ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರ; ಪ್ರಯಾಣಿಕರ ಪರದಾಟ

ಎಲ್ಲೆಡೆ ಖಾಸಗಿ ಬಸ್‌ಗಳ ಮೇಲೆ ಅವಲಂಬನೆ, ಹೊರ ಜಿಲ್ಲೆಗಳಿಗೆ ತೆರಳಲು ಪರದಾಟ
Last Updated 7 ಏಪ್ರಿಲ್ 2021, 10:36 IST
ಅಕ್ಷರ ಗಾತ್ರ

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ನೌಕರರ ಮುಷ್ಕರದ ಪರಿಣಾಮ ಬುಧವಾರ ವಿವಿಧ ಭಾಗಗಳಿಗೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡಿದರು. ಹಲವು ಮಾರ್ಗಗಳಲ್ಲಿ ಜನರು ಖಾಸಗಿ ಬಸ್‌ಗಳು ಸಂಚಾರ ಸೇವೆ ನೀಡಿದವು.

ಶಿವಮೊಗ್ಗ ನಿಲ್ದಾಣದಿಂದ ಹೊರಗೆ ಹೊರಡುವ, ಬೇರೆ ಬಾಗಗಳಿಂದ ನಿಲ್ದಾಣಕ್ಕೆ ಬರುವ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಇದೇ ಮೊದಲ ಬಾರಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಒಳಗೆ ಖಾಸಗಿ ಬಸ್‌ಗಳಿಗೆ ಪ್ರವೇಶ ನೀಡಲಾಗಿತ್ತು. ಕೆಲವು ಭಾಗಗಳಿಗೆ ಬಸ್‌ ಸೌಕರ್ಯ ಲಭಿಸಿದರೆ, ಕೆಲವು ಭಾಗಗಳ ಪ್ರಯಾಣಿಕರಿಗೆ ಬಸ್‌ಗಳು ಲಭ್ಯವಾಗದೇ ನಿಲ್ದಾಣದಲ್ಲೇ ಕಾಲ ಕಳೆದರು.

ಶಿವಮೊಗ್ಗ ಸರ್ಕಾರಿ ಬಸ್‌ನಿಲ್ದಾಣಕ್ಕೆ ಪ್ರತಿನಿತ್ಯ ಸುಮಾರು 1,300 ಬಸ್‌ಗಳು ಬರುತ್ತವೆ ಮತ್ತು ಹೊರಡುತ್ತವೆ. ಮುಷ್ಕರದ ಕಾರಣ 150ಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಸೇವೆ ನೀಡುತ್ತಿವೆ. ಖಾಸಗಿ ಟ್ಯಾಕ್ಸಿಗಳಿಗೂ ಅವಕಾಶ ಕೊಡಲಾಗಿತ್ತು. ಜಿಲ್ಲೆಯ ಬಹುತೇಕ ಭಾಗಗಳಿಗೆ ಖಾಸಗಿ ಬಸ್‌ ಸಂಚಾರವಿದೆ. ಹಾಗಾಗಿ, ಜಿಲ್ಲಾ ವ್ಯಾಪ್ತಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಸಮಸ್ಯೆಯಾಗಲಿಲ್ಲ. ಹೊರ ಜಿಲ್ಲೆಗಳಿಗೆ ತೆರಳುವ, ಹೊರ ಜಿಲ್ಲೆಗಳಿಂದ ಬರುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಯಿತು.

ಕೆಎಸ್‌ಆರ್‌ಟಿಸಿಯ ಯಾವ ಸಿಬ್ಬಂದಿಯೂ ಕೆಲಸಕ್ಕೆ ಹಾಜರಾಗಿಲ್ಲ. ಕರ್ತವ್ಯಕ್ಕೆ ಹಾಜರಾಗುವಂತೆ ಹಲವು ಚಾಲಕರು ಮತ್ತು ನಿರ್ವಾಹಕರ ಮನವೊಲಿಸಲಾಗಿದೆ. ಕೆಲವರು ಭಯದಿಂದ ಕರ್ತವ್ಯಕ್ಕೆ ಹಾಜರಾಗಲು ಹಿಂದೇಟು ಹಾಕಿದ್ದಾರೆ. ಹಾಗಾಗಿ, ಸಂಚಾರ ಸ್ಥಗಿತವಾಗಿದೆ ಎಂದು ಶಿವಮೊಗ್ಗ ಡಿಪೋದ ಅಧಿಕಾರಿ ಸಿದ್ದೇಶ್ ಪ್ರತಿಕ್ರಿಯಿಸಿದರು.

ಖಾಸಗಿ ಬಸ್‌ಗೆ ಪೊಲೀಸರ ಕಿರಿಕಿರಿ: ಕೆಎಸ್‌ಆರ್‌ಟಿಸಿ ನಿಲ್ದಾಣ ಪ್ರವೇಶಿಸಿದ ಖಾಸಗಿ ಬಸ್‌ಗೆ ಪೊಲೀಸರು ಪ್ರವೇಶ ನೀಡಲಿಲ್ಲ. ಜಿಲ್ಲಾಡಳಿತ ಅನುಮತಿ ನೀಡಿದ್ದರೂ ಪೊಲೀಸರು ಅಡ್ಡಿ ಮಾಡುತ್ತಿದ್ದಾರೆ ಎಂದು ಬಸ್‌ ಸಿಬ್ಬಂದಿ ಪೊಲೀಸರ ಜತೆ ವಾಗ್ವಾದ ನಡೆಸಿದರು. ಕೊನೆಗೆ ಅಧಿಕಾರಿಗಳ ಮಧ್ಯ ಪ್ರವೇಶದಿಂದ ಪರಿಸ್ಥಿತಿ ತಿಳಿಯಾಯಿತು. ಬಸ್‌ ಸಂಚಾರಕ್ಕೆ ಅವಕಾಶ ನೀಡಲಾಯಿತು.

ಮುಷ್ಕರದ ಕಾರಣ ಖಾಸಗಿ ಬಸ್‌ಗಳ ಸಂಚಾರಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿತ್ತು. ನಿಲ್ದಾಣದ ಸುತ್ತ ಪೊಲೀಸ್‌ ಸರ್ಪಗಾವಲು ಹಾಕಲಾಗಿತ್ತು.

ಪರೀಕ್ಷಾ ಕೇಂದ್ರಕ್ಕೆ ಬರಲು ವಿದ್ಯಾರ್ಥಿಗಳ ಪರದಾಟ: ಕುವೆಂಪು ವಿಶ್ವವಿದ್ಯಾಲಯ ಬುಧವಾರ ಪರೀಕ್ಷೆಯಿಂದ ವಿನಾಯಿತಿ ನೀಡದ ಕಾರಣ ಜಿಲ್ಲೆಯ ವಿವಿಧ ಭಾಗಗಳಿಂದ ಪರೀಕ್ಷಾ ಕೇಂದ್ರಕ್ಕೆ ಬರಲು ವಿದ್ಯಾರ್ಥಿಗಳು ಪರದಾಡಿದರು. ಕೆಲವರು ದ್ವಿಚಕ್ರ ವಾಹನಗಳಲ್ಲಿ, ದುಬಾರಿ ಬಾಡಿಗೆ ತೆತ್ತು ಇತರೆ ವಾಹನಗಳಲ್ಲಿ ಪರೀಕ್ಷಾ ಕೇಂದ್ರಕ್ಕೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT