ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಮಾಳ ಪ್ರದೇಶಕ್ಕೆ ಹಾಕಿದ್ದ ಬೇಲಿ ತೆರವು ಖಂಡಿಸಿ ಪ್ರತಿಭಟನೆ

Last Updated 12 ನವೆಂಬರ್ 2021, 4:50 IST
ಅಕ್ಷರ ಗಾತ್ರ

ಸಾಗರ: ತಾಲ್ಲೂಕಿನ ತಾಳಗುಪ್ಪ ಹೋಬಳಿಯ ಸೈದೂರು, ಗದ್ದೆದಿಂಬ, ಚೂಣಿಕೊಪ್ಪ ಗ್ರಾಮಸ್ಥರು ಜಾನುವಾರು ಮೇಯಲು ಮೀಸಲಿಟ್ಟಿದ್ದ ಗೋಮಾಳ ಪ್ರದೇಶಕ್ಕೆ ಹಾಕಿದ್ದ ಬೇಲಿಯನ್ನು ತಹಶೀಲ್ದಾರ್‌ ಅವರು ಕಿತ್ತಿರುವುದನ್ನು ವಿರೋಧಿಸಿ ಗುರುವಾರ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.

ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿವಾನಂದ ಕುಗ್ವೆ ಮಾತನಾಡಿ, ‘ಸೈದೂರು ಗ್ರಾಮದಲ್ಲಿ ಗ್ರಾಮಸ್ಥರು 250 ಎಕರೆಗೂ ಹೆಚ್ಚು ವಿಸ್ತೀರ್ಣದ ಪ್ರದೇಶವನ್ನು ಗೋಮಾಳಕ್ಕಾಗಿ ಹಲವು ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದಾರೆ. ಈ ಪ್ರದೇಶಕ್ಕೆ ಹಾಕಿದ್ದ ಬೇಲಿಯನ್ನು ಈಚೆಗೆ ತಹಶೀಲ್ದಾರ್‌ ಅವರು ತೆರವುಗೊಳಿಸುವ ಮೂಲಕ ಊರು ಉದ್ವಿಗ್ನಗೊಳ್ಳಲು ಕಾರಣರಾಗಿದ್ದಾರೆ’ ಎಂದು ದೂರಿದರು.

ಗೋಮಾಳ ಪ್ರದೇಶವನ್ನು ಗ್ರಾಮಸ್ಥರು ಸಂರಕ್ಷಿಸಿಕೊಂಡು ಬರುತ್ತಿರುವ ಬಗ್ಗೆ ಕಂದಾಯ ಇಲಾಖೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಬೇಕು. ಹಲವು ಗ್ರಾಮಗಳಲ್ಲಿ ಸರ್ಕಾರಿ ಭೂಮಿ ಗೋಮಾಳದ ಹೆಸರಿನಲ್ಲಿ ಬೇರೆಯವರ ಪಾಲಾಗಿದೆ. ಆದರೆ, ಸೈದೂರು ಗ್ರಾಮದ ಗೋಮಾಳಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಏಕಪಕ್ಷೀಯ ತೀರ್ಮಾನ ಖಂಡನೀಯ ಎಂದರು.

ರೈತ ಸಂಘದ ಮುಖಂಡ ಕನ್ನಪ್ಪ, ‘ಗೋಮಾಳಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾದಲ್ಲಿ ಈ ಬಗ್ಗೆ ಅಧಿಕಾರಿಗಳು ಗ್ರಾಮ ಸುಧಾರಣಾ ಸಮಿತಿ ಹಾಗೂ ಪಂಚಾಯಿತಿ ಪ್ರಮುಖರೊಂದಿಗೆ ಮಾತುಕತೆ ನಡೆಸಬಹುದಿತ್ತು. ಆದರೆ, ಗ್ರಾಮಸ್ಥರ ಗಮನಕ್ಕೆ ಬರದಂತೆ ಬೇಲಿಯನ್ನು ಕಿತ್ತು ಹಾಕಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ’ ಎಂದು ಟೀಕಿಸಿದರು.

ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಚಂದ್ರಶೇಖರ್, ‘ಜಾನುವಾರನ್ನು ಮೇಯಿಸಲು ಗ್ರಾಮಸ್ಥರು ಕಾಯ್ದುಕೊಂಡಿರುವ ಪ್ರದೇಶದ ಮೇಲೆ ಯಾವುದೇ ಕ್ರಮ ಕೈಗೊಳ್ಳುವ ಮೊದಲು ಗ್ರಾಮಸ್ಥರ ಜೊತೆ ಸಮಾಲೋಚಿಸಬೇಕು ಎಂಬ ಸಾಮಾನ್ಯ ಜ್ಞಾನ ಅಧಿಕಾರಿಗಳಿಗೆ ಇಲ್ಲದಿರುವುದು ಬೇಸರದ ವಿಷಯ’ ಎಂದರು. ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ಅಣ್ಣಪ್ಪ ಎಸ್.ಬಿ. ಉಪಾಧ್ಯಕ್ಷ ಧರ್ಮಪ್ಪ, ವಕೀಲರಾದ ಗಣೇಶ್, ರಘುನಾಥ್, ಪ್ರಮುಖರಾದ ವೀರಭದ್ರಪ್ಪ, ನಾರಾಯಣಪ್ಪ, ಚಿದಾನಂದ ಗೌಡ, ರಾಮಪ್ಪ, ಮಂಜಪ್ಪ, ರಾಜು, ದಯಾನಂದ, ಹನುಮಂತ, ಸತೀಶ್ ಗೌಡ, ಲಿಂಗರಾಜ ಗೌಡ, ಬಲೀಂದ್ರಪ್ಪ ಇದ್ದರು.

ಜಾನುವಾರನ್ನು ತಾಲ್ಲೂಕು ಕಚೇರಿಗೆ ನುಗ್ಗಿಸುವ ಎಚ್ಚರಿಕೆ

ಜಾನುವಾರು ಮೇಯಲು ಇರುವ ಸ್ಥಳಕ್ಕೆ ಅಧಿಕಾರಿಗಳು ತೊಂದರೆ ನೀಡಿದರೆ ಗ್ರಾಮದಲ್ಲಿರುವ ಎಲ್ಲಾ ಜಾನುವಾರನ್ನು ಪೇಟೆಗೆ ತಂದು ತಾಲ್ಲೂಕು ಕಚೇರಿಗೆ ನುಗ್ಗಿಸಬೇಕಾಗುತ್ತದೆ ಎಂದು ಪ್ರತಿಭಟನಕಾರರು ಎಚ್ಚರಿಸಿದರು.

ಕಾಡು, ಕಾನು, ಗೋಮಾಳ, ಸೊಪ್ಪಿನಬೆಟ್ಟ ಗ್ರಾಮಗಳಲ್ಲಿ ಉಳಿದಿದ್ದರೆ ಅದಕ್ಕೆ ರೈತರೇ ಕಾರಣ ಹೊರತು ಯಾವುದೇ ಇಲಾಖೆ ಅಥವಾ ಅಧಿಕಾರಿಗಳು ಕಾರಣರಲ್ಲ ಎಂದು ಪ್ರತಿಭಟನಕಾರರು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT