪಿಯಲ್ಲೇ ಇರುತ್ತೇನೆ. 

*ಕೆ.ಎಸ್‌.ಈಶ್ವರಪ್ಪ ಬೆಂಬಲ ಗೆಲುವಿಗೆ ಪೂರಕವಾಗಲಿದೆಯೇ ?

ಕೆ.ಎಸ್‌.ಈಶ್ವರಪ್ಪ ಹಾಗೂ ಸಮಸ್ತ ರಾಷ್ಟ್ರಭಕ್ತರ ಬಳಗ ಬೆಂಬಲಕ್ಕೆ ನಿಂತಿರುವುದು ಆನೆಬಲ ಬಂದಂತಾಗಿದ್ದು, ಗೆಲುವಿಗೆ ಪೂರಕವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT