ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್ ಓಲೈಕೆಗೆ ಇನ್ನೆಷ್ಟು ಹಿಂದೂಗಳು ಬಲಿಯಾಗಬೇಕು?: ಬಿ.ವೈ. ರಾಘವೇಂದ್ರ

ನೇಹಾ ಕೊಲೆ ದಿಕ್ಕು ತಪ್ಪಿಸಲು ಪ್ರಯತ್ನ: ಬಿಜೆಪಿ ಆರೋಪ
Published 20 ಏಪ್ರಿಲ್ 2024, 16:24 IST
Last Updated 20 ಏಪ್ರಿಲ್ 2024, 16:24 IST
ಅಕ್ಷರ ಗಾತ್ರ

ಶಿವಮೊಗ್ಗ: ಕಾಂಗ್ರೆಸ್ಸಿನ ತುಷ್ಟೀಕರಣ ನೀತಿಗೆ ಹಿಂದೂಗಳು ಬಲಿಯಾಗುತ್ತಿದ್ದಾರೆ ಎಂಬುದುಕ್ಕೆ ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯೇ ಸಾಕ್ಷಿಯಾಗಿದೆ. ಆದರೆ ಇದನ್ನು ಮುಖ್ಯಮಂತ್ರಿ ವೈಯುಕ್ತಿಕ ಕೊಲೆಯೆಂದು ಹಗುರವಾಗಿ ಮಾತನಾಡುವ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸುತ್ತಿದ್ಧಾರೆ. ಇವರಿಗೆ ಇನ್ನೆಷ್ಟು ಹಿಂದೂಗಳ ಬಲಿಬೇಕು ಎಂದು ಸಂಸದ ಬಿ.ವೈ. ರಾಘವೇಂದ್ರ ಕಿಡಿಕಾರಿದರು. 

‘ವಿದ್ಯಾರ್ಥಿನಿಯ ತಂದೆ ನಿರಂಜನ ಅವರು ‘ಲವ್ ಜಿಹಾದ್‌’ ಕೊಲೆ ಆಗಿದೆ. ನನ್ನ ಮಗಳು ಪ್ರೀತಿ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆರೋಪಿ ಫಯಾಜ್ ಹತ್ಯೆ ಮಾಡಿದ್ದಾನೆ ಎಂದು ಹೇಳಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಣಿಸಬೇಕು. ಸರಿಯಾದ ತನಿಖೆ ಮಾಡಿ ಆರೋಪಿ ಫಯಾಜ್‌ನಿಗೆ ಬೇಗ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು’ ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. 

‘ಆರೋಪಿ ಫಯಾಜ್‌ ಗಾಂಜಾ ಸೇವಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಈತನಿಗೆ ಗಾಂಜಾ ನೀಡಿದವರು ಯಾರು? ಈ ಪ್ರಕರಣದ ಹಿಂದಿನ ರೂವಾರಿಗಳನ್ನು ಪತ್ತೆ ಮಾಡಬೇಕಿದೆ. ಒಂದು ವಾರದಲ್ಲಿ ರಾಜ್ಯದಲ್ಲಿ ಸಾಕಷ್ಟು ಅಪರಾಧ ಪ್ರಕರಣಗಳು ನಡೆಯುತ್ತಿವೆ. 48 ತಾಸಿನಲ್ಲಿ 8 ಕೊಲೆ ಆಗಿವೆ. ವಿದ್ಯಾರ್ಥಿನಿ ನೇಹಾ ಕುಟುಂಬಕ್ಕೆ ಪೊಲೀಸ್‌ ರಕ್ಷಣೆ ಕೊಡುವುದು ಬಿಟ್ಟು ಸರ್ಕಾರ ಆರೋಪಿ ಮನೆಗೆ ಪೊಲೀಸರನ್ನು ನಿಯೋಜಿಸಿದೆ. ಹಿಂದೂಗಳು ಹಿಂಸಾಚಾರಕ್ಕೆ ಇಳಿದಿಲ್ಲ. ಇದನ್ನು ಮುಖ್ಯಮಂತ್ರಿ ಅರಿತುಕೊಳ್ಳಬೇಕು’ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಪರವಾಗಿ ಹಾಡು ಹಾಡಿದ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಶ್ರೀರಾಮನವಮಿಯಲ್ಲಿ ಹಿಂದೂ ಯುವಕರ ಮೇಲೆ ಹಲ್ಲೆ ನಡೆದಿದೆ. ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಮಡಿಕೇರಿಯಲ್ಲಿ ಕುಟ್ಟಪ್ಪ, ಶಿವಮೊಗ್ಗದಲ್ಲಿ ಹರ್ಷ ಕೊಲೆಯಾಗಿದೆ ಎಂದರು. 

ಶಾಸಕ ಎಸ್‌.ಎನ್. ಚನ್ನಬಸಪ್ಪ ಮಾತನಾಡಿ, ‘ಕಾಂಗ್ರೆಸ್‌ ಸರಕಾರ ಬೆಂಗಳೂರನ್ನು ಪಾಕಿಸ್ತಾನದ ರಾಜಧಾನಿ ಮತ್ತು ಶಿವಮೊಗ್ಗವನ್ನು ಭಯೋತ್ಪಾದಕರ ಸ್ವರ್ಗವನ್ನಾಗಿ ಮಾಡಲು ಹೊರಟಿದೆ. ರಾಮೇಶ್ವರ ಕೆಫೆಗೆ ಬಾಂಬಿಟ್ಟವರು ತೀರ್ಥಹಳ್ಳಿಯವರು. ಈ ಹಿಂದೆ ನಕ್ಸಲರ ತಾಣವಾಗಿದ್ದ ಶಿವಮೊಗ್ಗ ಇದೀಗ ಭಯೋತ್ಪಾದಕರ ಕೇಂದ್ರವಾಗಿದೆ’ ಎಂದು ಗುಡುಗಿದರು. 

ಕೊಲೆ, ಸುಲಿಗೆ ಸೇರಿದಂತೆ 2024ರ ಜನವರಿಯಿಂದ ಈವರೆಗೆ 13,495 ಪ್ರಕರಣ ರಾಜ್ಯದಲ್ಲಿ ದಾಖಲಾಗಿವೆ. ಯಾರಿಗೂ ರಕ್ಷಣೆ ಇಲ್ಲದಂತಾಗಿದೆ. ಸೆಕ್ಯೂಲರ್ ಹೆಸರಿನಲ್ಲಿ ‘ಲವ್‌ ಜಿಹಾದ್‌’ ಮತ್ತು ಭಯೋತ್ಪಾದಕ ಚಟುವಟಿಕೆಗಳಿಗೆ ಹಾಗೂ ಬಾಂಬ್‌ ತಯಾರಕರಿಗೆ ಬೆನ್ನೆಲುಬಾಗಿ ಸರ್ಕಾರ ನಿಂತುಕೊಂಡಿದೆ ಎಂದು ಆರೋಪಿಸಿದರು. 

‘ಹುಬ್ಬಳ್ಳಿಯಲ್ಲಿ ನಡೆದ ನೇಹಾ ಹಿರೇಮಠ ಕೊಲೆ ಪ್ರಕರಣ ಪಾಲಕರು ಬೆಚ್ಚಿ ಬೀಳುವಂತೆ ಮಾಡಿದೆ. ತಮ್ಮ ಮಕ್ಕಳನ್ನು ಶಾಲಾ –ಕಾಲೇಜುಗಳಿಗೆ ಕಳಹಿಸಬೇಕೋ ಅಥವಾ ಬೇಡವೋ ಎಂಬ ಗೊಂದಲದಲ್ಲಿ ಇದ್ದಾರೆ. ಇದೊಂದು ನಪುಂಸಕ ಮತ್ತು ಹೇಡಿ ಸರ್ಕಾರ’ ಎಂದು ಹೇಳಿದರು. 

‘ಕಾನೂನು ಸುವ್ಯವಸ್ಥೆ ಸರಿಯಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಬೊಬ್ಬೆ ಹೊಡೆಯುತ್ತಾರೆ. 48 ತಾಸಿನಲ್ಲಿ 8 ಕೊಲೆ ಏಕೆ ಆಯಿತು. ಜನತೆ ಉತ್ತರ ನೀಡಬೇಕು. ಹಿಂದೂಗಳನ್ನು ಸದೆಬಡಿಯುವ ಸರ್ಕಾರವನ್ನು ಹೆಡೆಮುರಿ ಕಟ್ಟಲು ಮತದಾರರು ತಯಾರಾಗಿದ್ದಾರೆ’ ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಡಿ.ಎಸ್‌. ಅರುಣ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಟಿ.ಡಿ. ಮೇಘರಾಜ್‌, ಭಾನು ಪ್ರಕಾಶ್‌, ಮೋಹನರೆಡ್ಡಿ, ಮಾಲತೇಶ್‌, ಹರಿಕೃಷ್ಣ, ಕೆ.ವಿ. ಅಣ್ಣಪ್ಪ, ನಾಗರಾಜ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT