ಶುಕ್ರವಾರ, ಸೆಪ್ಟೆಂಬರ್ 17, 2021
30 °C

ಭೂಮಿ ಹಕ್ಕು ನೀಡುವಂತೆ ಒತ್ತಾಯಿಸಿ ಪಾದಯಾತ್ರೆ 18ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿಕಾರಿಪುರ: ‘ರೈತರಿಗೆ ಭೂಮಿ ಹಕ್ಕು ನೀಡಬೇಕು ಎಂದು ಒತ್ತಾಯಿಸಿ ಆ.18ರಂದು ತಹಶೀಲ್ದಾರ್ ಕಚೇರಿಯಿಂದ ಬಸವಾಪುರ ಬೇಚಾರ್ ಗ್ರಾಮದವರೆಗೂ ಸಾವಿರಾರು ರೈತರು ಪಾದಯಾತ್ರೆ ನಡೆಸಲಿದ್ದೇವೆ’ ಎಂದು ಬಸವಾಪುರ ಬೇಚಾರ್ ಗ್ರಾಮದ ರೈತರ ಹಿತರಕ್ಷಣಾ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಮಧು ಆನವಟ್ಟಿ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘1985ರಿಂದ ಬಸವಾಪುರ ಬೇಚಾರ್ ಗ್ರಾಮದ 2000 ಎಕರೆ ಕೃಷಿ ಭೂಮಿಯಲ್ಲಿ 600 ರೈತರ ಕುಟುಂಬಗಳು ಸಾಗುವಳಿ ಮಾಡುತ್ತಿದ್ದವು. ಆದರೆ 2004ರಲ್ಲಿ ಅರಣ್ಯ ಇಲಾಖೆ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ಮಾಡಿದೆ. ಕಂದಾಯ ಭೂಮಿಯನ್ನು ಅರಣ್ಯ ಭೂಮಿಯಾಗಿ ಪರಿವರ್ತಿಸಿದೆ. ಆದರೆ ರೈತರಿಗೆ ಭೂಮಿ ಹಕ್ಕು ನೀಡುವಂತೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ’ ಎಂದರು.

‘ನೂರಾರು ರೈತರ ಹಿತದೃಷ್ಟಿಯಿಂದ ಈ ಭೂಮಿ ಕಂದಾಯ ಇಲಾಖೆಗೆ ವರ್ಗಾವಣೆಯಾಗಬೇಕು. ಆದ್ದರಿಂದ ರೈತರಿಗೆ ಭೂಮಿ ಹಕ್ಕು ನೀಡುವಂತೆ ಪಾದಯಾತ್ರೆ ಆಯೋಜಿಸಿದ್ದೇವೆ. ಪಾದಯಾತ್ರೆಯಲ್ಲಿ ಜೆಡಿಎಸ್ ಮುಖಂಡ ಎಚ್.ಟಿ. ಬಳಿಗಾರ್ ಹಾಗೂ ಕಾಂಗ್ರೆಸ್ ಮುಖಂಡ ಸಾಗರ ತೀ.ನಾ. ಶ್ರೀನಿವಾಸ್ ಪಾಲ್ಗೊಳ್ಳಲಿದ್ದಾರೆ’ ಎಂದು ತಿಳಿಸಿದರು.

ಆಮ್ ಆದ್ಮಿ ಪಾರ್ಟಿ ಸಂಚಾಲಕ ಅಮೃತ್ ರಾಸ್, ‘ಬಸವಾಪುರ ಬೇಚಾರ್ ಗ್ರಾಮದಲ್ಲಿ ಯಾವುದೇ ಸ್ಪಷ್ಟ ದಾಖಲೆ ಇಲ್ಲದೆ ಅರಣ್ಯ ಇಲಾಖೆ ಕಂದಾಯ ಭೂಮಿಯನ್ನು ವಶಪಡಿಸಿಕೊಂಡಿದೆ. ಆದರೆ ಜಿಲ್ಲಾಧಿಕಾರಿ ಈ ಭೂಮಿಯನ್ನು ಕಂದಾಯ ಇಲಾಖೆಗೆ ಪುನಃ ಪರಿವರ್ತನೆ ಮಾಡುವ ಮೂಲಕ ರೈತರಿಗೆ ನೀಡಬೇಕು. ಸ್ಥಳೀಯ ರಾಜಕಾರಣಿಗಳು ರೈತರಿಗೆ ಭೂಮಿ ಹಕ್ಕು ಕೊಡಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದರು.

ಬಸವಾಪುರ ಬೇಚಾರ್ ಗ್ರಾಮ ರೈತರ ಹಿತರಕ್ಷಣಾ ಅಭಿವೃದ್ಧಿ ಸಂಘದ‌ ಉಪಾಧ್ಯಕ್ಷ ಅಮಾನುಲ್ಲಾಖಾನ್, ಕಾರ್ಯದರ್ಶಿ ಘನಶ್ಯಾಮ ಕೋಡಿಹಳ್ಳಿ, ಸದಸ್ಯರಾದ ಅಮೀನಮ್ಮ, ಬೋಗಿ ಉದಯ್, ಪಾರಿವಾಳ ಸುರೇಶ್, ಲಿಂಗರಾಜು ಮತ್ತಿಕೋಟೆ, ಮರ್ದನ್ ಅಲಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.