ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆಗಾಲ; ಇದು ಸಾಂಕ್ರಾಮಿಕಕ್ಕೆ ಗಮ್ಯಕಾಲ

ಜಾಗೃತಿ, ಚಿಕಿತ್ಸೆಗೆ ಆರೋಗ್ಯ ಇಲಾಖೆ ಸಜ್ಜು: ಡಿಎಚ್‌ಒ ರಾಜೇಶ ಸುರಗಿಹಳ್ಳಿ
Last Updated 11 ಜುಲೈ 2022, 2:33 IST
ಅಕ್ಷರ ಗಾತ್ರ

ಶಿವಮೊಗ್ಗ: ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ದಿಢೀರ್ ಹವಾಮಾನ ಬದಲಾವಣೆ, ನಿರಂತರ ಮಳೆ, ಶೀತ ಗಾಳಿಯ ಪರಿಣಾಮ ಜನರು ಅನಾರೋಗ್ಯಕ್ಕೆ ತುತ್ತಾಗುವುದು ಸಾಮಾನ್ಯ. ಜೊತೆಗೆ ಕಲುಷಿತ ನೀರು ಸೇವನೆ, ಸೊಳ್ಳೆ ಕಾಟದಿಂದ ಡೆಂಗಿ, ಮಲೇರಿಯಾ, ಚಿಕೂನ್‌ಗುನ್ಯಾಗೆ ತುತ್ತಾಗುತ್ತಾರೆ.ಕರುಳು ಬೇನೆ, ಇಲಿಜ್ವರವೂ ಕಾಣಿಸಿಕೊಳ್ಳುತ್ತದೆ.

ಹೀಗಾಗಿ, ಮುನ್ನೆಚ್ಚರಿಕೆಯ ಅಗತ್ಯವಿದ್ದು, ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮ, ಚಿಕಿತ್ಸೆಗೆ ಪೂರಕ ವ್ಯವಸ್ಥೆಗಳ ಬಗ್ಗೆ ಈ ವಾರದ ‘ನಮ್ಮ ಜನ ನಮ್ಮ ಧ್ವನಿ’ ಬೆಳಕು ಚೆಲ್ಲಿದೆ.

ಹೊಸನಗರ; ನಿರಂತವಾಗಿ ಜನಜಾಗೃತಿ

ಹೊಸನಗರ: ತಾಲ್ಲೂಕು ಹೇಳಿಕೇಳಿ ಹೆಚ್ಚು ಮಳೆ ಸುರಿಯುವ ಹಾಗೂ ಗುಡ್ಡಗಾಡು ಪ್ರದೇಶಗಳಿಂದ ಕೂಡಿದೆ. ಇಲ್ಲಿ ಜೂನ್‌ನಿಂದ ನವೆಂಬರ್‌ವರೆಗೂ ಮಳೆ ಸುರಿಯುತ್ತದೆ. ಆಗಸ್ಟ್‌ವರೆಗೆ ಶೀತಗಾಳಿ ಸಹಿತ ಮಳೆಯ ವಾತಾವರಣ. ಸಹಜವಾಗಿಯೇ ಜ್ವರದ ಬಾಧೆ ಹೆಚ್ಚು. ಮಕ್ಕಳು, ವೃದ್ಧರು ಬಲುಬೇಗ ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತಿದ್ದಾರೆ.

ತಾಲ್ಲೂಕಿನ ವಿವಿಧೆಡೆ ಆಸ್ಪತ್ರೆ ಸೌಲಭ್ಯ ಸಮರ್ಪಕವಾಗಿಲ್ಲ. ಸಾಮಾನ್ಯ ಜ್ವರದ ಚಿಕಿತ್ಸೆಗೂ ದೂರದ ಊರುಗಳಿಗೆ ಹೋಗಬೇಕಿದೆ. ಮುಳುಗಡೆ ಪ್ರದೇಶವಾದ ಯಡೂರು, ಸುಳುಗೋಡು, ಮಾಸ್ತಿಕಟ್ಟೆ, ನಿಟ್ಟೂರು, ಅರಮನೆಕೊಪ್ಪ, ನಗರ ಭಾಗದ ಆಸ್ಪತ್ರೆಯಲ್ಲಿ ವೈದ್ಯರ ಸಮಸ್ಯೆ ಇದೆ. ಇಲ್ಲಿನ ಜನರಿಗೆ ಜ್ವರ ಬಾಧಿಸಿದಲ್ಲಿ ದೂರದ ಹೊಸನಗರ, ತೀರ್ಥಹಳ್ಳಿ, ಸಾಗರ ತಾಲ್ಲೂಕು ಕೇಂದ್ರಗಳಿಗೇ ಹೋಗಬೇಕಾಗಿದೆ. ಹೋಬಳಿ ಕೇಂದ್ರ ರಿಪ್ಪನ್‍ಪೇಟೆಯ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದೆ. ಚಿಕಿತ್ಸೆಗೆ ಬಂದವರು ಪರದಾಡದೇ ವಿಧಿಯಿಲ್ಲ ಎಂಬ ಸ್ಥಿತಿ ಇದೆ.

ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಆನೆಕಾಲು ರೋಗ, ಇಲಿಜ್ವರ, ಚಿಕೂನ್‍ಗುನ್ಯಾ, ಡೆಂಗಿ ಬಾಧಿಸುವ ಸಾಧ್ಯತೆ ಇದೆ. ಹೀಗಾಗಿ ಆರೋಗ್ಯ ಇಲಾಖೆ ಜನಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತವಾಗಿದೆ. ಇಲ್ಲಿನ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ದಾದಿಯರು ಜನರಲ್ಲಿ ಎಚ್ಚರಿಕೆ ಕ್ರಮದ ಸಲಹೆ ನೀಡುತ್ತಿದ್ದಾರೆ.

ಸದಾ ಸಜ್ಜು: ‘ಸಾಂಕ್ರಾಮಿಕ ರೋಗದ ಹತೋಟಿಗೆ ಆರೋಗ್ಯ ಇಲಾಖೆ ಸಜ್ಜಾಗಿದೆ. ತಾಲ್ಲೂಕಿನ 10 ಪ್ರಾಥಮಿಕ ಆರೋಗ್ಯ ಕೇಂದ್ರ, 41 ಉಪಕೇಂದ್ರಗಳಲ್ಲಿ ಮಾತ್ರೆ, ಔಷಧೋಪಚಾರ ವ್ಯವಸ್ಥೆ ಮಾಡಲಾಗಿದೆ. ರೋಗಿಗಳಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ (ಟಿಎಚ್‌ಒ) ಡಾ.ಸುರೇಶ್ ಮಾಹಿತಿ ನೀಡುತ್ತಾರೆ.

ಜ್ವರ, ಕೆಮ್ಮು ಮಾತ್ರವಲ್ಲ; ಕೋವಿಡ್ ಪರೀಕ್ಷೆ ನಡೆಸಲೂ ಕ್ರಮ

ಭದ್ರಾವತಿ: ‘ಮಳೆಗಾಲ ಹೆಚ್ಚಾದಂತೆ ಜ್ವರದ ಲಕ್ಷಣ ಸಹಜವಾಗಿಯೇ ಹೆಚ್ಚಲಿದೆ. ಅದಕ್ಕೆ ಪೂರಕವಾಗಿ ಸಮೀಕ್ಷೆ ಕಾರ್ಯ ಚಾಲ್ತಿಯಲ್ಲಿದೆ’ ಎನ್ನುತ್ತಾರೆ ತಾಲ್ಲೂಕು ವೈದ್ಯಾಧಿಕಾರಿ ಡಾ.ಅಶೋಕ್.

‘ಸೊಳ್ಳೆ ಹೆಚ್ಚಾದಂತೆ ಉಲ್ಬಣಿಸುವ ಡೆಂಗಿ ಪತ್ತೆ ಮಾಡಲು ನಿರಂತರವಾಗಿ ಸಮೀಕ್ಷೆ ನಡೆಯುತ್ತಿದ್ದು, ನಮ್ಮ ಸಿಬ್ಬಂದಿ ಈ ನಿಟ್ಟಿನಲ್ಲಿ ನಿರಂತರವಾಗಿ ಜನರ ನಡುವೆ ಕೆಲಸ ಮಾಡುವ ಜತೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದರು.

‘ಎರಡು ದಿನಗಳಲ್ಲಿ ಶೀತ, ಕೆಮ್ಮು, ಗಂಟಲು ನೋವಿನ ಸಮಸ್ಯೆಗಳು ಎಲ್ಲೇ ಕಂಡುಬಂದರೂ ಕೂಡಲೇ ಅಲ್ಲಿನ ಜನರ ತಪಾಸಣೆ ನಡೆಸಿ ಸ್ಯಾಂಪಲ್ ಸಂಗ್ರಹಿಸುವ ಕೆಲಸ ಮಾಡುತ್ತಿದ್ದೇವೆ. ಇದಲ್ಲದೆ ಕೋವಿಡ್ ಪರೀಕ್ಷೆ ಸಹ ನಡೆಸಲು ಕ್ರಮ ತೆಗೆದುಕೊಂಡಿದ್ದೇವೆ’ ಎಂದು ತಿಳಿಸಿದರು.

‘ಸಾರ್ವಜನಿಕ ಆಸ್ಪತ್ರೆ, ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಆಯ್ಕೆ ಮಾಡಿದ ಸ್ಥಳದ ಕುಡಿಯುವ ನೀರಿನ ಮಾದರಿ ಪಡೆದು ಪರೀಕ್ಷೆಗೆ ಒಳಪಡಿಸುವ ಕೆಲಸ ನಡೆದಿದ್ದು, ಈ ಕುರಿತಾಗಿ ಗ್ರಾಮ ಪಂಚಾಯಿತಿ, ನಗರಸಭೆಗೆ ಪತ್ರ ಬರೆದು ಮಾಹಿತಿ ನೀಡುವ ಕೆಲಸ ಸಹ ನಡೆದಿದೆ’ ಎಂದು ಹೇಳಿದರು.

ಈಗಾಗಲೇ ಇಲಾಖೆ ಸಿಬ್ಬಂದಿ ಜ್ವರದ ಲಕ್ಷಣದ ಮಾಹಿತಿ ಸಿಕ್ಕ ಕೂಡಲೇ ಕಾಯಿಲೆ ಪೀಡಿತರ ಮನೆಗೆ ತೆರಳಿ ವಿವರ ಸಂಗ್ರಹಿಸಿ ನೀಡುತ್ತಿದ್ದಾರೆ ಎಂದರು.

ಮಳೆಗಾಲದಲ್ಲಿ ಕಾಡುವ ಇಲಿ ಜ್ವರ

ಸಾಗರ: ನಿರಂತರವಾಗಿ ಮಳೆ ಸುರಿಯುವ ಸಂದರ್ಭದಲ್ಲಿ ಸಾಮಾನ್ಯವಾಗಿ ಇಲಿ ಜ್ವರ ಕಾಣಿಸಿಕೊಳ್ಳುತ್ತದೆ. ಮೈ ನಡುಗುವ ಚಳಿ ಜೊತೆ ಜ್ವರ, ಕೈಕಾಲು ನಡುಗುವುದು ಈ ರೋಗದ ಲಕ್ಷಣ. ರೋಗ ಉಲ್ಬಣವಾದರೆ ಅದು ಕರುಳಿಗೂ ತೊಂದರೆ ಕೊಟ್ಟು ಜಾಂಡೀಸ್ ಆಗುತ್ತದೆ.

‘ಗ್ರಾಮೀಣ ಪ್ರದೇಶದಲ್ಲಿ ಮಳೆಗಾಲದಲ್ಲಿ ಝರಿಯ ನೀರು ಕುಡಿಯುವುದರಿಂದ ಅದರಲ್ಲಿ ಇಲಿಯ ಹಿಕ್ಕೆ ಸೇರಿಕೊಂಡು ಇಲಿಜ್ವರಕ್ಕೆ ದಾರಿ ಮಾಡಿಕೊಡುತ್ತದೆ. ಹೀಗಾಗಿ, ಮಳೆಗಾಲದಲ್ಲಿ ಕಡ್ಡಾಯವಾಗಿ ಕುದಿಸಿ ಆರಿಸಿ ನೀರು ಕುಡಿಯಬೇಕು’ ಎನ್ನುತ್ತಾರೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೆ.ಎಸ್.ಮೋಹನ್.

ತಾಲ್ಲೂಕಿನಲ್ಲಿ ಈ ಮಳೆಗಾಲದಲ್ಲಿ 9 ಇಲಿ ಜ್ವರ ಪ್ರಕರಣ ವರದಿಯಾಗಿವೆ. ಅರಳಗೋಡು ಪಂಚಾಯಿತಿ ವ್ಯಾಪ್ತಿಯಲ್ಲಿ ಇಬ್ಬರಿಗೆ, ಸಿರಿವಂತೆ ವ್ಯಾಪ್ತಿಯಲ್ಲಿ ಐವರಿಗೆ, ತಡಗಳಲೆ ವ್ಯಾಪ್ತಿಯಲ್ಲಿ ಇಬ್ಬರಿಗೆ ಇಲಿ ಜ್ವರ ಕಾಣಿಸಿಕೊಂಡಿದೆ. ಎಲ್ಲರ ಆರೋಗ್ಯ ಸ್ಥಿರವಾಗಿದೆ.

‘ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಮತ್ತೊಂದು ಕಾಯಿಲೆಯೆಂದರೆ ವಾಂತಿ ಭೇದಿ. ಇದಕ್ಕೂ ಕಲುಷಿತ ನೀರಿನ ಸೇವನೆಯೇ ಕಾರಣ ಎನ್ನುವ ಆರೋಗ್ಯಾಧಿಕಾರಿ, ಪ್ರತಿ ಆಸ್ಪತ್ರೆಗಳಲ್ಲಿ ಒಆರ್‌ಎಸ್ ವ್ಯವಸ್ಥೆ ಮಾಡಲಾಗಿದೆ’ ಎನ್ನುತ್ತಾರೆ.

ಜಿಟಿಜಿಟಿ ಮಳೆ ಆರಂಭವಾಗುವ ಹೊತ್ತಿಗೆ ಡೆಂಗಿ, ಚಿಕೂನ್‌ಗುನ್ಯಾ ಪ್ರವೇಶ ಪಡೆಯುತ್ತವೆ. ನಿಂತ ನೀರಿನಲ್ಲಿ ಉತ್ಪತ್ತಿಯಾಗುವ ಸೊಳ್ಳೆ ಕಚ್ಚುವುದರಿಂದ ಮನೆಯ ಸುತ್ತಮುತ್ತಲೂ ಬಳಸಿ ಬಿಸಾಕಿದ ತೆಂಗಿನ ಚಿಪ್ಪು, ಟಯರ್ ತುಂಡು, ಪ್ಲಾಸ್ಟಿಕ್ ಬಾಟಲಿ, ಡ್ರಮ್, ಕ್ಯಾನ್‌ಗಳಲ್ಲಿ ನೀರು ಸಂಗ್ರಹವಾಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ತಜ್ಞರು.

ಆರೋಗ್ಯ ಇಲಾಖೆಯಿಂದ ತುರ್ತು ಸ್ಪಂದನೆ: ಡಿಎಚ್‌ಒ

ಮಳೆಗಾಲದ ಸಹಜ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡರೆ, ತುರ್ತು ಪರಿಸ್ಥಿತಿಯಲ್ಲಿ ಭೂ ಕುಸಿತದಿಂದಾಗಿ ಹಾನಿ, ಮಳೆಯಿಂದಾಗಿ ಮರ ಹಾಗೂ ವಿದ್ಯುತ್ ಕಂಬ ಬಿದ್ದು ಜನರಿಗೆ ವಿದ್ಯುತ್ ಸ್ಪರ್ಶದ ಅಪಾಯವೂ ಇದೆ. ಜೊತೆಗೆ ಹಾವು, ಚೇಳು ಕಡಿತದ ಅನಾಹುತಗಳೇ ಹೆಚ್ಚು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ ಸುರಗಿಹಳ್ಳಿ ಹೇಳುತ್ತಾರೆ.

ಮನೆಯ ಒಳಗೂ, ಹೊರಗೂ ಬಳಕೆಗಾಗಿ ಸಂಗ್ರಹಿಸಿಟ್ಟಿರುವ ನೀರನ್ನು ಆಗಿಂದಾಗ್ಗೆ ಖಾಲಿ ಮಾಡಿ ಪಾತ್ರೆ–ಪಗದ, ಡ್ರಂ, ಕ್ಯಾನ್‌ ಸ್ವಚ್ಛಗೊಳಿಸಿ, ಭದ್ರವಾಗಿ ಮುಚ್ಚಿಡುವ ಮೂಲಕ ಸೊಳ್ಳೆಗಳ ಸಂತಾನೋತ್ಪತ್ತಿ ಆಗದಂತೆ ತಡೆಯಬೇಕು. ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡುತ್ತಾರೆ.

ನೆಗಡಿ, ಕೆಮ್ಮು, ಡೆಂಗಿ, ವಾಂತಿ, ಭೇದಿ, ಜ್ವರದ ನಿಯಂತ್ರಣಕ್ಕೆ ಕ್ಷೇತ್ರ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆಯುತ್ತಾರೆ. ಜತೆಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಔಷಧವನ್ನು ಮೊದಲೇ ಆಸ್ಪತ್ರೆಗಳಲ್ಲಿ ದಾಸ್ತಾನು ಇಡಲಾಗಿದೆ. ನೀರಿನ ಶುದ್ಧತೆಗೆ ಕ್ಲೋರಿನ್‌ ಮಾತ್ರೆ ಸಹ ನೀಡಲಾಗುತ್ತಿದೆ.

ಸಾಂಕ್ರಾಮಿಕ ರೋಗದ ಕುರಿತು ಮಾಹಿತಿ ನೀಡಲು ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಮಾಹಿತಿ ನೀಡುತ್ತಿದ್ದಾರೆ. ತುರ್ತು ಪರಿಸ್ಥಿತಿ ಸಂದರ್ಭ ವೈದ್ಯರು ಹಾಗೂ ಸಿಬ್ಬಂದಿಗೆ ಅನವಶ್ಯಕ ರಜೆ ನೀಡಲಾಗುತ್ತಿಲ್ಲ ಎಂದು ತಿಳಿಸಿದರು.

ತುರ್ತು ಸ್ಪಂದನೆಗೆ ತಂಡ: ಮಲೆನಾಡಿನಲ್ಲಿ ಮಳೆಗಾಲ ಬಂತೆಂದರೆ ವೈದ್ಯಕೀಯ ನೆರವು ನೀಡಲು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ತುರ್ತು ಸ್ಪಂದನಾ ತಂಡ (ರ‍್ಯಾಪಿಡ್ ರೆಸ್ಪಾನ್ಸ್ ಟೀಮ್) ಇರುತ್ತದೆ. ಜತೆಗೆ ಪ್ರಾಥಮಿಕ ಕೇಂದ್ರಲ್ಲಿ ವೈದ್ಯರ ತಂಡ ಇದೆ.

ಜ್ವರ ಕಂಡುಬದಲ್ಲಿ ಸಮೀಕ್ಷೆ ನಡೆಸುತ್ತೇವೆ. ಮೂರಕ್ಕಿಂತ ಜಾಸ್ತಿ ಪ್ರಕರಣಗಳು ಕಂಡುಬಂದರೆ ಗ್ರಾಮ ಸಮೀಕ್ಷೆ ಮಾಡುತ್ತೇವೆ. ಒಂದು ವೇಳೆ ಪ್ರಕರಣಗಳು ಜಾಸ್ತಿಯಾದರೆ ಸಂಚಾರಿ ಘಟಕ ಸ್ಥಾಪಿಸಲಾಗುವುದು.
ನೆಗಡಿ, ಕೆಮ್ಮು, ಡೆಂಗಿ ವಾಂತಿ, ಭೇದಿ ಮತ್ತು ಜ್ವರದ ನಿಯಂತ್ರಣಕ್ಕೆ ಕ್ಷೇತ್ರ ಸಿಬ್ಬಂದಿ ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT