ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಠ್ಯ ಪರಿಷ್ಕರಣೆ ಗೊಂದಲ ಖಂಡಿಸಿ ಕುಪ್ಪಳಿಯಿಂದ ತೀರ್ಥಹಳ್ಳಿಗೆ ಕಿಮ್ಮನೆ ಕಾಲ್ನಡಿಗೆ

ಮಾಜಿ ಸಚಿವ ಕಿಮ್ಮನೆ ರತ್ನಾಕರ
Last Updated 11 ಜೂನ್ 2022, 5:52 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಪಠ್ಯ ಪರಿಷ್ಕರಣೆ ಗೊಂದಲ ಖಂಡಿಸಿ ಕುವೆಂಪು ವಿಶ್ವಮಾನವ ವೇದಿಕೆ ನೇತೃತ್ವದಲ್ಲಿ ಜೂನ್‌ 15ರಂದು ಬೆಳಿಗ್ಗೆ ಕುಪ್ಪಳಿಯ ಕವಿಶೈಲದಿಂದ ತೀರ್ಥಹಳ್ಳಿ ಪಟ್ಟಣದವರೆಗೆ ಬೃಹತ್‌ ಸಾಂಸ್ಕೃತಿಕ ಸೌಹಾರ್ದ ಜಾಗೃತಿ ಪಯಣ ಕಾಲ್ನಡಿಗೆ ಹಮ್ಮಿಕೊಳ್ಳಲಾಗಿದೆ’ ಎಂದುಮಾಜಿ ಸಚಿವ ಕಿಮ್ಮನೆ ರತ್ನಾಕರ ತಿಳಿಸಿದರು.

‘ಕವಿ ಬರೆದಿರುವ ಸಾಲುಗಳೆಲ್ಲವೂ ಸಾಹಿತ್ಯ ಆಗಲಾರದು. ಗ್ರಾಮೀಣ–ನಗರ ಬದುಕು, ಕಾಡು, ಹಳ್ಳಿ, ಸುಖ, ದುಃಖ ಮುಂತಾದ ರೂಪಕ ಒಳಗೊಂಡ ಕ್ರಿಯಾತ್ಮಕ ಸಂವಹನ ಸಾಹಿತ್ಯದಲ್ಲಿರಬೇಕು. ತಿಳಿವಳಿಕೆ ಇಲ್ಲದೆ ಅಪಹಾಸ್ಯ ಮಾಡುವವರಿಗೆ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲ’ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಕುಟುಕಿದರು.

ಪಾದಯಾತ್ರೆಗೆ ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ಮಾಜಿ ಸಭಾಧ್ಯಕ್ಷ ರಮೇಶ್‌ ಕುಮಾರ್‌, ಮಾಜಿ ಸಚಿವ ಪ್ರಿಯಾಂಕ್‌ ಖರ್ಗೆ, ಮಾಜಿ ಶಾಸಕ ವೈ.ಎಸ್‌.ವಿ. ದತ್ತಾ, ಹಿರಿಯ ಸಾಹಿತಿಗಳಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ರಮೇಶ್‌ ಹನಗವಾಡಿ, ಕೆ.ಎ.ವಿಮಲಾ, ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್‌.ಬಸವರಾಜಪ್ಪ, ಮುಖಂಡ ಕೆ.ಟಿ.ಗಂಗಾಧರ್‌, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಗುರುಮೂರ್ತಿ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಕೆಸ್ತೂರು ಮಂಜುನಾಥ್‌, ಗ್ರಾಮಾಂತರ ಅಧ್ಯಕ್ಷ ಮುಡುಬ ರಾಘವೇಂದ್ರ, ರಾಷ್ಟ್ರೀಯ ಯುವ ಕಾಂಗ್ರೆಸ್‌ ವಕ್ತಾರ ಆದರ್ಶ ಹುಂಚದಕಟ್ಟೆ, ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷರಾದ ಅಮರನಾಥ ಶೆಟ್ಟಿ, ಪುಟ್ಟೋಡ್ಲು ರಾಘವೇಂದ್ರ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್‌, ಉಪಾಧ್ಯಕ್ಷ ಜಯಪ್ರಕಾಶ್‌ ಶೆಟ್ಟಿ, ಮುಖಂಡರಾದ ಸುರೇಶ್‌, ವಿಲಿಯಂ, ಜಯಕರ ಶೆಟ್ಟಿ, ಧರ್ಣೇಶ್‌, ರಾಮಚಂದ್ರ, ಉದಯ್‌ ಇದ್ದರು.

ನಾನು ಸಚಿವನಾಗಿದ್ದಾಗ ತಪ್ಪು ಮಾಡಿರಲಿಲ್ಲ

ಹೊಸನಗರ: ‘ನಾನು ಶಿಕ್ಷಣ ಸಚಿವನಾಗಿದ್ದಾಗ ಪಠ್ಯಪುಸ್ತಕವನ್ನು ಬದಲಾಯಿಸುವ ಸಂದರ್ಭದಲ್ಲಿ 27 ಸಮಿತಿಯನ್ನು ರಚಿಸಿದ್ದೆವು. 34 ಸಂಘಟನೆಗಳ ಮೂಲಕ ಒಪ್ಪಿಗೆ ಪಡೆದು ನಂತರ ಸದನಕ್ಕೆ ಒಪ್ಪಿಸಿ ಪಠ್ಯಕ್ರಮವನ್ನು ಬದಲಾಯಿಸಲಾಗಿತ್ತು. ಅಲ್ಲಿ ಯಾವುದೇ ಅವಾಂತರ ಆಗಿರಲಿಲ್ಲ. ಯಾರಿಗೂ ಅವಮಾನ ಆಗಿರಲಿಲ್ಲ’ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ತಿಳಿಸಿದರು.

‘ಅಂದು ನಮ್ಮ ಸರ್ಕಾರದಿಂದ ಪಠ್ಯಕ್ರಮದಲ್ಲಿ ಯಾವುದೇ ತಪ್ಪು ನಡೆದಿರಲಿಲ್ಲ. ಪಠ್ಯವನ್ನು ಬದಲಾಯಿಸುವಾಗ 2 ವರ್ಷಗಳ ಕಾಲಾವಧಿ ತೆಗೆದುಕೊಂಡಿದ್ದೇವೆ. ಆದರೆ, ಇಂದಿನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕೇವಲ ಒಂದು ತಿಂಗಳಲ್ಲಿ ಪಠ್ಯ ಪುಸ್ತಕ ಬದಲಾಯಿಸುವ ಅವಸರ ತೋರಿದರು. ಅಂತಹ ಪ್ರಮೇಯವೇನಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT