ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡಿ ಸಾಂಸ್ಕೃತಿಕ ಕೇಂದ್ರ ಸ್ತಬ್ಧ

ಶಿಕಾರಿಪುರ ರಂಗಭೂಮಿ ಚಟುವಟಿಕೆ ಕಸಿದುಕೊಂಡ ಕೊರೊನಾ
Last Updated 13 ಮೇ 2021, 9:01 IST
ಅಕ್ಷರ ಗಾತ್ರ

ಶಿಕಾರಿಪುರ: ಪಟ್ಟಣದಲ್ಲಿ ನಡೆಯುತ್ತಿದ್ದ ರಂಗಭೂಮಿ ಕ್ಷೇತ್ರದ ಚಟುವಟಿಕೆಯನ್ನು ಕೊರೊನಾ ಕಸಿದುಕೊಂಡಿದ್ದು, ಗುಡಿ ಸಾಂಸ್ಕೃತಿಕ ಕೇಂದ್ರ ಸ್ತಬ್ಧವಾಗಿದೆ.

ಪಟ್ಟಣದ ಗುಡಿ ಸಾಂಸ್ಕೃತಿಕ ಕೇಂದ್ರ ಸುಮಾರು 10 ವರ್ಷಗಳಿಂದ ತಾಲ್ಲೂಕಿನ ಜನರಲ್ಲಿ ರಂಗಭೂಮಿ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯವನ್ನು ಮಾಡುತ್ತಿದೆ. ಈ ಕೇಂದ್ರದಲ್ಲಿ ವರ್ಷದಲ್ಲಿ ಹಲವು ಬಾರಿ ನಾಟಕೋತ್ಸವಗಳು ನಡೆದಿವೆ.

ಹೆಗ್ಗೋಡಿನ ನೀನಾಸಂನ ತಿರುಗಾಟ ತಂಡವೂ ಸೇರಿ ಹಲವು ತಂಡಗಳ ಕಲಾವಿದರು ಈ ಕೇಂದ್ರದಲ್ಲಿ ನಾಟಕ ಪ್ರದರ್ಶನ ಮಾಡಿದ್ದರು. ಮಕ್ಕಳಲ್ಲಿ ರಂಗಭೂಮಿ ಕ್ಷೇತ್ರದ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ‘ಚಿಣ್ಣ ಬಣ್ಣ’ ಬೇಸಿಗೆ ಶಿಬಿರ ಪ್ರತಿ ವರ್ಷ ಆಯೋಜಿಸಲಾಗುತ್ತಿತ್ತು. ಈ ಶಿಬಿರದಲ್ಲಿ ಅಭಿನಯ, ನಾಟಕ ಪ್ರದರ್ಶನ, ಸಂಗೀತ ಒಳಗೊಂಡಂತೆ ವಿವಿಧ ಸಾಂಸ್ಕೃತಿಕ ಕಲೆಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುತ್ತಿತ್ತು.

ಮಕ್ಕಳ ‘ಚಿಣ್ಣ ಬಣ್ಣ’ ಶಿಬಿರದಲ್ಲಿ ಕಲಾವಿದರಾದ ಅರುಣ್ ಸಾಗರ್, ಮಂಡ್ಯ ರಮೇಶ್, ಕಿಶೋರ್ ಅವರಂತಹ ಕಲಾವಿದರು ಪಾಲ್ಗೊಂಡು ಮಕ್ಕಳಿಗೆ ತರಬೇತಿ ನೀಡಿದ್ದರು. ಈ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಶಿಬಿರದಲ್ಲಿ ಪಾಲ್ಗೊಂಡ ಮಕ್ಕಳು ನಾಟಕ ಪ್ರದರ್ಶನ ನೀಡುತ್ತಿದ್ದರು.

ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ಸಿನಿಮಾ ನಿರ್ಮಾಣ ಕುರಿತು ತರಬೇತಿ ಶಿಬಿರ, ಸಿನಿಮಾ ರಸಗ್ರಹಣ ಶಿಬಿರಗಳು ನಡೆದಿವೆ. ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಪಿ.ಶೇಷಾದ್ರಿ ಮೊದಲಾದ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಿದ್ದರು. ‘ಗುಡಿ ರಂಗ ಪಯಣ’ ಎಂಬ ತಿರುಗಾಟ ತಂಡ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರದರ್ಶನ ನೀಡಿತ್ತು. ನಾಲ್ಕು ತಿಂಗಳ ಕಾಲ ತಂಡದ ಕಲಾವಿದರಿಗೆ ತರಬೇತಿ ನೀಡಲಾಗುತ್ತಿತ್ತು.

ಆದರೆ, ಕೊರೊನಾ ಕಾರಣ ಕಳೆದ ವರ್ಷದಿಂದ ರಂಗಭೂಮಿ ಚಟುವಟಿಕೆಗಳು ಸ್ಥಗಿತವಾಗಿವೆ. ರಂಗಪಯಣ ತಂಡಕ್ಕೆ ತರಬೇತಿ ನೀಡಲು
ಅವಕಾಶ ದೊರೆತಿಲ್ಲ. ರಂಗಭೂಮಿ ಕ್ಷೇತ್ರದ ಬಗ್ಗೆ ತರಬೇತಿ ಪಡೆಯುತ್ತಿದ್ದ ಮಕ್ಕಳು ಸಾಂಸ್ಕೃತಿಕವಾಗಿ ಬೆಳವಣಿಗೆ ಹೊಂದುವಲ್ಲಿ ತೊಡಕಾಗಿದೆ. ರಂಗಭೂಮಿ ಚಟುವಟಿಕೆ ನಡೆಸುತ್ತಿದ್ದ ಕೇಂದ್ರದಲ್ಲಿ ಮೌನ ಆವರಿಸಿದೆ. ರಂಗಾಸಕ್ತರು ಕೂಡ ರಂಗಭೂಮಿ ಚಟುವಟಿಕೆ ಇಲ್ಲದ ಕಾರಣ ಬೇಸರಗೊಂಡಿದ್ದಾರೆ. ಕೊರೊನಾ ಸಂಕಷ್ಟ ಬೇಗ ಮುಗಿದು ಮತ್ತೆ ಗುಡಿ ಸಾಂಸ್ಕೃತಿಕ ಕೇಂದ್ರದಲ್ಲಿ ರಂಗಭೂಮಿ ಚಟುವಟಿಕೆ ಆರಂಭವಾಗಲಿ ಎಂಬ ನಿರೀಕ್ಷೆ ರಂಗಾಸಕ್ತರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT