ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections | ಶಿವಮೊಗ್ಗಕ್ಕೆ ನರೇಂದ್ರ ಮೋದಿ ಭೇಟಿ ಇಂದು

Published 18 ಮಾರ್ಚ್ 2024, 0:30 IST
Last Updated 18 ಮಾರ್ಚ್ 2024, 0:30 IST
ಅಕ್ಷರ ಗಾತ್ರ

ಶಿವಮೊಗ್ಗ: ಲೋಕಸಭಾ ಚುನಾವಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಾ.18ರಂದು ಶಿವಮೊಗ್ಗಕ್ಕೆ ಬರಲಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ್ ತಿಳಿಸಿದರು.

ಇಲ್ಲಿನ ಅಲ್ಲಮ್ಮಪ್ರಭು ಉದ್ಯಾನದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಮಾತನಾಡುವರು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ, ಉಡುಪಿ–ಚಿಕ್ಕಮಗಳೂರು ಸೇರಿ 4 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುವ ಗುರಿ ಹೊಂದಲಾಗಿದೆ. ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಾಸಕರಾದ ಆರಗ ಜ್ಞಾನೇಂದ್ರ, ಎಸ್.ಎನ್.ಚೆನ್ನಬಸಪ್ಪ, ಸಿ.ಟಿ.ರವಿ ಸೇರಿ ಜೆಡಿಎಸ್ ಮುಖಂಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ಹೇಳಿದರು.

ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಆಗಮನದಿಂದ ಅದ್ಭುತ ಯಶಸ್ಸು ಲಭಿಸಲಿದೆ. ರಾಜ್ಯದ 28 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಸಾಧಿಸಲಿದೆ. ಇಲ್ಲಿನ ಫ್ರಿಡಂ ಪಾರ್ಕ್ ಆವರಣದಲ್ಲಿ 2.5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಅವರು ಜನರ ನಡುವಿನಿಂದ ವೇದಿಕೆಗೆ ಬರಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಮಾಜಿ ಪ್ರಧಾನಿ ದೇವೇಗೌಡ ನೇತೃತ್ವದ ಜೆಡಿಎಸ್ , ಎನ್‌ಡಿಎ ಜೊತೆ ಕೈಜೋಡಿಸಿದೆ. ಮೋದಿ ಅವರ ಕಾರ್ಯಕ್ರಮಕ್ಕೆ ಬರುವಂತೆ ಪಕ್ಷದ ಮುಖಂಡರಿಗೆ ಆಹ್ವಾನ ನೀಡಲಾಗಿದೆ ಎಂದು ಹೇಳಿದರು.

ಶಾಸಕರಾದ ಎಸ್.ಎನ್.ಚೆನ್ನಬಸಪ್ಪ, ನವೀನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ.ಮೇಘರಾಜ್, ಎಸ್.ದತ್ತಾತ್ರಿ, ಎಸ್.ಎಸ್.ಜ್ಯೋತಿ ಪ್ರಕಾಶ್, ಜ್ಞಾನೇಶ್, ಕೆ.ವಿ.ಅಣ್ಣಪ್ಪ ಇದ್ದರು.

ಮೋದಿ ಆಗಮನ: ಬಿಗಿ ಭದ್ರತೆ

ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಲಿರುವ ಪ್ರಧಾನಿ ‌ನರೇಂದ್ರ‌ ಮೋದಿ ಅವರ ಆಗಮನಕ್ಕೆ ಕ್ಷಣಗಣನೆ ಶುರುವಾಗಿದೆ. ಸಭೆ ನಡೆಯುವ ಅಲ್ಲಮಪ್ರಭು ಉದ್ಯಾನದ ಎಲ್ಲಾ ಗೇಟ್ ಗಳಿಗೆ ಬ್ಯಾರಿಕೇಡ್ ಅಳವಡಿಸಿ ಬಂದ್ ಮಾಡಲಾಗಿದ್ದು ಒಂದು ಗೇಟ್ ಮಾತ್ರ ತೆರೆಯಲಾಗಿದೆ. ಇಲ್ಲಿನ ಸುತ್ತಮುತ್ತಲ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಅದೇ ರೀತಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸಮಗ್ರ ತಪಾಸಣೆಯ ‌ಬಳಿಕವೇ ಮೈದಾನದ ಒಳಗಡೆ ಬಿಡಲಾಗುತ್ತಿದೆ. ಬ್ಲೂಟೂತ್ ನೀರಿನ ಬಾಟಲಿ ಪೆನ್ ನಂತಹ ವಸ್ತುಗಳನ್ನೂ ಉದ್ಯಾನದ ಒಳಗೆ ನಿಷೇಧಿಸಲಾಗಿದೆ. ಪ್ರಧಾನಿ ಮೋದಿ ಬರುವ ಸೋಗಾನೆ ವಿಮಾನ ನಿಲ್ದಾಣದಿಂದ ಮಂಡೇನಕೊಪ್ಪ ಸಂತೆ ಕಡೂರು ವಡ್ಡಿನಕೊಪ್ಪ ಜ್ಯೋತಿನಗರ ಬಡಾವಣೆಯಿಂದ ಎನ್‌.ಆರ್‌.ಪುರ ರಸ್ತೆಗೆ ತೆರಳುವ ಮಾರ್ಗವನ್ನು ಬಂದ್‌ ಮಾಡಲಾಗಿದೆ. ಬ್ಯಾರಿಕೇಡ್‌ ಹಾಕಿ ಪೊಲೀಸರು ಮತ್ತು ಹೋಂ ಗಾರ್ಡ್‌ ಸಿಬ್ಬಂದಿ ನಿಯೋಜಿಸಲಾಗಿದೆ. ಇಲ್ಲಿನ ಎಂಆರ್‌ಎಸ್‌ ವೃತ್ತದ ಬೀದಿ ಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT