ಸೋಮವಾರ, ಮಾರ್ಚ್ 8, 2021
24 °C
ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್ ಅಭಿಮತ

ಅನುಭವದ ನೈಜತೆ ಬಿಂಬಿಸುವ ಮಾಧ್ಯಮ ರಂಗಭೂಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ಜೀವನದ ಅನುಭವಗಳನ್ನು ನೈಜತೆಯೊಂದಿಗೆ ಪ್ರದರ್ಶಿಸುವ ಮಾಧ್ಯಮ ರಂಗಭೂಮಿ ವಾಸ್ತವ ಅಂಶಗಳೊಂದಿಗೆ ಸಮಾಜದ ಚಿತ್ರಣ ಬಿಂಬಿಸುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ. ಎಸ್.ಎಸ್. ಪಾಟೀಲ್ ಹೇಳಿದರು.

ಇಲ್ಲಿನ ಕರ್ನಾಟಕ ಸಂಘದಲ್ಲಿ ಕರ್ನಾಟಕ ನಾಟಕ ಅಕಾಡೆಮಿ, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಜಿಲ್ಲೆಯ ಪತ್ರಕರ್ತರು, ಪತ್ರಿಕೋದ್ಯಮ ಹಾಗೂ ಸಾಹಿತ್ಯಾಸಕ್ತ ವಿದ್ಯಾರ್ಥಿಗಳಿಗಾಗಿ ಸೋಮವಾರ ಹಮ್ಮಿಕೊಂಡಿದ್ದ ‘ರಂಗಾವಲೋಕನ, ರಂಗಭೂಮಿ ವರದಿಗಾರಿಕೆ, ವಿಮರ್ಶೆಯ ವಿಶೇಷ ಕಮ್ಮಟ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಟಿವಿ ಹಾಗೂ ಸಿನಿಮಾ ಮಾಧ್ಯಮದಲ್ಲಿ ಉತ್ಪೇಕ್ಷೆ ರೀತಿಯಲ್ಲಿ ಸಮಾಜದ ಚಿತ್ರಣ ಬಿಂಬಿಸುವುದು ಸಾಮಾನ್ಯ. ಆದರೆ, ರಂಗಭೂಮಿಯಲ್ಲಿ ಜೀವನದ ಅನುಭವಗಳನ್ನು ನೈಜತೆಯ ಪ್ರದರ್ಶನವನ್ನು ಕಾಣುತ್ತೇವೆ’ ಎಂದು ತಿಳಿಸಿದರು.

ನಾಟಕ ಅಭಿನಯದಿಂದ ಬದುಕು ಕಟ್ಟಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಂತಹ ವಾತಾವರಣದಿಂದ ಬಹಳಷ್ಟು ಮಂದಿ ಕಲಾವಿದರು ಒಲ್ಲದ ಮನಸ್ಸಿನಿಂದಲೇ ಸಿನಿಮಾ ಮಾಧ್ಯಮ ಹಾಗೂ ಕಿರುತೆರೆ ಮಾಧ್ಯಮದತ್ತ ಮುಖ ಮಾಡಿದ್ದಾರೆ. ಇದರ ನಡುವೆಯೂ ಕೆಲ ಕಲಾವಿದರು ನಾಟಕದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಾಗಲೆಲ್ಲ ನಾಟಕದಲ್ಲಿ ಭಾಗಿಯಾಗುತ್ತಿರುವುದು ಸಂತಸದ ವಿಷಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಹಾರಾಷ್ಟ್ರದಲ್ಲಿ ಸಿನಿಮಾ ಕಲಾವಿದರಿಗಿಂತ ರಂಗಭೂಮಿ ಕಲಾವಿದರು ಹೆಚ್ಚು ಖ್ಯಾತಿ ಹೊಂದಿದ್ದಾರೆ. ಸಂಗೀತವನ್ನು ಪ್ರಧಾನವಾಗಿಸಿ ಆರಂಭಗೊಂಡ ನಾಟಕ ಕಲೆಯು ವೈಚಾರಿಕ ಚಿಂತನೆಗಳನ್ನು ಬಿತ್ತುವ ಕೆಲಸ ಮಾಡಿತು. ನಿಧಾನವಾಗಿ ರಂಗಭೂಮಿಯು ಕಾಲಕ್ಕೆ ತಕ್ಕಂತೆ ಕೆಲ ಬದಲಾವಣೆ ತರುವುದು ಅನಿವಾರ್ಯವಾಯಿತು ಎಂದು ತಿಳಿಸಿದರು.

ಪ್ರೇಕ್ಷಕರ ಆದ್ಯತೆಗಳು ಬದಲಾಗುತ್ತ ಹೋದಂತೆ ರಂಗಭೂಮಿ ಮತ್ತು ನಾಟಕ ಕ್ಷೇತ್ರಕ್ಕೆ ಜನರು ಬರುವುದು ಕಡಿಮೆಯಾಯಿತು. ಅನಿವಾರ್ಯವಾಗಿ ಪ್ರೇಕ್ಷಕರನ್ನು ಸೆಳೆಯಲು ರಂಗಭೂಮಿಯಲ್ಲಿಯೂ ಶಿಕ್ಷಣದ ಜತೆಯಲ್ಲಿ ಮನರಂಜನೆಯ ಅಂಶಗಳನ್ನು ಬಳಸಿಕೊಳ್ಳುವುದು ಆರಂಭವಾಯಿತು. ಸ್ವಲ್ಪ ಮಟ್ಟಿಗೆ ಯಶ ಕಂಡರೂ ಅದೇ ಅಂತಿಮವಾಗಲು ಸಾಧ್ಯವಾಗಲಿಲ್ಲ. ಕಾಲ ಕಳೆಯುತ್ತಿದ್ದಂತೆ ರಂಗಭೂಮಿ, ನಾಟಕ ಕ್ಷೇತ್ರವು ಯಾವುದೋ ಒಂದು ವರ್ಗಕ್ಕೆ ಮಾತ್ರ ಎಂಬಂತೆ ಬಿಂಬಿಸುವ ಪ್ರಯತ್ನ ನಡೆದು ಅದೇ ರೀತಿ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ಎನ್. ರವಿಕುಮಾರ್, ‘ಯುವ ಪತ್ರಕರ್ತರು ಸೇರಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ರಂಗಭೂಮಿಯ ವರದಿಗಾರಿಕೆ ಹಾಗೂ ವಿಮರ್ಶೆ ಬಗ್ಗೆ ವಿಶೇಷ ತರಬೇತಿ ನೀಡುವ ದೃಷ್ಠಿಯಿಂದ ರಚನಾತ್ಮಕವಾಗಿ ಕಾರ್ಯಕ್ರಮ ರೂಪಿಸಲಾಗಿದೆ. ಪತ್ರಿಕೋದ್ಯಮ ವಿದ್ಯಾರ್ಥಿಗಳು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು’ ಎಂದರು.

ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಚಪ್ಪ ಬಡಿಗೇರ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್. ಉಮೇಶ್, ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಬಿ. ಧನಂಜಯ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ವೈದ್ಯ, ಸಂಗೀತ ಶಿಕ್ಷಕ ಅಖಂಡೇಶ್ವರ ಪತ್ತಾರ, ಕೊಟ್ರಪ್ಪ ಹಿರೇಮಾಗಡಿ, ಜಿ.ಆರ್. ಲವ, ಗಣೇಶ ಅಮೀನಗಡ, ಡಾ. ಸಂಧ್ಯಾಕಾವೇರಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು