ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ ಉತ್ತಮ ಕ್ರೀಡಾ ಕೇಂದ್ರವಾಗಿಸಲು ನೆರವು: ಸಚಿವ ಕಿರಣ್ ರಿಜಿಜು

ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಭರವಸೆ
Last Updated 22 ಫೆಬ್ರುವರಿ 2021, 4:00 IST
ಅಕ್ಷರ ಗಾತ್ರ

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯನ್ನು ದೇಶದಲ್ಲೇ ಉತ್ತಮ ಕ್ರೀಡಾ ಕೇಂದ್ರವಾಗಿ ರೂಪಿಸಲು ಕೇಂದ್ರ ಸರ್ಕಾರದಿಂದ ಎಲ್ಲ ರೀತಿಯ ನೆರವು ನೀಡಲಾಗುವುದು ಎಂದುಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು.

ನಗರದ ನೆಹರೂ ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಭಾನುವಾರ ಹಮ್ಮಿಕೊಂಡಿದ್ದ ನೆಹರೂ ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಯುವಜನರುದೇಶದಲ್ಲಿ ಇದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗಳನ್ನು ಮಾಡಲು ನಮಗೆ ವಿಫುಲ ಅವಕಾಶಗಳಿವೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಗತ್ಯ ಮೂಲಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ನೆಹರೂ ಕ್ರೀಡಾಂಗಣದ ಸರ್ವಾಂಗೀಣ ವಿಕಾಸಕ್ಕಾಗಿ ರಾಜ್ಯ ಸರ್ಕಾರ ₹ 25 ಕೋಟಿ ಮಂಜೂರು ಮಾಡಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು ₹ 50 ಕೋಟಿ ಅನುದಾನ ನೀಡಿದೆ ಎಂದು ತಿಳಿಸಿದರು.

ವಿಶ್ವದ ಅತಿ ಹೆಚ್ಚಿನ ಯುವಸಮುದಾಯವನ್ನು ಹೊಂದಿರುವ ದೇಶಗಳಲ್ಲಿ ಒಲಿಂಪಿಕ್‌ನಲ್ಲಿ ಪದಕ ಗಳಿಸಲು ಸಾಧ್ಯವಾಗದಿರುವುದು ಬೇಸರದ ಸಂಗತಿ. ಮುಂದಿನ ಒಲಿಂಪಿಕ್‌ನಲ್ಲಿ ಉತ್ತಮ ಸಾಧನೆ ತೋರುವ ನಿಟ್ಟಿನಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಲು ಉದ್ದೇಶಿಸಿದೆ ಎಂದು ವಿವರಿಸಿದರು.

ಕ್ರೀಡಾ ಯೋಜನೆಗಳಲ್ಲಿ ಬದಲಾವಣೆ ತರಲಾಗಿದೆ. ಕ್ರೀಡಾ ವಸತಿನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ತಿಂಗಳಿಗೆ ₹ 50 ಸಾವಿರ ಗೌರವಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.

ಸಂಸದ ಬಿ.ವೈ. ರಾಘವೇಂದ್ರ, ‘ದಕ್ಷಿಣದ ಕೆಲವು ರಾಜ್ಯಗಳನ್ನು ಸೇರಿ ಬೆಂಗಳೂರಿನಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಕಚೇರಿಯನ್ನು ಆರಂಭಿಸಲಾಗಿದೆ. ಅದರ ಉಪ ಪ್ರಾದೇಶಿಕ ಕೇಂದ್ರವನ್ನು ಶಿವಮೊಗ್ಗದಲ್ಲಿ ಆರಂಭಿಸಬೇಕು’ ಎಂದು ಕೇಂದ್ರ ಕ್ರೀಡಾ ಸಚಿವರನ್ನು ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ, ‘ಜಿಲ್ಲೆಯಲ್ಲೂ ಕ್ರೀಡಾಕ್ಷೇತ್ರ ಬಲಪಡಿಸಲು ರಾಜ್ಯ ಸರ್ಕಾರ ಹೆಚ್ಚಿನ ಶ್ರಮ ಕಾಳಜಿ ತೋರಿದೆ. ಸಹ್ಯಾದ್ರಿ ಕಾಲೇಜಿಗೆ ಅಗತ್ಯವಾದ ಕ್ರೀಡಾ ಮೂಲಸೌಕರ್ಯಗಳನ್ನು ಒದಗಿಸಲು ಪ್ರಯತ್ನಿಸಲಾಗುವುದು’ ಎಂದು ಭರವಸೆ ನೀಡಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣ ಗೌಡ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ, ‌ಮೇಯರ್ ಸುವರ್ಣ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಕ್ರೀಡಾ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್. ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ. ಶಾಂತರಾಜು, ಪಾಲಿಕೆ ಆಯುಕ್ತ ಚಿದಾನಂದ ವಠಾರೆ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಇದ್ದರು.

‘ಫಿಟ್ ಇಂಡಿಯಾ’ ಸಪ್ತಾಹ

ಅವಕಾಶ ವಂಚಿತ ಗ್ರಾಮೀಣ ಮಕ್ಕಳಿಗೂ ಸ್ಪರ್ಧೆ ಏರ್ಪಡಿಸಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ವಸತಿ ಸೌಲಭ್ಯ ನೀಡಲು ಹಾಗೂ ಕ್ರೀಡಾ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಕ್ರೀಡಾ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಲಾಗಿದೆ. ಪ್ರತಿವರ್ಷ ಡಿಸೆಂಬರ್‌ನಲ್ಲಿ ‘ಫಿಟ್ ಇಂಡಿಯಾ’ ಸಪ್ತಾಹವನ್ನು ಆಚರಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT