ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜೀವಪರ ಕಾಂಗ್ರೆಸ್‌, ಕೂಗುಮಾರಿ ಬಿಜೆಪಿ ನಡುವಿನ ಹೋರಾಟ: ಸುಧೀರ್ ಮರೋಳಿ

Published 31 ಮಾರ್ಚ್ 2024, 15:56 IST
Last Updated 31 ಮಾರ್ಚ್ 2024, 15:56 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಈ ಬಾರಿಯ ಚುನಾವಣೆ ಕೂಗುಮಾರಿ ಬಿಜೆಪಿ ಹಾಗೂ ಜೀವಪರತೆಯ ಕಾಂಗ್ರೆಸ್ ನಡುವಿನ ಹೋರಾಟವಾಗಿದೆ. ಕೊನೆಗೆ ಜೀವಪರತೆಯೇ ಗೆಲ್ಲಲಿದೆ’ ಎಂದು ಕೆಪಿಸಿಸಿ ವಕ್ತಾರ ಸುಧೀರ್ ಕುಮಾರ್ ಮರೋಳಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನಡೆದ ವಾರ್ಡ್ ಹಾಗೂ ಬೂತ್ ಮಟ್ಟದ ಅಧ್ಯಕ್ಷರ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಪಕ್ಷ ಗ್ಯಾರಂಟಿಗಳ ಜಾರಿ ಮಾಡುವ ಮೂಲಕ ಕಾರ್ಯಕರ್ತರ ತಲೆ ಎತ್ತಿ ನಡೆಯುವಂತೆ ಮಾಡಿದೆ. ಉಡುಪಿಯಲ್ಲಿ ಇಷ್ಟು ವರ್ಷ ಬಿಜೆಪಿ ಬೆಂಬಲಿಗರ ಮನೆಗೆ ಮತಯಾಚನೆಗೆ ಹೋದಾಗ ಅವರ ಮನೆಯಲ್ಲಿ ನಾಲ್ಕು ಮತವಿದ್ದರೆ ಎರಡು ಮತ ನಮಗೆ ಎರಡು ಮತ ನಿಮ್ಮ ಪಕ್ಷಕ್ಕೆ ಹಾಕಿ ಎಂದು ಹೇಳಿ ಬರುತ್ತಿದ್ದೆವು. ಈ ಬಾರಿ ಗ್ಯಾರಂಟಿ ಕೊಟ್ಟಿದ್ದೇವೆ. ಅಷ್ಟು ಮತ ನಮಗೆ ಕೊಡಿ ಎಂದು ಕೇಳುತ್ತಿದ್ದೇವೆ’ ಎಂದು  ವಿವರಿಸಿದರು‌.

‘ಒಂದು ಮನೆ ಒಂದು ನಿಮಿಷದ ಅಭಿಯಾನ ನಡೆಸೋಣ. ಶಿವಮೊಗ್ಗದಲ್ಲಿ ಇಷ್ಟು ವರ್ಷ ಬಿಜೆಪಿ ಕೂಗುಮಾರಿಗಳ ಅಬ್ಬರದಲ್ಲಿ ಕಾಂಗ್ರೆಸ್ ಪಕ್ಷ ತಲೆತಗ್ಗಿಸುವಂತೆ ಮಾಡಿದ್ದರು. ಇಂದು ಎದೆಯುಬ್ಬಿಸಿ ಮತಯಾಚಿಸೋಣ’ ಎಂದರು.

ಬಿಜೆಪಿಯಿಂದ ಇತ್ತೀಚೆಗೆ ಕೊಟ್ಟ ಅಕ್ಷತೆ ಕಾಳು ಅನ್ನಭಾಗ್ಯದ ಅಕ್ಕಿಯದ್ದು.  ಶಿವಮೊಗ್ಗದಲ್ಲಿ ನಡೆದ ರಾಗಿಗುಡ್ಡದ ಘಟನೆ ಪ್ರಸ್ತಾಪಿಸಿದ ಮರೋಳಿ, ಅಂದು ಟಿವಿಯಲ್ಲಿ ಮಾತ್ರ ಕೊತಕೊತವಿತ್ತು. ಹೊರಗಡೆ ಎಲ್ಲರೂ ಅಣ್ಣತಮ್ಮಂದಿರಂತೆ ಇದ್ದಾರೆ ಎಂದು ಹೇಳಿದರು.

ಜೀವಪರತೆ ಎಂದರೆ ಕಾಂಗ್ರೆಸ್ ಮತ್ತು ಅದರ ಗ್ಯಾರಂಟಿ ಆಗಿದೆ. ರಫೆಲ್ ಫೈಲ್, ಪಿಎಂ ಕೇರ್ ಬಗ್ಗೆ ಮಾಹಿತಿ ಸಿಗಲಿಲ್ಲ. ಈಗ ಎಲೆಕ್ಷನ್‌ ಬಾಂಡ್ ವಿಷಯದಲ್ಲಿ ಕೂಗುಮಾರಿಗಳು ಸಿಕ್ಕಿಕೊಂಡಿದ್ದಾರೆ. ಎಲೆಕ್ಷನ್ ಬಾಂಡ್ ನ ಮೂಲಕ ಚೌಕಿದಾರ್ ಮುಖವಾಡ ಕಳಚಿದೆ ಎಂದರು.

ವಿದೇಶಿ ಹಣವನ್ನ ಯಾವುದೇ ಪಕ್ಷ ಪಡೆಯದಂತೆ ಕಾನೂನು ಕಾಂಗ್ರೆಸ್ ತಂದಿತ್ತು. ತಾವು ಸಾಚಾ ದೇಶಪ್ರೇಮಿಗಳೆಂದು ಹೇಳಿಕೊಳ್ಳುವ ಬಿಜೆಪಿ ಪಾಕಿಸ್ತಾನದಿಂದಲೇ ಹಣ ಪಡೆದಿದ್ದಾರೆ ಎಂದು ಉದಾಹರಣೆ ಸಮೇತ ವಿವರಿಸಿದರು.

ಶಿವಮೊಗ್ಗದ ಸಂಸದರು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಅವರಿಗೆ ಅನುಭವವಿಲ್ಲ ಎಂದು ಹೇಳಿದ್ದಾರೆ. ಹೌದು ಅವರಿಗೆ ಚೆಕ್ ನಲ್ಲಿ ಹಣ ಪಡೆದು ಅಕೌಂಟ್ ಗೆ ಹಾಕಿಕೊಳ್ಳುವ ಅನುಭವಿಲ್ಲ. ಚೋಟಾ ಸಹಿ ಮಾಡಿ ಚೆಕ್ ಪಡೆದ ಅನುಭವ ಇಲ್ಲ ಎಂದು ಟಾಂಗ್ ನೀಡಿದರು.

ಕೆ.ಎಸ್‌.ಈಶ್ವರಪ್ಪ ಅವರಿಗೆ ಹಾಲಿ ಸಂಸದರು ಮತ್ತು ಅವರ ತಂದೆಯ ಮೇಲೆ ಸಿಟ್ಟಿದೆ.‌ ಹಾಗಾಗಿ ಗೀತಾ ಶಿವರಾಜ್ ಕುಮಾರ್ ಗೆ ಮತಹಾಕಿ ನಿಮ್ಮ ಸಿಟ್ಟನ್ನ ತೀರಿಸಿಕೊಳ್ಳಿ ಎಂದು ಮನವಿ ಮಾಡೋಣ ಎಂದರು.

ಕಾಂಗ್ರೆಸ್‌ ಮುಖಂಡ ಎಚ್.ಸಿ. ಯೋಗೀಶ್ ಮಾತನಾಡಿ, ‘ಬೂತ್ ಅಧ್ಯಕ್ಷ ಇಲ್ಲದಿದ್ದರೆ ಪಕ್ಷವಿಲ್ಲ. ಸರ್ಕಾರದ ಯೋಜನೆ ಮುಟ್ಟಿಸಲು ಬೂತ್ ಅಧ್ಯಕ್ಷರ ಪಾತ್ರ ಮಹತ್ವ ಪಡೆದಿದೆ. 2023 ರ ಚುನಾವಣೆಯಲ್ಲಿ ಗ್ಯಾರಂಟಿ ಕೊಡ್ತೀವಿ ಎಂದು ಹೇಳಿದ್ದೆವು. ಈಗ ಕೊಟ್ಟಿದ್ದೇವೆ. ಒಂದು ನಿಮಿಷ ಒಂದು ಮನೆ ಎಂಬ ಅಭಿಯಾನದಿಂದ ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೇಳೋಣ’ ಎಂದರು.

ರಮ್ಮಾನ್, ಬಸವ ಜಯಂತಿ, ಯುಗಾದಿ ಹಬ್ಬದ ವೇಳೆ ಹೇಗೆ ಮಾಡಬೇಕು ಎಂಬುದನ್ನು ಯೋಚಿಸಿ ಮತಯಾಚಿಸೋಣ. 2004 ರಿಂದ ಕಾಂಗ್ರೆಸ್ ಅಭ್ಯರ್ಥಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಗೆದ್ದಿಲ್ಲ. ಗೆಲ್ಲೋಣ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಮಾಜಿ ಸದಸ್ಯ ಆರ್. ಪ್ರಸನ್ನಕುಮಾರ್, ಕಲಗೋಡು ರತ್ನಾಕರ್,  ಜಿ.ಪಂ ಮಾಜಿ ಅಧ್ಯಕ್ಷೆ ಬಲ್ಕೀಶ್ ಭಾನು, ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್, ಡಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎನ್.ರಮೇಶ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ, ಅಲ್ತಾಫ್ ಪರ್ವೇಜ್, ಎನ್ಎಸ್‌ಯುಐನ ಮಧು, ಚೇತನ್ ಗೌಡ, ಗಿರೀಶ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT