ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿರಾಳಕೊಪ್ಪ: ಯಾವ ಗೊಬ್ಬರವನ್ನೂ ಬಳಸದೇ ಗಂಧಸಾಲೆ ಭತ್ತ ಕೃಷಿ

ಭೂಮಿ–ಜನರ ಆರೋಗ್ಯಕ್ಕೆ ತಕ್ಕ ವ್ಯವಸಾಯ ಪದ್ಧತಿ ಅಗತ್ಯ ಎನ್ನುವ ಮಳೂರು ಪ್ರಭು
Last Updated 15 ಡಿಸೆಂಬರ್ 2021, 4:27 IST
ಅಕ್ಷರ ಗಾತ್ರ

ಶಿರಾಳಕೊಪ್ಪ: ಜೀವನಕ್ಕಾಗಿ ಕೃಷಿ ಮಾಡದೇ, ಭೂಮಿ ಮತ್ತು ಜನರು ಬದುಕಲು ನೈತಿಕ ವ್ಯವಸಾಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಧ್ಯೇಯದೊಂದಿಗೆ ಬೇಸಾಯ ಮಾಡುತ್ತಿರುವ ರೈತ ಮಳೂರು ಗ್ರಾಮದ ಪ್ರಭು.

ವಾಣಿಜ್ಯ ಬೆಳೆಗಳಾದ ಕೋಹಿನೂರ್ ಕರಬೂಜ, ಶುಂಠಿ, ಅಡಿಕೆ, ಮೆಣಸು, ಟೊಮೆಟೊ, ಕಲ್ಲಂಗಡಿ, ಕಾಳುಮೆಣಸು ಸೇರಿದಂತೆ ಹಲವು ಬಗೆಯ ಬೆಳೆಗಳನ್ನು ವೈಜ್ಞಾನಿಕವಾಗಿ ಕೃಷಿ ಮಾಡಿರುವ ಇವರು ಸದಾ ಒಂದಿಲ್ಲೊಂದು ಪ್ರಯೋಗ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.

ಈಗ ಇವರು ದೇಸಿ ಭತ್ತದ ತಳಿಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿ ವರ್ಷ ಒಂದು ಬಗೆಯ ಬೀಜದ ಭತ್ತಗಳನ್ನು ಪೋಷಣೆ ಮಾಡುತ್ತಿದ್ದಾರೆ. ಈ ಭಾಗದಲ್ಲಿ ವಿರಳವಾಗಿರುವ ಗಂಧಸಾಲೆ ಭತ್ತವನ್ನು ಹೊಲದಲ್ಲಿ ನಾಟಿ ಮಾಡಿದ್ದರು. ಈ ಭತ್ತದ ಪೈರಿಗೆ ಸಾವಯವ ಹಾಗೂ ರಾಸಾಯನಿಕ ಸೇರಿದಂತೆ ಯಾವುದೇ ರೀತಿಯ ಗೊಬ್ಬರ ಬಳಸಿಲ್ಲ. ಭೂಮಿ ತನ್ನಷ್ಟಕ್ಕೆ ತಾನೇ ಮಣ್ಣಿನ ಸಾಮರ್ಥ್ಯಕ್ಕ ತಕ್ಕಂತೆ ಬೆಳೆಯಲು ಬಿಟ್ಟಿದ್ದರು. ಭತ್ತದ ಇಳುವರಿ ಸಹ ಉತ್ತಮವಾಗಿಯೇ ಬಂದಿದೆ. ನಾಟಿ ಮಾಡಿರುವ ಭತ್ತದ ಹೊಲಕ್ಕೆ ನೀರನ್ನು ಬಿಟ್ಟು ಮತ್ತೇನನ್ನೂ ಕೊಟ್ಟಿಲ್ಲ. ಆದರೂ 1 ಎಕ್ಕರೆಗೆ 20ರಿಂದ 25 ಚೀಲ ಇಳುವರಿ ಬಂದಿದೆ.

ಹೆಚ್ಚು ಇಳುವರಿ, ಹೆಚ್ಚು ಬೆಲೆಗಾಗಿ ಕೃಷಿ ಮಾಡದೇ ಮನುಷ್ಯನ ಆರೋಗ್ಯಕ್ಕಾಗಿ, ಭೂಮಿಯ, ಪ್ರಕೃತಿಯ ಆರೋಗ್ಯ ಕಾಪಾಡಲು ಕೃಷಿ ಮಾಡುವ ಅವಶ್ಯಕತೆ ಇದೆ. ದುಡಿದು ಹಣ ಮಾಡಲು ಹಲವು ದಾರಿಗಳು ಇವೆ. ಆದರೆ, ಮನುಷ್ಯ ಮತ್ತು ಭೂಮಿಯ ಆರೋಗ್ಯ ಕಾಪಾಡಲು ಬೇರೆ ಮಾರ್ಗಗಳು ಇಲ್ಲ. ಕೋಟಿ ಹಣದಿಂದ ಯಾರನ್ನೂ ಬದುಕಿಸಲಾಗದು. ಹಾಗಾಗಿ ಹೊಸ ಬಗೆಯ ಚಿಂತನೆಯೊಂದಿಗೆ ಕೃಷಿಯಲ್ಲಿ ಪ್ರಯೋಗಗಳನ್ನು ಮಾಡುವ ಅವಶ್ಯಕತೆ ಇದೆ. ದೊಡ್ಡ ರೈತರು ಈ ರೀತಿಯ ಪ್ರಯೋಗಗಳಿಗೆ ಮುಂದಾಗಬೇಕು ಇದರಿಂದ ಆರ್ಥಿಕ ನಷ್ಟವಾದರೂ ಸಮಸ್ಯೆ ಆಗುವುದಿಲ್ಲ, ಸಣ್ಣ ರೈತರು ಯಶಸ್ವಿ ಪ್ರಯೋಗಗಳನ್ನು ಅಳವಡಿಕೊಳ್ಳಬೇಕು. ಇವರು ಪ್ರಯೋಗಕ್ಕೆ ಮುಂದಾದರೆ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ. ಕಾಡಿನಲ್ಲಿ ಬೆಳೆಯುವ ಮರ, ಗಿಡ, ಬಳ್ಳಿಗಳಿಗೆ ಕೃತಕವಾಗಿ ಗೊಬ್ಬರ ಹಾಕಿ ಬೆಳೆಸಲು ಸಾಧ್ಯವಿಲ್ಲ. ಪ್ರಕೃತಿ ತನಗೆ ಬೇಕಾದ ಆಹಾರ, ಪೋಷಕಾಂಶವನ್ನು ತಾನೇ ಪಡೆಯುವ ಶಕ್ತಿ ಹೊಂದಿರುತ್ತದೆ. ರೈತರು ಹೆಚ್ಚು ಬೆಳೆಯ ಬಯಕೆಯಿಂದ ಗೊಬ್ಬರ ಹಾಕುತ್ತಿದ್ದಾರೆ. ಭೂಮಿಯ ಸಾಮರ್ಥ್ಯದ ಮೇಲೆ ಪೈರು ಬೆಳೆಯುತ್ತದೆ. ಅದನ್ನು ಮೀರಿ ಹೆಚ್ಚು ಇಳುವರಿ ತೆಗೆಯುವುದು ಕೂಡ ಪ್ರಕೃತಿಗೆ ವಿರುದ್ಧವಾದ ಕಾರ್ಯವಾಗುತ್ತದೆ ಎಂದು ಅವರು ವಿವರಿಸಿದರು.

ಮಳೂರು ಪ್ರಭು ಅವರು ಈಗಾಗಲೇ ಭಾಗ್ಯಜ್ಯೋತಿ, ಗಂಧಸಾಲೆ ಭತ್ತ ಬೆಳೆದಿದ್ದು ಮುಂದಿನ ಬಾರಿ ಸಿದ್ದ ಸಣ್ಣ, ನೌರ, ವಾಳ್ಯಾ, ಮೈಸೂರು ಸಣ್ಣ ಎನ್ನುವ ದೇಸಿ ಭತ್ತಗಳನ್ನು ಬೆಳೆಯುವ ಮೂಲಕ ಬೀಜ ಸಂರಕ್ಷಣೆ ಮಾಡುವುದಾಗಿ ತಿಳಿಸಿದ್ದಾರೆ. (9482703663 ಸಂಪರ್ಕಿಸಬಹುದು).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT