ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಕಳೆದ ವರ್ಷ ದುರಸ್ತಿ, ಈ ವರ್ಷ ತೆರವು: ಸಾರ್ವಜನಿಕರ ತೆರಿಗೆ ಹಣ ಪೋಲು

ಕೆಪಿಎಸ್ ಶಾಲೆಯ ಸುಸಜ್ಜಿತ ಕೊಠಡಿಗಳ ನೆಲಸಮ
Last Updated 5 ಅಕ್ಟೋಬರ್ 2021, 3:24 IST
ಅಕ್ಷರ ಗಾತ್ರ

ಆನವಟ್ಟಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ನಾಲ್ಕು ಕೊಠಡಿಗಳನ್ನು ಕಳೆದ ವರ್ಷ ದುರಸ್ತಿ ಮಾಡಲಾಗಿದೆ. ಇದನ್ನು ಬಳಕೆ ಮಾಡುವ ಮುನ್ನವೇ ಈಗ ತೆರವು ಕಾರ್ಯ ನಡೆಯುತ್ತಿದೆ.ಸಾರ್ವಜನಿಕರ ತೆರಿಗೆ ಹಣ ಪೋಲಾಗುತ್ತಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ವರ್ಷದ ಹಿಂದೆ ₹ 10 ಲಕ್ಷ ವೆಚ್ಚದಲ್ಲಿ ನಾಲ್ಕು ಕೊಠಡಿಗಳನ್ನು ದುರಸ್ತಿ ಮಾಡಲಾಗಿತ್ತು. ಸುಸಜ್ಜಿತವಾಗಿರುವ ಈ ಕೊಠಡಿಗಳನ್ನು ತೆರವು
ಗೊಳಿಸುತ್ತಿರುವುದು ಯಾವ ಕಾರಣಕ್ಕೆ ಎಂಬುದು ಸಾರ್ವಜನಿಕರ ಪ್ರಶ್ನೆ.

‘ಶಾಲೆಯಲ್ಲಿ ಬಳಕೆ ಆಗದೆ ಚಾವಣಿ ಹಾಳಾಗಿ, ಹೆಂಚುಗಳು ಒಡೆದಿದ್ದು, ಬೀಗ ಹಾಕಿರುವ ಐದು ಕೊಠಡಿಗಳು ಇವೆ. ಈ ಕೊಠಡಿಗಳನ್ನು ದುರಸ್ತಿ ಮಾಡದೇ ಉತ್ತಮವಾಗಿರುವ ಕೊಠಡಿಗಳನ್ನು ನೆಲಸಮ ಮಾಡುತ್ತಿರುವುದು ಸರಿಯಲ್ಲ. ಅಧಿಕಾರಿಗಳ ಕಾರ್ಯವೈಖರಿ ಅಸಮಾಧಾನ ತಂದಿದೆ’ ಎಂದು ಎಂದು ನಿವೃತ್ತ ಪ್ರಾಂಶುಪಾಲ ಎಚ್.ಜಯಪ್ಪ ದೂರಿದರು.

ಮಾರ್ಚ್-ಏಪ್ರಿಲ್‌ನಲ್ಲಿ ಪರೀಕ್ಷೆ

ಗಳು ಪ್ರಾರಂಭವಾಗುತ್ತವೆ. ಆಗ ಕೊಠಡಿಗಳ ಕೊರತೆ ಉಂಟಾಗುತ್ತದೆ. ಹೊಸ ಕಟ್ಟಡ ನಿರ್ಮಾಣ ಆಗಲು ಕನಿಷ್ಠ ಒಂದು ವರ್ಷವಾದರೂ ಬೇಕು. ಮಕ್ಕಳ ಹಿತದೃಷ್ಟಿಯಿಂದ ಚೆನ್ನಾಗಿರುವ ಕೊಠಡಿಗಳನ್ನು ಬಿಟ್ಟು, ಹಾಳಾಗಿರುವ ಉಪಯೋಗಿಸದೇ ಇರುವ ಕೊಠಡಿಗಳನ್ನು ತೆರವು ಮಾಡಿ ನೂತನ ಕಟ್ಟಡ ಕಟ್ಟುವುದು ಒಳ್ಳೆಯದು ಎನ್ನುತ್ತಾರೆ ಅವರು.

ಈ ನಾಲ್ಕು ಕೊಠಡಿಗಳನ್ನು ತೆರವುಗೊಳಿಸಿ, ₹ 2 ಕೋಟಿ ಅನುದಾನದಲ್ಲಿ ನೂತನ ಕಟ್ಟಡವನ್ನು ಪಕ್ಕದ ಕಟ್ಟಡಕ್ಕೆ ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಕಾಲೇಜು ಅಭಿವೃದ್ಧಿಯಾಗುತ್ತದೆ. ಇನ್ನೂ ಹೆಚ್ಚಿನ ಅನುದಾನವನ್ನು ಶಾಸಕ ಕುಮಾರ ಬಂಗಾರಪ್ಪ ಕೆಪಿಎಸ್ ಶಾಲೆಗೆ ಮಂಜೂರು ಮಾಡಿಸಲು ಯೋಜನೆ ರೂಪಿಸಿದ್ದಾರೆ ಎಂದುಸಮಜಾಯಿಸಿ ನೀಡುತ್ತಾರೆ ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯ ಮಧುಕೇಶ್ವರ.

‘ಬಳಕೆ ಆಗುತ್ತಿರುವ, ಗಟ್ಟಿಮುಟ್ಟಾಗಿರುವ ಕಟ್ಟಡಗಳ ತೆರವಿಗೆ ಅವಕಾಶ ನೀಡುತ್ತಿರುವುದು ನೋಡಿದರೆ ಶಾಸಕರ ಕೈಗೊಂಬೆಗಳಾಗಿ ತಾಲ್ಲೂಕಿನ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ’ ಎಂದು ತಾಲ್ಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುರೇಶ ಹಾವಣ್ಣನವರ್ ದೂರಿದರು.

‘ಕೆಪಿಎಸ್ ಶಾಲೆಯಲ್ಲಿ ಕಟ್ಟಡ ನಿರ್ಮಾಣ ಮಾಡಲು ಸಾಕಷ್ಟು ಜಾಗವಿದೆ ಅಥವಾ ಹಳೆಯ ಕೊಠಡಿಗಳನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡುವುದು ಸರಿ. ಅದನ್ನು ಬಿಟ್ಟು ಕಳೆದ ವರ್ಷ ದುರಸ್ತಿ ಮಾಡಿ, ಸುಸಜ್ಜಿತವಾಗಿರುವ ಕೊಠಡಿಗಳನ್ನು ತೆರವು ಮಾಡಿ, ನೂತನ ಕಟ್ಟಡ ನಿರ್ಮಾಣ ಮಾಡುವುದರಿಂದ ಸಾರ್ವಜನಿಕರ ಹಣ ಪೋಲಾಗುತ್ತದೆ’ ಎನ್ನುತ್ತಾರೆ ಮೆಡಿಕಲ್ ಮಹೇಶ್.

***

ಸಾರ್ವಜನಿಕರು ಕಟ್ಟುವ ತೆರಿಗೆ ಹಣ ಸದ್ಬಳಕೆ ಆಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಅದನ್ನು ಬಿಟ್ಟು ಮನಸ್ಸಿಗೆ ಬಂದ ಹಾಗೆ ಸರ್ಕಾರಿ ಕಟ್ಟಡಗಳನ್ನು ನೆಲಸಮ ಮಾಡುವುದು ಖಂಡನೀಯ.

-ಎಚ್.ಜಯಪ್ಪ, ನಿವೃತ್ತ ಪ್ರಾಂಶುಪಾಲ

***

ಶಾಲೆಯ ಹೆಂಚಿನ ಕಟ್ಟಡಗಳನ್ನು ತೆರವುಗೊಳಿಸಿ, ನೂತನ ಕಟ್ಟಗಳನ್ನು ನಿರ್ಮಿಸುವ ಯೋಜನೆ ಶಾಸಕರದ್ದು. ಅದಕ್ಕಾಗಿ ತೆರವು ಕಾರ್ಯ ನಡೆಯುತ್ತಿದೆ.

-ಮಧುಕೇಶ್ವರ, ಸದಸ್ಯ, ಕಾಲೇಜು ಅಭಿವೃದ್ಧಿ ಮಂಡಳಿ

***

ಅಂಗನವಾಡಿ, ಪ್ರಾಥಮಿಕ ಶಾಲೆಗಳ ಕೊಠಡಿಗಳು ಬೀಳುವ ಸ್ಥಿತಿಯಲ್ಲಿ ಇವೆ. ಅಧಿಕಾರಿಗಳು ಇಂತಹ ಕಟ್ಟಡಗಳ ತೆರವು ಮಾಡದೇ ಚೆನ್ನಾಗಿರುವ ಕಟ್ಟಡ ಕೆಡವುತ್ತಿರುವುದು ಸರಿಯಲ್ಲ.

- ಸುರೇಶ ಹಾವಣ್ಣನವರ್, ಮಾಜಿ ಉಪಾಧ್ಯಕ್ಷ, ತಾ.ಪಂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT