ಗುರುವಾರ , ಜುಲೈ 29, 2021
23 °C
ಭತ್ತ ಖರೀದಿ ಹಗರಣ ಸಿಐಡಿಗೆ ವಹಿಸಿ: ಕೆ.ಟಿ.ಗಂಗಾಧರ್

ಬೆಂಬಲ ಬೆಲೆ ಪುನರ್‌ ಪರಿಶೀಲನೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಮುಂಗಾರು ಹಂಗಾಮಿನ 14 ಕೃಷಿ ಉತ್ಪನ್ನಗಳ ಬೆಂಬಲ ಬೆಲೆಗಳನ್ನು ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಏರಿಕೆ ಮಾಡಿದೆ. ಈ ಬೆಲೆಗಳನ್ನು ಪುನರ್‌ಪರಿಶೀಲನೆ ಮಾಡಬೇಕು ಎಂದು ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಒತ್ತಾಯಿಸಿದರು.

2020-21ರ ಬಜೆಟ್‌ನಲ್ಲಿ ರೈತರ ಆದಾಯವನ್ನು ಒಂದೂವರೆ ಪಟ್ಟು ಹೆಚ್ಚಿಸುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಈಗ ಘೋಷಿಸಿರುವ ಬೆಂಬಲ ಬೆಲೆಗಳಲ್ಲಿ ಕೆಲವು ಉತ್ಪಾದನಾ ವೆಚ್ಚಕ್ಕೆ ಸಮವಾಗಿವೆ. ಉಳಿದ ಉತ್ಪನ್ನಗಳು ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇವೆ. ಅವೈಜ್ಞಾನಿಕ ಬೆಲೆಗಳನ್ನು ಸರಿಪಡಿಸಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಈಗ ಘೋಷಿಸಿರುವ ಬೆಂಬಲ ಪರಿಣಾಮ ಕನಿಷ್ಠ ಶೇ 50ರಷ್ಟು ಆದಾಯ ಸಿಗಲಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೂ, ರೈತರ ಆದಾಯ ಸುರಕ್ಷ ಗಮನದಲ್ಲಿಟ್ಟುಕೊಳ್ಳದೇ ಬೆಂಬಲ ಬೆಲೆ ಘೋಷಣೆ ಮಾಡಲಾಗಿದೆ. ಈ ದರವನ್ನು ಪುನರ್ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಭತ್ತದ ಬೆಂಬಲ ಬೆಲೆ ನೆಪದಲ್ಲಿ ಅಧಿಕಾರಿಗಳು, ಮಧ್ಯವರ್ತಿಗಳು ಸೇರಿಕೊಂಡು ಹಣ ಲೂಟಿ ಮಾಡಿದ್ದಾರೆ. ಭತ್ತ ಮಾರಾಟ ಮಾಡುವ ರೈತರು ಆನ್‌ಲೈನ್‌ನಲ್ಲಿ ನೋಂದಣಿ ಮಾಡಲು ಡಿಸೆಂಬರ್ 26ರಿಂದ ಜನವರಿ 1ರವರೆಗೆ ಅವಕಾಶ ನೀಡಲಾಗಿತ್ತು. ಭತ್ತ ಖರೀದಿಗೆ ದಿನವನ್ನು ಮಾರ್ಚ್‌ ಅಂತ್ಯಕ್ಕೆ ಮುಕ್ತಾಯ ಮಾಡಲಾಗಿದೆ. ರೈತರು ಭತ್ತ ಕೊಯ್ಲು ಆರಂಭಿಸುವುದೇ ಏಪ್ರಿಲ್‌ ನಂತರ. ಹಾಗಾದರೆ ಯಾರ ಹಿತಕ್ಕಾಗಿ ಬೆಂಬಲ ಬೆಲೆ ಅವಧಿ ನಿಗದಿ ಮಾಡಲಾಗಿತ್ತು? ಇದು ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಟ್ಟು ಹಣ ಲೂಟಿ ಮಾಡುವ ತಂತ್ರ ಎಂದು ಆರೋಪಿಸಿದರು.

ಭದ್ರಾವತಿ ತಾಲ್ಲೂಕಿನಲ್ಲಿ ಒಬ್ಬ ರೈತನಿಂದಲೂ ಭತ್ತ ಖರೀದಿಸಿಲ್ಲ. ಶಿವಮೊಗ್ಗ ತಾಲ್ಲೂಕಿನಲ್ಲಿ ಒಬ್ಬ, ಸಾಗರ ತಾಲ್ಲೂಕಿನಲ್ಲಿ 46, ಸೊರಬ ತಾಲ್ಲೂಕಿನಲ್ಲಿ 26, ಶಿಕಾರಿಪುರ ತಾಲೂಕಿನಲ್ಲಿ 77, ಹೊಸನಗರ ತಾಲ್ಲೂಕಿನಲ್ಲಿ 294, ತೀರ್ಥಹಳ್ಳಿ ತಾಲ್ಲೂಕಿನಲ್ಲಿ 115 ರೈತರು ಸೇರಿ 765 ರೈತರಿಂದ ಭತ್ತ ಖರೀದಿ ಮಾಡಲಾಗಿದೆ. ₨ 3.84 ಕೋಟಿ ಆನ್‌ಲೈನ್‌ ಮೂಲಕ ರೈತರಿಗೆ ಸಂದಾಯ ಮಾಡಲಾಗಿದೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ. ಲಕ್ಷ ಹೆಕ್ಟೇರ್ ಭತ್ತ ಬೆಳೆಯುವ ಕೇವಲ 765 ರೈತರಿಂದ ಭತ್ತ ಖರೀದಿಸಲಾಗಿದೆ. ಈ ಹಗರಣವನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.

ಖರೀದಿ ಕೇಂದ್ರಗಳಿಗೆ ಭತ್ತ ನೀಡಲು ಆನ್‌ಲೈನ್‌ ಅರ್ಜಿ ಸಲ್ಲಿಸುವ ಅವಧಿ ವಿಸ್ತರಣೆ ಮಾಡಬೇಕು. ಹಣ ಲೂಟಿಯಾಗಿರುವ ಪ್ರಕರಣ ಸಿಐಡಿ ತನಿಖೆಗೆ ಆದೇಶಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಯಶವಂತರಾವ್ ಘೋರ್ಪಡೆ, ಡಿ.ವಿ.ವೀರೇಶ್, ಹನುಮಂತಾಪುರ ಹಿರಿಯಣ್ಣಯ್ಯ, ಸಣ್ಣ ರಾಮಪ್ಪ, ಪಾಂಡುರಂಗಪ್ಪ, ಜಗದೀಶ್ ನಾಯಕ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.