ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಗರ: ಅಧಿಕಾರಿಗಳ ಗೈರು, ತಾಪಂ ಸಭೆಗೆ ಸದಸ್ಯರ ಬಹಿಷ್ಕಾರ

ಅಧಿಕಾರಿಗಳ ಕಾರ್ಯವೈಖರಿಗೆ ಜಿ.ಪಂ ಸದಸ್ಯೆ ಅನಿತಾಕುಮಾರಿ ಅಸಮಾಧಾನ
Last Updated 7 ಅಕ್ಟೋಬರ್ 2020, 13:49 IST
ಅಕ್ಷರ ಗಾತ್ರ

ಸಾಗರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಮೇಲ್ವಿಚಾರಣಾ ಸಮಿತಿ ಸಭೆಗೆ ಹಲವು ಇಲಾಖೆಗಳ ಅಧಿಕಾರಿಗಳು ಗೈರು ಹಾಜರಾಗಿರುವುದನ್ನು ಖಂಡಿಸಿ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾಕುಮಾರಿ ಸಭೆಯನ್ನು ಬಹಿಷ್ಕರಿಸಿ ಹೊರ ನಡೆದರು.

ಸಮಾಜ ಕಲ್ಯಾಣ ಇಲಾಖೆಯಿಂದ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಉಪಹಂಚಿಕೆ ಅಡಿಯಲ್ಲಿ ಸಭೆ ಆಯೋಜಿಸಲಾಗಿತ್ತು.

ಕೃಷಿ, ಆರೋಗ್ಯ, ಶಿಕ್ಷಣ, ಲೋಕೋಪಯೋಗಿ, ಅರಣ್ಯ ಇಲಾಖೆ ಸೇರಿವಿವಿಧ ಇಲಾಖೆ ಅಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು.

ಇದನ್ನು ಗಮನಿಸಿದ ಅನಿತಾಕುಮಾರಿ, ‘ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಸರ್ಕಾರ ನೀಡುತ್ತಿರುವ ಸೌಲಭ್ಯವನ್ನು ಯಾವ ರೀತಿ ತಲುಪಿಸುತ್ತಿದ್ದಾರೆ ಎನ್ನುವುದಕ್ಕೆ ಈ ಸಭೆಯೆ ಸಾಕ್ಷಿಯಾಗಿದೆ. ಇಂತಹ ಪ್ರಮುಖ ಸಭೆಗೆ ಅಧಿಕಾರಿಗಳು ಗೈರು ಹಾಜರಾಗುವ ಮೂಲಕ ಪರಿಶಿಷ್ಟರಿಗೆ ಅವಮಾನ ಎಸಗಿದ್ದಾರೆ’ ಎಂದು ಅಸಮಾಧಾನ ಹೊರಹಾಕಿ‌ದರು.

‘ಹಾಜರಿರುವ ಅಧಿಕಾರಿಗಳ ಬಳಿ ತಮ್ಮ ಇಲಾಖೆಯಿಂದ ಪರಿಶಿಷ್ಟರಿಗೆ ಯಾವ ಸೌಲಭ್ಯವನ್ನು ನೀಡಬಹುದು ಎನ್ನುವ ಕುರಿತು ಮಾಹಿತಿ ಇಲ್ಲ. ಇಂತಹ ಅಧಿಕಾರಿಗಳು ಸಭೆಗೆ ಹಾಜರಾದರೂ ಏನು ಪ್ರಯೋಜನ ಎಂದು ಪ್ರಶ್ನಿಸಿದ ಅವರು, ‘ಸರ್ಕಾರ ದಲಿತ ಸಮುದಾಯಕ್ಕೆ ಮೀಸಲಿಟ್ಟಿರುವ ಹಣ ಯಾಕೆ ಅರ್ಹರಿಗೆ ತಲುಪುತ್ತಿಲ್ಲ ಎಂಬುದು ಈಗ ಸ್ಪಷ್ಟಗೊಂಡಿದೆ’ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಹಾಜರಿರುವಂತೆ ಸೂಚನೆ ನೀಡಬೇಕು. ಜೊತೆಗೆ ಹಾಜರಿರುವ ಅಧಿಕಾರಿಗಳ ಬಳಿ ಜನಪ್ರತಿನಿಧಿಗಳು ಕೇಳುವ ಮಾಹಿತಿಗಳು ಸ್ಪಷ್ಟವಾಗಿ ಗೊತ್ತಿರಬೇಕು. ಇಲ್ಲದಿದ್ದರೆ ಕಾಟಾಚಾರಕ್ಕೆ ಇಂತಹ ಸಭೆ ನಡೆಸುವ ಅಗತ್ಯವಿಲ್ಲ. ಸರಿಯಾದ ರೀತಿಯಲ್ಲಿ ಸಭೆ ನಡೆಸುವ ಜವಾಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿರ್ವಹಿಸಬೇಕು’ ಎಂದು ಎಚ್ಚರಿಸಿ ಸಭೆಯಿಂದ ಹೊರನಡೆದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಎಂ.ಕಮ್ಮಾರ್, ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಆನಂದಿ ಲಿಂಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT