ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರ್ಕಾರಿ ಭೂಮಿ ಒತ್ತುವರಿ; ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಶಾಸಕ ಗೋಪಾಲಕೃಷ್ಣ

ಪ್ರಗತಿ ಪರಿಶೀಲನಾ ಸಭೆ
Published 8 ಜುಲೈ 2024, 15:56 IST
Last Updated 8 ಜುಲೈ 2024, 15:56 IST
ಅಕ್ಷರ ಗಾತ್ರ

ಸಾಗರ: ‘ಒಂದು ಸರ್ಕಾರ ಹೋಗಿ ಹೊಸ ಸರ್ಕಾರ ಬರುತ್ತಿದ್ದಂತೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡುವವರ ಸಂಖ್ಯೆ ಹೆಚ್ಚುತ್ತದೆ. ಈ ಒತ್ತುವರಿಯನ್ನು ತಡೆಯಬೇಕು’ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಸೂಚಿಸಿದರು.

ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಸರ್ಕಾರಿ ಭೂಮಿಯ ಒತ್ತುವರಿಯ ಬಗ್ಗೆ ಆಯಾ ಪಂಚಾಯಿತಿಯ ಗ್ರಾಮ ಲೆಕ್ಕಾಧಿಕಾರಿಗೆ ಮಾಹಿತಿ ಇರುತ್ತದೆ. ಅವರಿಂದ ಮಾಹಿತಿ ಪಡೆದು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ಗ್ರಾಮ ಲೆಕ್ಕಿಗರು ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಲೆಸಿರಬೇಕು ಎಂಬ ನಿಯಮವಿದೆ. ಆದರೆ ಬಹುತೇಕ ಗ್ರಾಮ ಲೆಕ್ಕಿಗರು ಸಾಗರ ಪಟ್ಟಣದಲ್ಲೇ ನೆಲೆಸಿದ್ದು ಖಾಸಗಿಯಾಗಿ ಕಚೇರಿ ಮಾಡಿಕೊಂಡಿದ್ದಾರೆ. ಅವರು ತಾಲ್ಲೂಕು ಕಚೇರಿಗೂ ಬರುವುದಿಲ್ಲ. ಜನರು ತಮ್ಮ ಕೆಲಸಕ್ಕಾಗಿ ಅವರ ಖಾಸಗಿ ಕಚೇರಿಗೆ ಅಲೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದು ಕೆಡಿಪಿ ಸದಸ್ಯ ಪ್ರಶಾಂತ್ ದೂರಿದರು.

‘ನಿಯಮ ಪಾಲಿಸದ ಗ್ರಾಮ ಲೆಕ್ಕಿಗರ ಪೈಕಿ ಒಂದಿಬ್ಬರನ್ನಾದರೂ ಸೇವೆಯಿಂದ ಸಸ್ಪೆಂಡ್ ಮಾಡಿ. ಆಗ ಉಳಿದವರು ಎಚ್ಚೆತ್ತುಕೊಳ್ಳುತ್ತಾರೆ. ರಿಯಲ್ ಎಸ್ಟೇಟ್ ದಂಧೆಗೆ ಕುಮ್ಮಕ್ಕು ನೀಡುವ ಗ್ರಾಮ ಲೆಕ್ಕಿಗರು ಹಾಗೂ ಸಹಾಯಕರ ಮೇಲೆ ನಿಗಾ ಇಡಿ’ ಎಂದು ತಹಶೀಲ್ದಾರ್‌ ಅವರಿಗೆ ಸೂಚಿಸಿದರು.

‘ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ನಡೆಸಿದ ಸ್ಥಳಗಳಲ್ಲಿ ರಸ್ತೆ ಹಾಗೂ ಚರಂಡಿ ವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ. ಇದನ್ನು ಸುವ್ಯವಸ್ಥೆಗೊಳಿಸುವ ಜವಾಬ್ದಾರಿ ಕಾಮಗಾರಿ ನಡೆಸುವವರ ಮೇಲೆ ಇರುತ್ತದೆ. ಆದರೆ ಅವರು ಅದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ’ ಎಂದು ಕೆಡಿಪಿ ಸದಸ್ಯ ಭೀಮನೇರಿ ಆನಂದ್ ದೂರಿದರು.

‘ಹೊಳೆಬಾಗಿಲಿನಲ್ಲಿ ಸಿಗಂದೂರು ಸೇತುವೆ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬಿಲ್ಡ್ ಕಾನ್ ಕಂಪೆನಿ ಗ್ರಾಮ ಪಂಚಾಯಿತಿಗೆ ನೀಡಬೇಕಾದ ಶುಲ್ಕವನ್ನು ಬಾಕಿ ಉಳಿಸಿಕೊಂಡಿದೆ. ಆ ಕಂಪನಿ ಪಡೆದಿರುವ ಪರವಾನಗಿ ನವೀಕರಣಗೊಂಡಿಲ್ಲ. ಸೇತುವೆ ಕೆಲಸಕ್ಕೆ ಬಂದಿರುವ ಕಾರ್ಮಿಕರಿಗಾಗಿ ನಿರ್ಮಿಸಿರುವ ಶೆಡ್‌ಗೆ ಸಂಬಂಧಪಟ್ಟ ತೆರಿಗೆಯನ್ನು ಕೂಡ ಕಂಪನಿ ಪಾವತಿಸುತ್ತಿಲ್ಲ’ ಎಂದು ಕೆಡಿಪಿ ಸದಸ್ಯ ಜಿ.ಟಿ. ಸತ್ಯನಾರಾಯಣ ಸಭೆಗೆ ಮಾಹಿತಿ ನೀಡಿದರು.

'ಸರ್ಕಾರಿ ವಿದ್ಯಾರ್ಥಿ ನಿಲಯಗಳಲ್ಲಿ ಸ್ವಚ್ಛತೆ ಕಾಪಾಡಲು ನಿಯಮಿತವಾಗಿ ಔಷಧ ಸಿಂಪಡಿಸಿ ಸೊಳ್ಳೆಗಳನ್ನು ನಿಯಂತ್ರಿಸಬೇಕು. ಪ್ರತಿ ತಿಂಗಳು ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ಮಾಡಬೇಕು. ಹಾಸ್ಟೆಲ್ ಮಕ್ಕಳಿಗೆ ನೀಡುವ ಊಟದ ವಿಷಯದಲ್ಲಿ ಗುಣಮಟ್ಟಕ್ಕೆ ಕೊರತೆಯಾಗಬಾರದು’ ಎಂದು ಬೇಳೂರು ತಿಳಿಸಿದರು.

ತುಮರಿ ಭಾಗದಲ್ಲಿ ಬಾಲಕರ ವಿದ್ಯಾರ್ಥಿನಿಲಯ ಇಲ್ಲದೆ ಇರುವುದರಿಂದ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಕುಂಠಿತವಾಗುತ್ತಿದೆ ಎಂದು ಜಿ.ಟಿ.ಸತ್ಯನಾರಾಯಣ ಹೇಳಿದರೆ, ಭಾರಂಗಿ ಹೋಬಳಿಯಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್ ಅವಶ್ಯಕತೆ ಇದೆ ಎಂದು ಸದಸ್ಯೆ ಪ್ರಭಾವತಿ ಚಂದ್ರಕಾಂತ್ ಬೇಡಿಕೆ ಮಂಡಿಸಿದರು.

‘ತಾಲ್ಲೂಕಿನ ಯಾವುದೇ ಭಾಗದ ಶಾಲೆಯ ಕಟ್ಟಡ ಸೋರುತ್ತಿದ್ದರೆ, ದುರ್ಬಲವಾಗಿದ್ದರೆ ಈ ಬಗ್ಗೆ ತಕ್ಷಣ ನನ್ನ ಗಮನಕ್ಕೆ ತರಬೇಕು. ಬಿಸಿಯೂಟ ವ್ಯವಸ್ಥೆ ಸಮರ್ಪಕವಾಗಿದೆಯೆ ಎಂಬುದನ್ನು ಅಧಿಕಾರಿಗಳೇ ಶಾಲೆಯಲ್ಲಿ ಊಟ ಮಾಡುವ ಮೂಲಕ ಪರಿಶೀಲಿಸಬೇಕು’ ಎಂದು ಬೇಳೂರು ಸೂಚಿಸಿದರು.

‘ತಾಲ್ಲೂಕಿಗೆ ಬರುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಕಾರಣ ವಾರಾಂತ್ಯದಲ್ಲಿ ಸಂಚಾರ ವ್ಯವಸ್ಥೆ ನಿಯಂತ್ರಿಸಲು ಪೊಲೀಸ್ ಇಲಾಖೆ ಸಜ್ಜಾಗಿರಬೇಕು. ಮಟ್ಕಾ ದಂಧೆ, ಗಾಂಜಾ ಮಾರಾಟ ತಡೆಗೆ ಕ್ರಮ ಕೈಗೊಳ್ಳಬೇಕು’ ಎಂದರು.

ಉಪವಿಭಾಗಾಧಿಕಾರಿ ಯತೀಶ್ ಆರ್., ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗುರುಕೃಷ್ಣ ಶೆಣೈ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸುಜಾತ, ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ್, ನಗರಸಭೆ ಪೌರಾಯುಕ್ತ ಎಚ್.ಕೆ.ನಾಗಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT