ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಶುಶ್ರೂಷಕಿಯರ ದಿನ | ದಾದಿಯರು ಎರಡನೇ ತಾಯಂದಿರು...

ಕಿರಣ್ ಕುಮಾರ್
Published 12 ಮೇ 2024, 5:30 IST
Last Updated 12 ಮೇ 2024, 5:30 IST
ಅಕ್ಷರ ಗಾತ್ರ

ಭದ್ರಾವತಿ: ಜಗತ್ತಿನೆಲ್ಲೆಡೆ ಜನರ ಪುನರ್ವಸತಿ ಮತ್ತು ಯೋಗಕ್ಷೇಮಕ್ಕಾಗಿ ದುಡಿಯುವವರಲ್ಲಿ ದಾದಿಯರೂ ಪ್ರಮುಖರು. ಜನನ, ಮರಣದ ಸಮಯದಲ್ಲಿ ಜೊತೆಗಿರುವ ಅವರ ಸೇವೆಗೆ ಗೌರವ ಸೂಚಿಸಲೆಂದೇ ಪ್ರತಿವರ್ಷ ಮೇ 12ರಂದು ‘ಅಂತರರಾಷ್ಟ್ರೀಯ ದಾದಿಯರ ದಿನ’ ಆಚರಿಸಲಾಗುತ್ತಿದೆ.

ವೈದ್ಯ ವೃತ್ತಿಯನ್ನು ಸಾಮಾನ್ಯವಾಗಿ ಭಗವಂತನಿಗೆ ಸಮನಾಗಿ ಕಾಣಲಾಗುತ್ತದೆ. ವೈದ್ಯರಿಗಿಂತ ಮೊದಲು ರೋಗಿಗಳನ್ನು ಉಪಚರಿಸುವವರು ದಾದಿಯರು. ವೈದ್ಯರ ಮಾರ್ಗದರ್ಶನದಂತೆ ಕಾಯಿಲೆಯಿಂದ ಬಳಲುತ್ತಿರುವವರನ್ನು ಉಪಚರಿಸಿ, ಆರೈಕೆ ಮಾಡುವ ಶೂಶ್ರೂಷಕಿಯರು ಪ್ರಶಂಸೆಗೆ ಅರ್ಹರು. 

‘ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ದಾದಿಯರು ಜೀವದ ಹಂಗನ್ನೇ ತೊರೆದು ಹಗಲಿರುಳು ಶ್ರಮಿಸಿದ್ದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದವರ ಶುಶ್ರೂಷೆಗಾಗಿ ಅವರು ತೋರಿದ ಉತ್ಸಾಹ ಮತ್ತು ಕಾಳಜಿ ಅನುಕರಣೀಯ. ದಾದಿಯರು ನಮ್ಮೆಲ್ಲರ ಪಾಲಿಗೆ ಎರಡನೇ ತಾಯಂದಿರಿದ್ದಂತೆ. ರೋಗಿಗಳ ಶುಶ್ರೂಷೆಗೆ ಸಹಾಯ ಮಾಡುವ ಎಲ್ಲ ಸಿಬ್ಬಂದಿಯೂ ಶ್ಲಾಘನೆಗೆ ಅರ್ಹರು’ ಎಂದು ನಿರ್ಮಲ ಆಸ್ಪತ್ರೆಯ ಹಿರಿಯ ವೈದ್ಯ ರೆಜೀನಾ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ 350 ರೋಗಿಗಳಿಗೆ ಒಬ್ಬರು ಶುಶ್ರೂಷಕರು ಇರಬೇಕಿದೆ. ಆದರೆ ಭಾರತದಲ್ಲಿ 600 ರೋಗಿಗಳಿಗೆ ಒಬ್ಬರು ನರ್ಸ್‌ ಇದ್ದಾರೆ. ನರ್ಸಿಂಗ್ ಅತ್ಯಂತ ಜವಾಬ್ದಾರಿಯುತ ಹಾಗೂ ಸವಾಲಿನ ಕೆಲಸ.
ಚೇಚಿ ಮೇರಿ, ನಿರ್ಮಲ ಆಸ್ಪತ್ರೆಯ ಅನುಭವಿ ಶುಶ್ರೂಷಕಿ

‘ಶುಶ್ರೂಷಕಿ ಇಲ್ಲದ ಆಸ್ಪತ್ರೆ, ಬುನಾದಿ ಇಲ್ಲದ ಕಟ್ಟಡವಿದ್ದಂತೆ. ದಾದಿಯರನ್ನು ಭೂಮಿಯ ಮೇಲಿನ ದೇವತೆಗಳೆಂದೇ ಭಾವಿಸುವುದುಂಟು. ಅವರು ಸಂಪೂರ್ಣ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸುತ್ತಾರೆ’ ಎಂದು ಶ್ಲಾಘಿಸಿದರು.

‘ದಾದಿಯರು ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿದ್ದಾರೆ. ಅವರು ಆಸ್ಪತ್ರೆಗಳಲ್ಲಷ್ಟೇ ಅಲ್ಲದೆ ಸರ್ಕಾರಿ ಯೋಜನೆಗಳ ಸೌಲಭ್ಯವನ್ನು ಜನಸಾಮಾನ್ಯರಿಗೆ ತಲುಪಿಸಲು ಮನೆಮನೆಗೂ ಭೇಟಿ ನೀಡುತ್ತಾರೆ. ಅವರ ಬಹುಮುಖಿ ಕಾರ್ಯ ಮೆಚ್ಚುವಂತಹದ್ದು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಎಂ. ಅಶೋಕ್ ತಿಳಿಸಿದರು.

24 ಗಂಟೆಯೂ ರೋಗಿಗಳಿಗೆ ಶುಶ್ರೂಷೆ

ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 16 ಸ್ಟಾಫ್ ನರ್ಸ್‌ಗಳಿದ್ದಾರೆ. ಅವರಿಗೆ ಎ.ಎನ್.ಎಂ.ಅಡಿ ನೇಮಕಗೊಂಡಿರುವ ಸಹಾಯಕ ಶುಶ್ರೂಷಕಿಯರು ನೆರವಾಗಿದ್ದಾರೆ. ಸರ್ಕಾರಿ ಮತ್ತು ಗುತ್ತಿಗೆ ಆಧಾರದ ಮೇಲೆ ಹಲವರನ್ನು ನೇಮಕ ಮಾಡಲಾಗಿದೆ. ಸಿಬ್ಬಂದಿ ಮೂರು ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ದಿನದ 24 ಗಂಟೆಯೂ ರೋಗಿಗಳಿಗೆ ಶುಶ್ರೂಷೆ ನಡೆಸಲು ಸಿಬ್ಬಂದಿ ಸಿದ್ಧರಿರುತ್ತಾರೆ- ಶಂಕ್ರಪ್ಪ, ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ.

‘ದಾದಿಯರ ಸೇವೆ ಅನನ್ಯ’

ತಾಲೂಕಿನಲ್ಲಿ ನಗರ ಮತ್ತು ಗ್ರಾಮಾಂತರವೆಂಬ ವಿಭಾಗಗಳಿವೆ. ನಗರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ದಾದಿಯರು ಸಹಾಯಕರು ಇದ್ದಾರೆ. ಗ್ರಾಮೀಣ ಭಾಗದಲ್ಲಿ ಒಟ್ಟು 16 ಸರ್ಕಾರಿ ಆಸ್ಪತ್ರೆಗಳಿದ್ದು 45 ಸ್ಟಾಫ್ ನರ್ಸ್‌ಗಳನ್ನು ನೇಮಕ ಮಾಡಲಾಗಿದೆ. 15 ಸಹಾಯಕ ಶುಶ್ರೂಷಕಿಯರನ್ನು ನಿಯೋಜಿಸಲಾಗಿದೆ. ವೈದ್ಯರು ಇರಲಿ ಇರದೇ ಇರಲಿ ದಾದಿಯರು ತುರ್ತು ಸಮಯದಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಕೊಡುತ್ತಾರೆ. ಇವರು ಮಾಡುವ ಸೇವೆ ಅನನ್ಯವಾದದ್ದು - ಎಂ. ಅಶೋಕ್ ತಾಲ್ಲೂಕು ವೈದ್ಯಾಧಿಕಾರಿ

ನಿರ್ಮಲ ಆಸ್ಪತ್ರೆಯ ದಾದಿಯರ ಮೇಲ್ವಿಚಾರಕಿ ಸಿಸ್ಟರ್. ವಿನ್ಸಿ ಮತ್ತು ದಾದಿಯರು
ನಿರ್ಮಲ ಆಸ್ಪತ್ರೆಯ ದಾದಿಯರ ಮೇಲ್ವಿಚಾರಕಿ ಸಿಸ್ಟರ್. ವಿನ್ಸಿ ಮತ್ತು ದಾದಿಯರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT