ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂತಿ ನಡಿಗೆ ಸರಿಯಾದ ದಿಕ್ಕಿನಲ್ಲಿದೆ: ಸಿರಿಗೆರೆಶ್ರೀ

‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾ; ವಿವಿಧ ಮಠಾಧೀಶರು, ಮುಸ್ಲಿಂ, ಕ್ರಿಶ್ಚಿಯನ್‌ ಧರ್ಮಗುರುಗಳು ಭಾಗಿ
Last Updated 4 ಸೆಪ್ಟೆಂಬರ್ 2022, 4:37 IST
ಅಕ್ಷರ ಗಾತ್ರ

ಶಿವಮೊಗ್ಗ: ‘ಇಂದಿನ ಉಲ್ಟಾ ಪ್ರಪಂಚದಲ್ಲಿಶಾಂತಿ ನಡಿಗೆ ಸರಿಯಾದ ದಿಕ್ಕಿನಲ್ಲಿದೆ. ಶಾಂತಿಯ ಕರೆ ಇಂದಿನದಲ್ಲ, ಹಿಂದಿನ ಕಾಲದಿಂದಲೂ ಶಾಂತಿಗಾಗಿ ಮೊರೆ ಇದೆ’ ಎಂದು ಸಿರಿಗೆರೆಯ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಸಿಮ್ಸ್‌ನಿಂದ ಸೈನ್ಸ್ ಮೈದಾನದವರೆಗೆ ನಡೆದ ‘ನಮ್ಮ ನಡಿಗೆ ಶಾಂತಿಯ ಕಡೆಗೆ’ ಜಾಥಾದ ನಂತರ ಸರ್ಕಾರಿ ಪ್ರೌಢಶಾಲೆಯ ಬಳಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಸಮಾಜದಲ್ಲಿ ನೋಡುವ ದೃಷ್ಟಿ ಸರಿಪಡಿಸಿಕೊಳ್ಳಬೇಕು. ಮನುಷ್ಯನಿಗೆ ಒಳ್ಳೆಯ ದೃಷ್ಟಿ ಇರಬೇಕು. ಹಿಂದಿನಿಂದಲೂ ಎಲ್ಲಾ ಧರ್ಮಗಳು ಶಾಂತಿಯನ್ನೇ ಬಯಸುತ್ತಾ ಬಂದಿವೆ. ಎಲ್ಲಿ ದ್ವೇಷ ಇರುವುದಿಲ್ಲವೋ ಅಲ್ಲಿ ಶಾಂತಿ ಇರುತ್ತದೆ.ಜಗತ್ತಿನ ಎಲ್ಲಾ ಧರ್ಮಗಳು ಶಾಂತಿ ಸೌಹಾರ್ದವನ್ನೇ ಸಾರುತ್ತವೆ. ನಾವು ಹಮ್ಮಿಕೊಂಡ ಈ ನಡಿಗೆ ಆರಂಭ ಅಷ್ಟೇ. ಈ ನಡಿಗೆಯಿಂದ ಎಲ್ಲರ ಜವಾಬ್ದಾರಿ ಹೆಚ್ಚಿದೆ. ಶಿವಮೊಗ್ಗ ನಗರಕ್ಕೆ ಮಸಿ ಬಳಿಯುವ ಕೆಲಸ ಯಾರೂ ಮಾಡಬಾರದು’ ಎಂದು ಕಿವಿಮಾತು ಹೇಳಿದರು.

‘ಮನುಜಮತ ವಿಶ್ವಪಥ ಎಲ್ಲರ ಧ್ಯೇಯವಾಗಲಿ. ದಂಗೆ ನಡೆಸುವವರು ನಮ್ಮ ದೇಶಕ್ಕೆ ಕಳಂಕ ತರುತ್ತಾರೆ. ಪ್ರೀತಿಯ ಮತ್ತು ಸ್ನೇಹದ ವಾತಾವರಣ ಬೆಳೆಸಬೇಕು. ದ್ವೇಷ ಬಿತ್ತುವ ಜಾಗದಲ್ಲಿ ಪ್ರೀತಿ ಬೆಳೆಸಬೇಕು’ ಎಂದುಮುಸ್ಲಿಂ ಧರ್ಮಗುರು ಮುಕ್ತಿ ಅಖಿಲ್ ರಝಾ ಹೇಳಿದರು.

ಬೇರೆಯವರು ಚೆನ್ನಾಗಿರಲಿ ಎಂಬ ಭಾವನೆ ಬೆಳೆಸಿಕೊಳ್ಳಬೇಕು. ನಿಸ್ವಾರ್ಥ ಮನೋಭಾವ ಇರಬೇಕು. ಪ್ರೀತಿಯ ಸಿಂಚನ ಇರುವೆಡೆ ಶಾಂತಿ ಇದ್ದೇ ಇರುತ್ತದೆ ಎಂದು ಶಿವಮೊಗ್ಗದ ಬಿಷಪ್‌ ಡಾ.ಫ್ರಾನ್ಸಿಸ್ ಸೆರಾವೋ ಹೇಳಿದರು.

ಜಿಲ್ಲೆಯಲ್ಲಿ ಧರ್ಮದ ಹೆಸರಿನಲ್ಲಿ ದ್ವೇಷ ಬಿತ್ತುವ ಕೆಲಸವಾಗುತ್ತಿದೆ. ಇದು ಸರಿಯಲ್ಲ. ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮದ ಮುಖಂಡರು ಭಾಗಿಯಾಗಿದ್ದಾರೆ. ಶಾಂತಿ ನಡಿಗೆ ಕೇವಲ ಕಾರ್ಯಕ್ರಮಕ್ಕೆ ಹಾಗೂ ಮಾತಿಗೆ ಮಾತ್ರ ಸಿಮೀತವಾಗದಿರಲಿ ಎಂದು ಮುಸ್ಲಿಂ ಮುಖಂಡ ಮೌಲಾನಾ ಶಾಹುಲ್ ಹಮೀದ್ ಹೇಳಿದರು.

ಹೆತ್ತವರು ತಮ್ಮ ಮಕ್ಕಳಿಗೆ ಸರಿಯಾದ ದಾರಿ ತೋರಿಸಬೇಕು. ಶಾಂತಿ, ನೆಮ್ಮದಿ ಮತ್ತು ಪರಸ್ಪರ ಪ್ರೀತಿ ಹಂಚಿಕೊಂಡಾಗ ಮಾನವೀಯತೆಯ ಅರಿವಾಗುತ್ತದೆ. ಯಾವ ಧರ್ಮ ಕೂಡ ಹಿಂಸೆಯನ್ನು ಪ್ರಚೋದಿಸುವುದಿಲ್ಲ ಎಂದುಬೆಕ್ಕಿನ ಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಹೇಳಿದರು.

ಜಿಲ್ಲೆಯ ಜನರು ಶಾಂತಿ ಪ್ರಿಯರು. ಈ ಶಾಂತಿ ನಡಿಗೆ ಒಂದು ಐತಿಹಾಸಿಕ ಕಾರ್ಯಕ್ರಮವಾಗಿದೆ. ಎಲ್ಲಾ ಧರ್ಮಗುರುಗಳ ಇವತ್ತಿನ ಸಂದೇಶ ಜಿಲ್ಲೆಯಲ್ಲಿ ಶಾಂತಿ ಕಾಪಾಡುತ್ತದೆ ಎಂದು ನಂಬಿಕೆ ಇದೆ. ಇದರಿಂದ ಜಿಲ್ಲೆಯ ಪ್ರಗತಿಯ ಹಾದಿ ಸುಗಮವಾಗಲಿದೆ ಎಂದು ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಹೇಳಿದರು.

ಜಡೆ ಮಠದ ಮಹಾಂತ ಸ್ವಾಮೀಜಿ, ಬಸವಕೇಂದ್ರದ ಬಸವಮರುಳಸಿದ್ಧ ಸ್ವಾಮೀಜಿ, ಫಾದರ್‌ ಡಾ.ಕ್ಲಿಫರ್ಡ್ ರೋಷನ್ ಪಿಂಟೋ, ಜಾಮಿಯಾ ಮಸೀದಿಯ ಮುಫ್ತಿ ಅಖ್ವಿಲ್‌ ರಝಾ, ರೈತ ಮುಖಂಡ ಎಚ್.ಆರ್. ಬಸವರಾಜಪ್ಪ, ಮುಖಂಡರಾದ ಕೆ.ಪಿ.ಶ್ರೀಪಾಲ್, ಎಂ.ಗುರುಮೂರ್ತಿ ಸೇರಿದಂತೆ ವಿವಿಧ ಧರ್ಮದ ಮುಖಂಡರು, ಸಂಘಟನೆಗಳ ಪ್ರಮುಖರು ಇದ್ದರು.

ಜಿಲ್ಲಾಡಳಿತದ ಸಹಕಾರ

ಶಾಂತಿ ನಡಿಗೆಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಿತ್ತು. ಜಾಥಾ ಅಂಗವಾಗಿ ಬಿ.ಎಚ್‌. ರಸ್ತೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ ಸೂಕ್ತ ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.

ಜಾಥಾ ಚಾಲನೆ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಾ.ಮುಸ್ತಫಾ ಹುಸೇನ್, ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿಪ್ರಸಾದ್ ಇದ್ದರು.

ನೀರಿನ ವ್ಯವಸ್ಥೆ

ಶಾಂತಿ ನಡಿಗೆಯಲ್ಲಿ ಸಾಗುವ ಸಾವಿರಾರು ಮಂದಿಗೆ ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿತ್ತು. ನೀರು ಕುಡಿದ ಖಾಲಿ ಬಾಟಲಿಗಳನ್ನು ನೂರಾರು ಸ್ವಯಂ ಸೇವಕರು ಸಂಗ್ರಹಿಸುವ ಮೂಲಕ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT