ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನನದ ನಡುವೆ ಮೂಲಸೌಕರ್ಯ ಕಾಣದ ‘ಬದುಕು’

ಬೆಳ್ಳೂರು ಗ್ರಾ.ಪಂನ 15ಕ್ಕೂ ಅಧಿಕ ಹಳ್ಳಿಗಳ ಸಂಕಷ್ಟ
Last Updated 29 ಏಪ್ರಿಲ್ 2022, 3:01 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ:ಹೊಸನಗರ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ 20 ಮಜಿರೆ ಹಳ್ಳಿಗಳ ಪೈಕಿ 15ಕ್ಕೂ ಅಧಿಕ ಹಳ್ಳಿಗಳು ಏಳು ದಶಕಗಳಿಂದ ಮೂಲಸೌಕರ್ಯದಿಂದ ವಂಚಿತವಾಗಿವೆ.

ನಾಡಿಗೆ ಬೆಳಕು ನೀಡಲು ಲಿಂಗನಮಕ್ಕಿ ಜಲಾಶಯ ನಿರ್ಮಾಣದ ಹೊತ್ತಿನಲ್ಲಿ ತಮ್ಮ ಮನೆ, ಜಮೀನುಗಳನ್ನು ತೊರೆದು ಊರು ಬಿಟ್ಟು ಬಂದ15ಕ್ಕೂ ಅಧಿಕ ಹಳ್ಳಿಗಳ300ಕ್ಕೂ ಅಧಿಕ ಕುಟುಂಬಗಳು ಇಂದಿಗೂ ಕತ್ತಲೆಯಲ್ಲೇ ಕಾಲಕಳೆಯುವಂತಾಗಿದೆ.

ಬಹು ಸಂಖ್ಯಾತ ಈಡಿಗ ಸಮುದಾಯದ ಮುಳುಗಡೆ ಸಂತ್ರಸ್ತ ಕುಟುಂಬಗಳು ಇಲ್ಲಿವೆ. ಜೀವನ ನಿರ್ವಹಣೆಗಾಗಿ ಬಗರ್‌ಹುಕುಂ ಕೃಷಿ ಸಾಗುವಳಿ ಮತ್ತು ಕೂಲಿ ಕೆಲಸ ಇವರ ಕಾಯಕ.

ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ಮತ್ತಿಕೊಪ್ಪ–ಹೊರಬೈಲ್‌, ಬುರುಡೆಮಕ್ಕಿ, ಕಾಳನಕೆರೆ, ಮಸ್ಕಾನಿ, ದೊಂಬೆಕೊಪ್ಪ, ಹಿರೇಸಾನಿ, ವಾಟೆಸರ ಸೇರಿ 15ಕ್ಕೂ ಅಧಿಕ ಮಜಿರೆ ಹಳ್ಳಿಗಳಲ್ಲಿ ಇಂದಿಗೂ ಮಣ್ಣಿನ ಹಾದಿಯೇ ಗತಿ. ಕಾಡುಪ್ರಾಣಿಗಳ ಉಪಟಳದ ನಡುವೆ ಬದುಕುವ ಜನರ ಆರೋಗ್ಯ ಕೈಕೊಟ್ಟರೆ ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ.

ಈ ಭಾಗದ ಕಳಸೆ, ಗುಬ್ಬಿಗಾ, ಹೊರಬೈಲ್‌ –ಮತ್ತಿಕೊಪ್ಪ, ಅಡ್ಡೇರಿ, ಮಸ್ಕಾನಿ, ದೋಬೈಲ್‌, ಹೆಬ್ಬಳ್ಳಿಯಲ್ಲಿ ಕಿರಿಯ ಪ್ರಾಥಮಿಕ ಶಾಲೆ, ಬೆಳ್ಳೂರು, ಕಲ್ಲುಹಳ್ಳದಲ್ಲಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇದೆ. ಈ ಹಳ್ಳಿಯ ದುರ್ಗಮ ಮಾರ್ಗದಲ್ಲಿ ಶಾಲಾ ಮಕ್ಕಳು ಶಾಲೆಗೆ ಹೋಗಲು ಪರದಾಡಬೇಕು. ಸರ್ಕಾರದಿಂದ ಮಕ್ಕಳಿಗೆ ಸೈಕಲ್‌ ಮಣ್ಣಿನ ಕೊರಕಲು ರಸ್ತೆಯ ಕಾರಣಕ್ಕೆ ಒಂದೇ ವಾರಕ್ಕೆ ಗುಜರಿ ಸೇರಿವೆ.

ವಿದ್ಯಾರ್ಥಿಗಳಿಗೆ ಕಾಲುನಡಿಗೆಯೇ ಆಸರೆ:

ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಇಲ್ಲಿನ ವಿದ್ಯಾರ್ಥಿಗಳು 15–20 ಕಿ.ಮೀ. ಅಂತರದ ರಿಪ್ಪನ್‌ಪೇಟೆ, ಕೋಣಂದೂರು ಹಾಗೂ 30–40 ಕಿ.ಮೀ ದೂರದ ಶಿವಮೊಗ್ಗ, ಸಾಗರಕ್ಕೆ ಹೋಗಬೇಕು.

1989ರಲ್ಲಿ ಶೆಟ್ಟಿಹಳ್ಳಿ ಮೀಸಲು ಅಭಯಾರಣ್ಯವಾಗಿ ಅಂಕಿತ ಪಡೆದ ನಂತರ ಬಗರ್‌ಹುಕುಂ ರೈತರ ಪರ ಧ್ವನಿ ಎತ್ತಿದ ರಾಜಕಾರಣಿಗಳು ಚುನಾವಣೆ ನಂತರ ಇವರನ್ನು ಮರೆತರು. ಹೀಗಾಗಿ ಇಂದಿಗೂ ಇಲ್ಲಿನ ಜನರಿಗೆ ನ್ಯಾಯ ಸಿಕ್ಕಿಲ್ಲ.

ಕೆಎಫ್‌ಡಿ ನಂಟು:

ಮಸ್ಕಾನಿ, ವಾಟೆಸರ ಚಾಣಬೈಲ್‌ ವ್ಯಾಪ್ತಿಯಲ್ಲಿ ಮಂಗನಕಾಯಿಲೆಯ ನಂಟಿದೆ. ದಶಕದ ಹಿಂದೆಯೇ ಈ ಕಾಯಿಲೆಯ ಸೋಂಕು ಕಂಡುಬಂದ ತಕ್ಷಣ ಜಿಲ್ಲಾ ಆರೋಗ್ಯಾಧಿಕಾರಿ ತಂಡವೇ ಈ ಗ್ರಾಮದಲ್ಲಿ ಬೀಡುಬಿಟ್ಟು ತಾತ್ಕಾಲಿಕ ಆರೋಗ್ಯ ಕೇಂದ್ರ ಸ್ಥಾಪಿಸಿ ಮುನ್ನೆಚ್ಚರಿಕೆ ಲಸಿಕೆ ಕಾರ್ಯಕ್ರಮ ನಡೆಸಿತ್ತು. ಬಳಿಕ ಅದನ್ನು ಮರೆತಿದೆ.
ಸಾರಿಗೆ ಸಂಪರ್ಕ ಇಲ್ಲದ ಈ ಕುಗ್ರಾಮಕ್ಕೆ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ತುರ್ತು ಸಂಚಾರಿ ಆರೋಗ್ಯ ಘಟಕ ಸ್ಥಾಪಿಸುವ ಕೂಗು ವಿಧಾನಸಭೆ ಮೊಗಸಾಲೆಯಲ್ಲಿ ಕೇಳಿಬಂದಿತ್ತು. ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇಲ್ಲದ ಕಾರಣ ಶಿಕ್ಷಕರು ಸೇರಿ ಸರ್ಕಾರಿ ನೌಕರರು ಈ ಭಾಗದಲ್ಲಿ ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇಂದಿಗೂ ತುರ್ತು ಸಂದರ್ಭದಲ್ಲಿ 108ಕ್ಕೆ ಕರೆ ಮಾಡಿ, ರೋಗಿಯನ್ನು ಮನೆಯಿಂದ ಮುಖ್ಯರಸ್ತೆವರೆಗೆ ಹೊತ್ತು ತಂದರೆ ಮಾತ್ರ ಮುಂದಿನ ದಾರಿ ಕಾಣಬಹುದು. ಇಲ್ಲದಿದ್ದರೆ ದೇವರೇ ಗತಿ ಎಂದು ಬೇಸರಿಸುತ್ತಾರೆಗುಳುಗುಳಿ ಶಂಕರದ ಮಂಜುನಾಥ್‌.

ವಾರದಲ್ಲಿ ಎರಡು ದಿನ ತೆರೆಯುವ ಅಯುಷ್‌ ಕೇಂದ್ರ ಹೊರತುಪಡಿಸಿದರೆ, ಸರ್ಕಾರಿ ಆಸ್ಪತ್ರೆ ಇಲ್ಲ. ರಸ್ತೆ, ವಿದ್ಯುತ್, ದೂರವಾಣಿ ಸಂಪರ್ಕವೂ ಇಲ್ಲ. ಸಾರಿಗೆ ವ್ಯವಸ್ಥೆಯೂ ಅಷ್ಟಕಷ್ಟೆ. ಹಳ್ಳಕೊಳ್ಳವನ್ನು ದಾಟಿ ಸಾಗಬೇಕಾದ ಅನಿವಾರ್ಯ ಇದೆ. ಮಳೆಗಾಲದ ಸ್ಥಿತಿ ಇದಕ್ಕೆ ಹೊರತಲ್ಲ. ಮರದ ದಿಮ್ಮಿಗಳಿಂದ ನಿರ್ಮಿಸಿದ ಕಾಲುಸಂಕಗಳೇ ಸೇತುವೆ.

ಆಶ್ರಯ, ವೃದ್ಧಾಪ್ಯ, ವಿಧವಾ ವೇತನ ಆದೇಶ ಪ್ರತಿ ಇದ್ದರೂ ಹಣ ಕೈ ಸೇರದೇ ಕನ್ನಡಿಯೊಳಗಿನ ಗಂಟಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 20 ಕಿ.ಮೀ. ದೂರದ ರಿಪ್ಪನ್‌ಪೇಟೆಗೆ ಬರಬೇಕು. ಈ ಭಾಗದಲ್ಲಿ ಬಿಎಸ್ಎನ್‌ಎಲ್ ನೆಟ್‌ವರ್ಕ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಆನ್‌ಲೈನ್‌ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಹಾಗೂ ತುರ್ತು ಸಂದರ್ಭಗಳಲ್ಲಿ ಜನರು ಪರದಾಡಬೇಕಿದೆ.

ದಿನೇ ದಿನೇ ದೇಶ ಅಭಿವೃದ್ಧಿಯತ್ತ ಸಾಗುತ್ತಿದ್ದರೂ ಹಳ್ಳಿಗಳು ಮಾತ್ರ ಬದಲಾಗಿಲ್ಲ. ಈ ಬಗ್ಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು ಎಂದು ಒತ್ತಾಯಿಸುತ್ತಾರೆಬೆಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎಂ. ಯೋಗೀಶ್.

***

ಬೆಳ್ಳೂರು ಗ್ರಾಮದ ಮಜಿರೆ ಹಳ್ಳಿಗಳು ಅತ್ಯಂತ ಹಿಂದುಳಿದಿವೆ. ಇಲ್ಲಿನ ನಿವಾಸಿಗಳ ಬಹುದಿನಗಳ ಬೇಡಿಕೆಯಾದ ಕುಡಿಯುವ ನೀರು, ಸಮರ್ಪಕ ರಸ್ತೆ ಇಂದಿಗೂ ಈಡೇರಿಲ್ಲ. ಕ್ಷೇತ್ರದ ಶಾಸಕರು, ಸಂಸದರು ಈ ನಿಟ್ಟಿನಲ್ಲಿ ವಿಶೇಷ ಅನುದಾನ ಬಿಡುಗಡೆ ಮಾಡಿದರೆ ಗ್ರಾಮದ ಸಮಗ್ರ ಅಭಿವೃದ್ಧಿ ಸಾಧ್ಯ.
-ಎಚ್.ಎಂ.ಯೋಗೀಶ್,ಮಾಜಿ ಅಧ್ಯಕ್ಷ, ಬೆಳ್ಳೂರು ಗ್ರಾ.ಪಂ.

ಮಜಿರೆ ಹಳ್ಳಿಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸುವ ಯೋಜನೆ ಇದೆ. ಆ ನಿಟ್ಟಿನಲ್ಲಿ ಶಾಸಕರು ಸ್ಪಂದಿಸಿದ್ದಾರೆ. ಕೆಲವು ಗ್ರಾಮಗಳು ಈಗಾಗಲೇ ಜಲ್ಲಿ ರಸ್ತೆ ಹಾಗೂ ಟಾರು ರಸ್ತೆಯಾಗಿ ಮಾರ್ಪಾಡು ಹೊಂದಿವೆ. ಅದು ಬಕಾಸುರರ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತೆ ಆಗಿದೆ.
-ಭವಾನಿ ದಿವಾಕರ್,ಅಧ್ಯಕ್ಷರು, ಬೆಳ್ಳೂರು ಗ್ರಾ.ಪಂ.

ಗ್ರಾಮಗಳ ಜೀರ್ಣೋದ್ಧಾರಕ್ಕಾಗಿ ಪ್ರತಿ ವರ್ಷ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೋಟ್ಯಂತರ ಅನುದಾನ ಬಿಡುಗಡೆ ಮಾಡಿ ಸಾಕಷ್ಟು ಯೋಜನೆಗಳನ್ನು ರೂಪಿಸುತ್ತಿದೆ. ಆದರೆ ಜನ್ನ ಕುಗ್ರಾಮದ ಅಳಲನ್ನು ಕೇಳು‌ವವರೇ ಇಲ್ಲ.
-ಮಂಜುನಾಥ್, ಗುಳುಗುಳಿ ಶಂಕರದ ನಿವಾಸಿ

8 ದಶಕಗಳಿಂದ ಕಾನನದ ನಡುವೆ ವಾಸಿಸುತ್ತಿರುವ ಮುಳುಗಡೆ ರೈತರು ಇಲ್ಲಿದ್ದಾರೆ. ನಮ್ಮ ಊರಿಗೆ ಸರ್ಕಾರದ ಯಾವುದೇ ಮೂಲಸೌಕರ್ಯ ಸಿಕ್ಕಿಲ್ಲ. ರಸ್ತೆ ಯಾವುದು ಕಾಡು ಯಾವುದು ಎಂದು ಹುಡುಕಬೇಕಾದ ಸ್ಥಿತಿ ಇದೆ.
-ನಾಗರಾಜ ಹೆಂಡಗದ್ದೆ, ಬಾಳೆಕೊಡ್ಲು ನಿವಾಸಿ

ಕಾಡು ಪ್ರಾಣಿಗಳ ಉಪಟಳದಿಂದ ನಮ್ಮ ಬೆಳೆಗಳನ್ನು ಕಾಪಾಡಿಕೊಳ್ಳುವುದು ಕಷ್ಟ. ವಾರಕ್ಕೆ ಎರಡು ದಿನವೂ ವಿದ್ಯುತ್‌ ಇರುವುದಿಲ್ಲ. ಬೇಸಿಗೆಯಲ್ಲಿ ಬೆಳೆಗಳಿಗೆ ನೀರಿಲ್ಲದೆ ಒಣಗುತ್ತಿವೆ.
-ಕೃಷ್ಣಪ್ಪ, ಹೆಂಡಗದ್ದೆ ಗ್ರಾಮಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT