ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಭೂಮಿ ನೀಡದ ಸರ್ಕಾರ: ಕೆ. ದಿವಾಕರ್ ಆರೋಪ

Last Updated 27 ಏಪ್ರಿಲ್ 2022, 4:55 IST
ಅಕ್ಷರ ಗಾತ್ರ

ಸಾಗರ: ಜಿಲ್ಲೆಯಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ 13,067 ಎಕರೆ ಜಮೀನನ್ನು ಮೀಸಲಿಟ್ಟಿದ್ದರೂ ಸಂತ್ರಸ್ತರಿಗೆ ಭೂಮಿಯ ಹಕ್ಕು ನೀಡದೆ ಸರ್ಕಾರ ಸತಾಯಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರಕೆ. ದಿವಾಕರ್ ದೂರಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಡೆನೂರು, ಲಿಂಗನಮಕ್ಕಿ ಜಲಾಶಯ ನಿರ್ಮಾಣ ಸಂದರ್ಭದಲ್ಲಿ ತಮ್ಮ ಭೂಮಿಯನ್ನು ನೀಡಿದ ಮಲೆನಾಡಿನ ಜನರಿಗೆ 7 ದಶಕಗಳಿಂದ ನ್ಯಾಯ ದೊರಕಿಲ್ಲ. ಬೇರೆ ಬೇರೆ ಪ್ರದೇಶಗಳಲ್ಲಿ ಅವರು ವಾಸಿಸುತ್ತಿದ್ದು, ಸರ್ಕಾರ ಅವರ ಕುರಿತು ನಿರ್ಲಕ್ಷ್ಯಧೋರಣೆ ತಾಳಿದೆ’ ಎಂದು ಟೀಕಿಸಿದರು.

ಕಂದಾಯ ಇಲಾಖೆ ವ್ಯಾಪ್ತಿಗೆ ಸೇರಿದ ಭೂಮಿಯನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿಸಿರುವುದು ಹಲವು ಗೊಂದಲಗಳಿಗೆ ಕಾರಣವಾಗಿದೆ. ಜನವಸತಿ ಪ್ರದೇಶವನ್ನು ಅರಣ್ಯ ಭೂಮಿ ಎಂದು ಪರಿಗಣಿಸುವುದೇ ಅವೈಜ್ಞಾನಿಕವಾಗಿದೆ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಮದನ್ ಗೋಪಾಲ್ ನೇತೃತ್ವದಲ್ಲಿ ಸಮಿತಿ ರಚಿಸಿ ಕಂದಾಯ ಹಾಗೂ ಅರಣ್ಯ ಭೂಮಿ ಕುರಿತು ಸರ್ವೆ ನಡೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿತ್ತು ಎಂಬುದನ್ನು ಅವರು ನೆನಪಿಸಿದರು.

2017ನೇ ಸಾಲಿನಲ್ಲಿ ಕಾಗೋಡು ತಿಮ್ಮಪ್ಪ ಅವರ ಪ್ರಯತ್ನದಿಂದ ಜಿಲ್ಲೆಯ 9,934 ಎಕರೆ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಮರಳಿಸುವ ಪ್ರಕ್ರಿಯೆ ನಡೆದಿತ್ತು. ಆದರೆ ತದನಂತರ ಕೇಂದ್ರ ಸರ್ಕಾರದಿಂದ ಇದಕ್ಕೆ ಅನುಮತಿ ಪಡೆಯುವ ಪ್ರಯತ್ನ ನಡೆಯದ ಕಾರಣ ಈ ಕಾರ್ಯ ನನೆಗುದಿಗೆ ಬಿದ್ದಿದೆ ಎಂದರು.

ಶರಾವತಿ ಮುಳುಗಡೆ ಸಂತ್ರಸ್ತರು ನಾಡಿಗೆ ಬೆಳಕು ನೀಡಲು ತಮ್ಮ ಬದುಕನ್ನೇ ತ್ಯಾಗ ಮಾಡಿದ್ದಾರೆ. ಇಂತಹವರ ಮನೆ ಬಾಗಿಲಿಗೆ ಹೋಗಿ ಭೂಮಿಯ ಹಕ್ಕು ನೀಡಬೇಕಾದದ್ದು ಸರ್ಕಾರದ ಕರ್ತವ್ಯ. ಬದಲಾಗಿ ಅವರನ್ನು ಕಚೇರಿ, ನ್ಯಾಯಾಲಯಕ್ಕೆ ಅಲೆಸುವುದು ಸರಿಯಲ್ಲ. ಎಲ್ಲಾ ಪಕ್ಷದವರು ಸೇರಿ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಹಿಜಾಬ್ ವಿವಾದದ ನಂತರ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದೆ. ಜಾತ್ರೆಗಳಲ್ಲಿ ಒಂದು ಸಮುದಾಯದವರಿಗೆ ಮಾತ್ರ ಅಂಗಡಿ ಹಾಕಲು ಅವಕಾಶ ನೀಡುವುದು, ಇಂತಹ ಅಂಗಡಿಗಳಲ್ಲೆ ಸರಕು ಖರೀದಿಸಬೇಕು ಎಂದು ಒತ್ತಾಯ ಹೇರುವುದು ಅಪಾಯಕಾರಿ ಬೆಳವಣಿಗೆ. ಮುಂದಿನ ದಿನಗಳಲ್ಲಿ ಬಿಜೆಪಿ ಇದಕ್ಕಾಗಿ ಭಾರಿ ಬೆಲೆ ತೆರಲಿದೆ ಎಂದರು.

ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ ಎನ್ನುವುದಕ್ಕೆ ಎಂಡಿಎಫ್ ವಿವಾದವೇ ಸಾಕ್ಷಿಯಾಗಿದೆ. ಎಂಡಿಎಫ್ ಸಂಸ್ಥೆಯ ಸರ್ವ ಸದಸ್ಯರ ಸಭೆಯಲ್ಲಿ ಕ್ಷೇತ್ರದ ಶಾಸಕರ ಎದುರೇ ಹಲ್ಲೆ ಪ್ರಕರಣ ನಡೆದಿದ್ದರೂ ಗೃಹ ಸಚಿವರು ಒತ್ತಡ ಹೇರುತ್ತಿರುವ ಕಾರಣಕ್ಕೆ ಪೊಲೀಸರು ತಪ್ಪಿತಸ್ಥರ ಮೇಲೆ ಮೊಕದ್ದಮೆ ದಾಖಲಿಸಿಲ್ಲ ಎಂದು ದೂರಿದರು.

ವಿಧಾನಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್, ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಸಣ್ಣಪುಟ್ಟ ಸಮಾಜಗಳನ್ನು ಗುರುತಿಸಿ ಆ ಸಮಾಜದ ಉತ್ಸಾಹಿಗಳಿಗೆ ಟಿಕೆಟ್ ನೀಡಬೇಕು. ತಂದೆ ನಂತರ ಮಕ್ಕಳಿಗೆ, ಅಣ್ಣನ ನಂತರ ತಮ್ಮನಿಗೆ, ಅವರ ಸಂಬಂಧಿಗಳಿಗೆ ಟಿಕೆಟ್ ನೀಡುವ ಪ್ರವೃತ್ತಿ ಕೊನೆಯಾಗಬೇಕು’ ಎಂದು ಒತ್ತಾಯಿಸಿದರು.

ಸೊರಬ ಕ್ಷೇತ್ರದ ಕಾಂಗ್ರೆಸ್ ಮುಖಂಡ ರಾಜು ಎಂ. ತಲ್ಲೂರು, ‘ಸೊರಬ ಕ್ಷೇತ್ರದಲ್ಲಿ ಸತತವಾಗಿ ಸೋಲು ಕಂಡವರಿಗೆ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅವಕಾಶ ನೀಡಬಾರದು. ಒಂದೇ ಕುಟುಂಬದ ಆಳ್ವಿಕೆಯಿಂದ ಸೊರಬ ಕ್ಷೇತ್ರವನ್ನು ಹೊರತರುವತ್ತ ಗಮನ ಹರಿಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT