ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕಾಲಿಕ ಮಳೆ: ಮುಕ್ಕಾದ ಮೆಕ್ಕೆಜೋಳದ ತೆನೆ

ಅಕಾಲಿಕ ಮಳೆ: ಮಧ್ಯಮ ವರ್ಗದವರ ಬದುಕು ಅತಂತ್ರ
Last Updated 22 ನವೆಂಬರ್ 2021, 5:21 IST
ಅಕ್ಷರ ಗಾತ್ರ

ರಿಪ್ಪನ್‌ಪೇಟೆ: ಎರಡು ವಾರಗಳಿಂದ ಎಡೆಬಿಡದೆ ಸುರಿದ ಅಕಾಲಿಕಾ ಮಳೆಯಿಂದ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬೆಳೆದ ಮೆಕ್ಕೆಜೋಳದ ಕುಂಡಿಗೆಯಲ್ಲಿ ನೀರು ಸೇರಿ ಮುಕ್ಕಾಗಿ ಬೆಳೆ ಸಂಪೂರ್ಣ ಹಾನಿಯಾಗಿದೆ. ಇದನ್ನೇ ನಂಬಿಕೊಂಡಿದ್ದ ಕೃಷಿ ಕಾರ್ಮಿಕರು, ಸಣ್ಣ , ಅತಿ ಸಣ್ಣ ರೈತರ ಬದುಕು ಬೀದಿಗೆ ಬಿದ್ದಿದೆ.

ಕೆಂಚನಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಳಿಬೈಲ್‌, ಮಾದಾಪುರ, ಅಲುವಳ್ಳಿ ವಿರಕ್ತಮಠ ಹಾಗೂ ಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವಾಪುರ, ಅಡ್ಡೇರಿ, ಗಾಮನಗದ್ದೆ, ಸಾರಗನ ಜಡ್ಡು, ಕೊಳವಂಕ ಹಾರೋಹಿತ್ತಲು ಗ್ರಾಮಗಳಲ್ಲಿ 400 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಫಸಲು ಕೈ ಸೇರುವ ಮುನ್ನ ಕಮರಿ ಹೋಗಿದೆ. ಹೀಗಾಗಿ ನೂರಾರು ಮಧ್ಯಮ ಹಾಗೂ ಕೆಳ ವರ್ಗದ ಜನರ ಬದುಕು ಅತಂತ್ರವಾಗಿದೆ.

ಕೃಷಿ ಅಧಿಕಾರಿಗಳ ಮಾಹಿತಿಯಂತೆ ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ 545 ಹೆಕ್ಟೇರ್‌ ಪ್ರದೇಶದಲ್ಲಿ ಜೋಳ ಬಿತ್ತನೆಯಾಗಿದೆ. ಮೂರು ತಿಂಗಳ ಬೆಳೆ ಇದಾಗಿದ್ದು, ಒಂದು ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಗೆ ಅಂದಾಜು ₹ 15 ಸಾವಿರದಿಂದ ₹ 20 ಸಾವಿರ ಖರ್ಚು ಬರಲಿದೆ. 30ರಿಂದ 40 ಕ್ವಿಂಟಲ್‌ ಇಳುವರಿ ಬರುತ್ತದೆ. ಕಡಿಮೆ ಶ್ರಮ, ದುಪ್ಪಟ್ಟು ಲಾಭ ಬರುವ ಈ ಬೆಳೆ ಬಡ ಕುಟುಂಬಗಳಿಗೆ ಆಧಾರ. ಹೀಗಾಗಿ ಸಣ್ಣ ಪುಟ್ಟ ರೈತರು, ಕೂಲಿ ಕಾರ್ಮಿಕರು ತಮ್ಮ ದುಡಿಮೆಯಿಂದ ಕೂಡಿಟ್ಟ ಹಣ ಮತ್ತು ಕೈಗಡ ಸಾಲ ಮಾಡಿ ತಮಗಿರುವ 2–3 ಎಕರೆ ಜಮೀನಿಲ್ಲಿ ಬೆಳೆ ಬೆಳೆದಿದ್ದಾರೆ.

‘ಅಕಾಲಿಕ ಮಳೆಯ ನೀರು ಜೋಳದ ಕುಂಡಿಗೆಯಲ್ಲಿ ಸೇರಿ ಬೆಳೆಯನ್ನು ಸರ್ವನಾಶ ಮಾಡಿದೆ. ಮುಂದಿನ ಬದುಕು ಹೇಗೆ ಎಂಬ ಚಿಂತೆ ಕಾಡಿದೆ’ ಎಂದು ಅಲುವಳ್ಳಿ ರೈತ ಚನ್ನಪ್ಪಗೌಡ ಬೇಸರ ವ್ಯಕ್ತಪಡಿಸಿದರು.

‘ಕೆರೆಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಮಳೆಯಾಶ್ರಿತ ಭತ್ತದ ಬೆಳೆ ಬಿತ್ತನೆ ಮಾಡಲಾಗಿದೆ. ಸಕಾಲದಲ್ಲಿ ಮಳೆಯಾಗಿದ್ದರಿಂದ ಫಸಲೂ ಚೆನ್ನಾಗಿತ್ತು. ರೈತರು ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದರು. ಬೆಳೆ ಕಟಾವಿನ ಸಮಯದಲ್ಲಿ ಅಕಾಲಿಕ ಮಳೆ ಅಘಾತ ಉಂಟು ಮಾಡಿದೆ’ ಎಂದು ರಿಪ್ಪನ್‌ಪೇಟೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಎನ್‌. ಶಾಂತಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT