ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ: ನುಡಿದಂತೆ ನಡೆಯದಿರುವುದೂ ಭ್ರಷ್ಟಾಚಾರ- ಹೆಗ್ಗೋಡು ಪ್ರಸನ್ನ ಅಭಿಪ್ರಾಯ

ಸ್ವಾತಂತ್ರ ಭಾರತದ ಅಮೃತ ಮಹೋತ್ಸವ ಕಾರ್ಯಕ್ರಮ
Last Updated 11 ಆಗಸ್ಟ್ 2021, 5:48 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನಾವು ಆದರ್ಶವಾಗಿ ನಡೆದುಕೊಳ್ಳದೇ ಬೇರೆಯವರಿಗೆ ಪ್ರವಚನ ನೀಡುವುದನ್ನು ಭ್ರಷ್ಟಾಚಾರ ವೆಂದೇ ಪರಿಗಣಿಸಬೇಕಾಗುತ್ತದೆ’ ಎಂದು ಹಿರಿಯ ರಂಗಕರ್ಮಿ, ಹೆಗ್ಗೋಡಿನ ದೇಸಿ ಟ್ರಸ್ಟ್‌ನ ಸಂಸ್ಥಾಪಕ ಪ್ರಸನ್ನ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದಲ್ಲಿ ಮಂಗಳವಾರ ಆನ್‍ಲೈನ್‌ನಲ್ಲಿ ಹಮ್ಮಿಕೊಂಡಿದ್ದ ‘ಭಾರತ ಸ್ವಾತಂತ್ರದ ಅಮೃತ ಮಹೋತ್ಸವ’ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಮಹಾತ್ಮ ಗಾಂಧೀಜಿ ಆದರ್ಶ ಕ್ರಮಗಳನ್ನು ಮೊದಲು ಅನುಸರಿಸಿ, ತೋರಿಸಿ ನಂತರ ಜನರಿಗೆ ಮುಂದುವರಿಸಲು ಕರೆ ನೀಡುತ್ತಿದ್ದರು. ಸಾರ್ವಜನಿಕ ಜೀವನದಲ್ಲಿ ನಾಯಕರು, ಗಣ್ಯರು ಪ್ರತಿಪಾದಿಸುವ ಆದರ್ಶಗಳನ್ನು ತಾವು ಮೊದಲು ಕೃತಿಗಿಳಿಸಿ ತೋರಬೇಕು. ರಾಮ ಪ್ರತಿಪಾದಿಸಿದ ಸರಳ ಬದುಕು, ಅಶಕ್ತರಿಗೆ ನಿರ್ಮಿಸಿದ ಆಶ್ರಮ ವ್ಯವಸ್ಥೆ, ಸಭ್ಯತೆಯ ವಿಚಾರಗಳು ಇಂದಿನ ಸಮಾಜ ಕ್ಕೂ ಅನುಕರಣೀಯ ಆಗಬೇಕು. ನಡೆದಂತೆ ನುಡಿಯದಿರುವುದು, ನಡೆಯದೇ ನುಡಿಯುವುದು ಎರಡೂ ಭ್ರಷ್ಟಾಚಾರವಾಗುತ್ತವೆ ಎಂದರು.

ಸುಭದ್ರ ಸಮಾಜವಾದಿ ಮತ್ತು ಪರಿಪೂರ್ಣ ಸಂವಿಧಾನ ಹೊಂದಿದ ದೇಶ ನಮ್ಮದಾದರೂ, ಸಮಾಜದಲ್ಲಿ ಅನುಸರಣೆಯಿಲ್ಲದೇ ಪ್ರತಿಪಾದನೆಗಳು ನಡೆದದ್ದು, ಇಂದು ಎಲ್ಲವನ್ನು ಅನುಮಾನದಿಂದ ನೋಡುವಂತಾಗಿದೆ. ಸರ್ಕಾರಗಳು ಚಳವಳಿ ಮರೆತಿವೆ, ವಿಶ್ವವಿದ್ಯಾಲಯಗಳು ನೈಜ ಕಲಿಕೆಯನ್ನು ಮರೆತಿವೆ. ದೇಶದ ತುಂಬಾ ವಿಚಾರಗಳಿವೆ. ಆದರೆ, ಅವುಗಳ ಸತ್ವ, ಅನುಸರಣೆ, ಪ್ರಾಮಾಣಿಕತೆಯ ಕುರಿತು ಅನುಮಾನಗಳಷ್ಟೇ ಮೂಡುತ್ತವೆ ಎಂದರು.

‘ಪ್ರಜೆಗಳಿಂದ ಆರಂಭಿಸಿ, ನಾಯಕರವರೆಗೂ ಮೊದಲು ನಾವು ಮಾಡಿ ತೋರಿ ನಂತರ ಹೇಳುವ ಪರಿಪಾಠ ಬೆಳೆಯಬೇಕು. ನಾವು ಹೇಳಿದ್ದನ್ನು ಎದುರಿನವರಿಗೆ ಕೇವಲ ಕೇಳಿಸದೇ ಕಾಣಿಸಿ ತೋರಿಸಬೇಕು. ಅದು, ದೇಶ ಕಟ್ಟುವ ರೀತಿಯಾಗಬೇಕು’ ಎಂದು ಪ್ರತಿಪಾದಿಸಿದರು.

ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪ್ರೊ.ಬಿ.ತಿಮ್ಮೇಗೌಡ ಮಾತನಾಡಿ, ‘ಯುವ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಆದರ್ಶಗಳು, ಗುರಿ, ತ್ಯಾಗ–ಬಲಿದಾನಗಳ ಕುರಿತು ಅರಿವಿನ ಕೊರತೆ ಇದೆ. ಕರ್ನಾಟಕದ ಈಸೂರು ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ದೇಶದಾದ್ಯಂತ ಗಾಂಧಿ, ಅಂಬೇಡ್ಕರ್, ತಿಲಕ್‍ ಅವರು ಕೈಗೊಂಡ ಹೋರಾಟಗಳ ಕುರಿತು ರಾಜ್ಯದ ಎಲ್ಲ ಪದವಿ, ಸ್ನಾತಕೋತ್ತರ ಪದವಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಒಂದು ವರ್ಷ ಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಕುವೆಂಪು ವಿಶ್ವ ವಿದ್ಯಾಲಯ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ ಮಾತನಾಡಿ, ‘ಸ್ವಾತಂತ್ರ್ಯ ಹೋರಾಟದ ಜಾಗೃತಿ ಮೂಡಿಸಲು ಆಜಾದಿ ಕೀ ಅಮೃತ್ ಮಹೋತ್ಸವ ಅವಕಾಶ ನೀಡುತ್ತಿದೆ. ಕುವೆಂಪು ವಿಶ್ವವಿದ್ಯಾಲಯವು ಇದರ ಭಾಗವಾಗಿ ಸ್ವಾತಂತ್ರೋತ್ಸವದ ಕುರಿತು ರಸಪ್ರಶ್ನೆ, ಚರ್ಚಾಸ್ಪರ್ಧೆ, ಪ್ರಬಂಧ ಲೇಖನ ಇತ್ಯಾದಿ ಸರಣಿ ಕಾರ್ಯಕ್ರಮ ಯೋಜಿಸಿದೆ’ ಎಂದರು.

ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವೆ ಜಿ.ಅನುರಾಧಾ,ಪರೀಕ್ಷಾಂಗ ಕುಲಸಚಿವ ಡಾ.ಸಿ.ಎಂ.ತ್ಯಾಗರಾಜ, ಅಜಾದಿ ಕಾ ಅಮೃತ ಮಹೋತ್ಸವದ ರಾಜ್ಯ ನೋಡೆಲ್‍ ಅಧಿಕಾರಿ ಡಾ.ಕೆ.ಪ್ರಸನ್ನಕುಮಾರ್, ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಪ್ರೊ.ರಾಮೇಗೌಡ, ಡಾ. ವೀರೂಪಾಕ್ಷಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT