ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನ್ನಭಾಗ್ಯ: ಪಡಿತರ ವಿತರಕರಿಗೆ ಐದು ತಿಂಗಳಿಂದ ಕಮಿಷನ್ ಇಲ್ಲ

ಅನ್ನಭಾಗ್ಯ: ಸಾಗಣೆ ವೆಚ್ಚ, ಹಮಾಲಿ ವೆಚ್ಚವನ್ನೂ ನೀಡಿಲ್ಲ
ಎಂ.ನವೀನ್‌ ಕುಮಾರ್‌
Published : 17 ಆಗಸ್ಟ್ 2024, 6:56 IST
Last Updated : 17 ಆಗಸ್ಟ್ 2024, 6:56 IST
ಫಾಲೋ ಮಾಡಿ
Comments

ಶಿರಾಳಕೊಪ್ಪ: ಅನ್ನಭಾಗ್ಯ ಯೋಜನೆಯಡಿ ರಾಜ್ಯದಾದ್ಯಂತ ಪಡಿತರ ಅಕ್ಕಿ ವಿತರಕರಿಗೆ ಐದು ತಿಂಗಳಿನಿಂದ ಸರ್ಕಾರ ಕಮಿಷನ್‌ ಹಣ ಬಿಡುಗಡೆ ಮಾಡಿಲ್ಲ. ಹೀಗಾಗಿ ನ್ಯಾಯಬೆಲೆ ಅಂಗಡಿ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇದರಿಂದಾಗಿ ಆರ್ಥಿಕ ತೊಂದರೆಗೆ ಸಿಲುಕಿರುವ ವಿತರಕರು ಪಡಿತರ ಅಂಗಡಿಗಳ ಬಾಡಿಗೆ, ಕಾರ್ಮಿಕರ ವೇತನ ಹಾಗೂ ಇತರೆ ಖರ್ಚುಗಳನ್ನು ನಿಭಾಯಿಸಲು ಹೆಣಗಾಡುತ್ತಿದ್ದಾರೆ.

ಪಡಿತರ ವಿತರಕರಿಗೆ ಪ್ರತಿ ಕ್ವಿಂಟಲ್‌ ಅಕ್ಕಿಗೆ ಈ ಮೊದಲು ₹ 124 ಕಮಿಷನ್‌ ಕೊಡಲಾಗುತ್ತಿತ್ತು. ಆದರೆ, ಕಾಂಗ್ರೆಸ್‌ ಸರ್ಕಾರ ಅದನ್ನು ₹ 150ಕ್ಕೆ ಹೆಚ್ಚಿಸಿದೆ. ಕಮಿಷನ್‌ ಹೆಚ್ಚಾಗಿರುವ ಖುಷಿಯಲ್ಲಿರುವ ವಿತರಕರಿಗೆ ಐದು ತಿಂಗಳಿಂದ ಖಾತೆಗೆ ಹಣ ಜಮಾ ಆಗದಿರುವುದು ಬೇಸರ ತಂದಿದೆ.

ರಾಜ್ಯದಲ್ಲಿನ 20,437 ನ್ಯಾಯಬೆಲೆ ಅಂಗಡಿಗಳಿಂದ 2,70,047 ಕ್ವಿಂಟಲ್‌ ಅಕ್ಕಿ ವಿತರಿಸಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಪ್ರತಿ ತಿಂಗಳು ಒಟ್ಟು 16,080 ಕ್ವಿಂಟಲ್ ಅಕ್ಕಿ ವಿತರಿಸಲಾಗುತ್ತಿದೆ. ಪಡಿತರ ವಿತರಣೆಯಲ್ಲಿ ಶಿಕಾರಿಪುರ ಪ್ರಥಮ ಸ್ಥಾನದಲ್ಲಿದ್ದರೆ, ಸಾಗರ ಕೊನೆಯ ಸ್ಥಾನದಲ್ಲಿದೆ.

ಅಂದಾಜು ₹ 4 ಕೋಟಿಯಷ್ಟು ಹಣವನ್ನು ಪ್ರತಿ ತಿಂಗಳು ವಿತರಕರಿಗೆ ಕಮಿಷನ್‌ ರೂಪದಲ್ಲಿ ನೀಡಬೇಕಾಗಿದೆ. ಕೆಲವು ಜಿಲ್ಲೆಗಳಲ್ಲಿ 6 ತಿಂಗಳಿಂದಲೂ ಕಮಿಷನ್ ಹಣ ಬಂದಿಲ್ಲ. ಸರ್ಕಾರ ಅಂದಾಜು ₹ 20 ಕೋಟಿಗೂ ಹೆಚ್ಚು ಕಮಿಷನ್‌ ಹಣ ವಿತರಿಸಬೇಕಿದೆ. ಅದನ್ನೇ ನಂಬಿ ಜೀವನ ಮಾಡುತ್ತಿರುವವರಿಗೆ ತೊಂದರೆಯಾಗಿದೆ.

‘ಡಿಬಿಟಿ ಹಣ ಬಾರದವರಿಗೆ ಇ– ಕೆವೈಸಿ ಮಾಡಿ ಪೋಸ್ಟ್ ಆಫೀಸ್‌ನಲ್ಲಿ ಅಕೌಂಟ್ ಮಾಡಿಸುವುದು ಸೇರಿದಂತೆ ಇಲಾಖೆ ಹೇಳುವ ಎಲ್ಲ ಕೆಲಸವನ್ನು ಮಾಡುತ್ತಿದ್ದೇವೆ. ಇಷ್ಟೆಲ್ಲಾ ಕೆಲಸ ಮಾಡಿದರೂ ನಮಗೆ ಸರಿಯಾಗಿ ಕಮಿಷನ್‌ ನೀಡುತ್ತಿಲ್ಲ’ ಎಂದು ವಿತರಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿ ಕಾರ್ಡ್‌ದಾರರ ಇ–ಕೆವೈಸಿ ಮಾಡಿಸಿದ ಶುಲ್ಕ ₹ 3 ಬಾಕಿ ಇದೆ. ಅದನ್ನೂ ಮೂರು ವರ್ಷಗಳಿಂದ ನೀಡಿಲ್ಲ. ಗೋದಾಮಿನಿಂದ ಅಕ್ಕಿ ಸಾಗಿಸಿದ ಸಾಗಣೆ ವೆಚ್ಚ, ಹಮಾಲಿ ವೆಚ್ಚವನ್ನೂ ಭರಿಸಿಲ್ಲ ಎಂದು ಅವರು ತಿಳಿಸಿದರು.

ತಾಲ್ಲೂಕು ಪಡಿತರ ವಿತರಕರ ಸಂಘದ ಕಾರ್ಯದರ್ಶಿ ಅರುಣ
ತಾಲ್ಲೂಕು ಪಡಿತರ ವಿತರಕರ ಸಂಘದ ಕಾರ್ಯದರ್ಶಿ ಅರುಣ
ಪಡಿತರ ವಿತರಕರಿಗೆ ಕಮಿಷನ್‌ ಹೆಚ್ಚಿಸಲಾಗಿದೆ. ಹಣಕಾಸು ಇಲಾಖೆ ಅನುಮೋದನೆ ಪಡೆದು ಹೆಚ್ಚುವರಿ ಹಣ ಬಿಡುಗಡೆ ಮಾಡಲು ತಡವಾಗಿದೆ. 3 ದಿನಗಳ ಒಳಗಾಗಿ ವಿತರಕರ ಖಾತೆಗೆ ಹಣ ಜಮಾ ಆಗಲಿದೆ
–ಅವಿನ್ ಉಪನಿರ್ದೇಶಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಶಿವಮೊಗ್ಗ

‘ಕಮಿಷನ್‌ ಹಣ ಶೀಘ್ರ ಬಿಡುಗಡೆಯಾಗಲಿ’ ‘ಎಲ್ಲಾ ವಿತರಕರು ಶ್ರೀಮಂತರಿಲ್ಲ. ಕಮಿಷನ್‌ ಹಣ ನಂಬಿ ಬದುಕುವ ವಿತರಕರ ಸಂಖ್ಯೆ ಸಾಕಷ್ಟು ಇದೆ. ಹಾಗಾಗಿ ಸರ್ಕಾರ ಹಾಗೂ ಅಧಿಕಾರಿಗಳು ಶೀಘ್ರ ಹಣ ಬಿಡುಗಡೆ ಮಾಡಿಸಿ ವಿತರಕರಿಗೆ ಸಹಕರಿಸಬೇಕು’ ಎಂದು ಶಿಕಾರಿಪುರ ತಾಲ್ಲೂಕು ಪಡಿತರ ವಿತರಕರ ಸಂಘದ ಕಾರ್ಯದರ್ಶಿ ಅರುಣ್‌ ಮನವಿ ಮಾಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT