ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ್ಪಿನ ಕಾಯಿಯ ರಾಜ ಅಪ್ಪೆಮಿಡಿಗೆ ಅಂಚೆ ಇಲಾಖೆ ಮಾನ್ಯತೆ

ಅಪ್ಪೆಮಿಡಿ ಮಾವಿನ ಕಾಯಿಯ ವಿಶೇಷ ಲಕೋಟೆ ಬಿಡುಗಡೆ
Last Updated 1 ಸೆಪ್ಟೆಂಬರ್ 2021, 3:53 IST
ಅಕ್ಷರ ಗಾತ್ರ

ಶಿವಮೊಗ್ಗ: ಉಪ್ಪಿನ ಕಾಯಿಯ ರಾಜ ಎಂದೇ ಹೆಸರಾಗಿರುವ ಅಪ್ಪೆಮಿಡಿಗೆ ಈಗ ಭಾರತೀಯ ಅಂಚೆ ಇಲಾಖೆ ಮಾನ್ಯತೆ ಲಭಿಸಿದೆ. ಅಂಚೆ ಲಕೋಟೆ ಮೇಲೆ ಅಪ್ಪೆಮಿಡಿಯ ಭಾವಚಿತ್ರ ಪ್ರಕಟಿಸಲಾಗಿದ್ದು, ಮಂಗಳವಾರ ಈ ವಿಶೇಷ ಅಂಚೆ ಲಕೋಟೆಯನ್ನು ಶಿವಮೊಗ್ಗದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರೆಸ್ ಟ್ರಸ್ಟ್‌ನಲ್ಲಿ ಹಮ್ಮಿಕೊಂಡಿದ್ದ ಅಪ್ಪೆಮಿಡಿ ಮಾವಿನ ಕಾಯಿಯ ವಿಶೇಷ ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ ಲಕೋಟೆ ಬಿಡುಗಡೆ ಮಾಡಿದರು.

ಮಲೆನಾಡಿನ ಸಾಂಸ್ಕೃತಿಕ ಸಂಕೇತವಾಗಿರುವ ಅಪ್ಪೆಮಿಡಿಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಂತಾಗಿದ್ದು, ಕೇಂದ್ರ ಸರ್ಕಾರದ ಭೌಗೋಳಿಕ ಗುರುತಿಸುವಿಕೆ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಅಪ್ಪೆಮಿಡಿ ಇನ್ನುಮುಂದೆ ಅಂಚೆ ಇಲಾಖೆ ಲಕೋಟೆ ಮೇಲೆ ಕಾಣಿಸಲಿದೆ.

ಅಂಚೆ ಕವರ್ ಮೇಲೆ ಅಪ್ಪೆಮಿಡಿಯ ಭಾವಚಿತ್ರ ಪ್ರಕಟಿಸಲಾಗಿದೆ. ಲಕೋಟೆಯ ಹಿಂಭಾಗದಲ್ಲಿ ಅಪ್ಪೆ ಮಿಡಿಯ ವಿಶೇಷದ ಕುರಿತು ಮಾಹಿತಿ ಪ್ರಕಟವಾಗಿದೆ. ಅಲ್ಲದೆ ಅಪ್ಪೆಮಿಡಿ ಸಂರಕ್ಷಣೆ ಮಾಡುತ್ತಿರುವ ಸಾಗರದ ಕಾಕಲ್ ಇಂಡಸ್ಟ್ರಿಯ ವಿಳಾಸವನ್ನೂ ಪ್ರಕಟಿಸಲಾಗಿದೆ.

ಲಕೋಟೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಕಾಕಲ್ ಇಂಡಸ್ಟ್ರೀಸ್‌ನ ಗಣೇಶ್ ಕಾಕಲ್, ‘ಅಪ್ಪೆ ಮಿಡಿ ಮಾವಿನಕಾಯಿ ಸಾಗರ ಮತ್ತು ಸುತ್ತಮುತ್ತಲ ಪ್ರದೇಶದ ವಿಶೇಷ ಬೆಳೆಯಾಗಿದೆ. ನೂರಾರು ವರ್ಷಗಳಿಂದ ಇದನ್ನು ಬೆಳೆಯುತ್ತಿದ್ದಾರೆ. ಒಬ್ಬ ಉದ್ಯಮಿಯಾಗಿ ಅಪ್ಪೆಮಿಡಿಯನ್ನು ಪರಿಚಯಿಸಬೇಕು ಎನ್ನುವ ದೃಷ್ಟಿಯಿಂದ ಅಂಚೆ ಇಲಾಖೆ ಮೂಲಕ ಪ್ರಯತ್ನಿಸಲಾಗಿತ್ತು. 30 ವರ್ಷದ ಹೋರಾಟಕ್ಕೆ ಇವತ್ತು ನಮಗೆ ಜಯ ಸಿಕ್ಕಿದೆ. 30ಕ್ಕೂ ಹೆಚ್ಚು ತಳಿಯ ಅಪ್ಪೆಮಿಡಿ ಬೆಳೆದಿದ್ದೇವೆ’ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ರಾಮಚಂದ್ರ ಮಾತನಾಡಿ, ‘ಅಪ್ಪೆಮಿಡಿಯಲ್ಲಿ ಸುಮಾರು 90 ತಳಿಗಳಿವೆ. ಆದರೆ, ಬಹುತೇಕರಿಗೆ ಅದನ್ನು ಬೆಳೆಯುವ ರೀತಿ ನೀತಿ ಗೊತ್ತಿಲ್ಲ. ಹಾಗಾಗಿ ಮರಗಳನ್ನು ಕಡಿದು ಹಾಳು ಮಾಡಲಾಗುತ್ತಿದೆ. ತೋಟಗಾರಿಕೆ ಇಲಾಖೆ ಮಲೆನಾಡಿನಲ್ಲಿ ಬೆಳೆಯುತ್ತಿದ್ದ ಅಪ್ಪೆಮಿಡಿಯನ್ನು ಗುರುತಿಸಿ ರೈತರಿಗೆ ಪ್ರೋತ್ಸಾಹ ಕೂಡ ನೀಡಿತ್ತು. 2009ರಲ್ಲಿಯೇ ಇದನ್ನು ಪ್ರಾದೇಶಿಕ ಬೆಳೆಯನ್ನಾಗಿ ಗುರುತಿಸಲಾಗಿತ್ತು. ಈಗ ಅಂಚೆ ಇಲಾಖೆಯ ಮೂಲಕ ಇದರ
ಮಹತ್ವ ಮತ್ತಷ್ಟು ಹೆಚ್ಚಿದೆ’ ಎಂದು ತಿಳಿಸಿದರು.

ಭೌಗೋಳಿಕ ಗುರುತಿಸುವಿಕೆ ಪಡೆದ ಉತ್ಪನ್ನಕ್ಕೆ ಆದ್ಯತೆ: ‘ಭೌಗೋಳಿಕ ಗುರುತಿಸುವಿಕೆ ಪಡೆದ ಉತ್ಪನ್ನಗಳನ್ನು ಗುರುತಿಸಿ, ಅಂಚೆ ಲಕೋಟೆ ಮೇಲೆ ಅವುಗಳ ಭಾವಚಿತ್ರ ಮತ್ತು ಮಾಹಿತಿಯನ್ನು ಪ್ರಕಟಿಸಲಾಗುತ್ತಿದೆ. ಇಂತಹ ಬೆಳೆ ಮತ್ತು ಉತ್ಪನ್ನಗಳನ್ನು ದೇಶದಾದ್ಯಂತ ಜನರಿಗೆ ಪರಿಚಯಿಸಲು ಅಂಚೆ ಇಲಾಖೆ ವ್ಯವಸ್ಥೆ ಮಾಡಿದೆ. ಉತ್ಪನ್ನಗಳನ್ನು ಗ್ರಾಹಕರಿಗೆ ನೇರವಾಗಿ ತಲುಪಿಸಲು ಅಂಚೆ ಇಲಾಖೆಯಿಂದ ವಿಶೇಷ ನೆರವು ಕೂಡ ಕೊಡಲಾಗುತ್ತದೆ’ ಎಂದು ಡಿ.ಎಸ್.ವಿ.ಆರ್.ಮೂರ್ತಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂಚೆ ಉಪ ಅಧೀಕ್ಷಕಿ ಉಷಾ, ಭದ್ರಾವತಿ ಮುಖ್ಯ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಶಶಿಧರ್, ಭದ್ರಾವತಿ ಎಂಪಿಎಂ ಅಂಚೆ ಕಚೇರಿಯ ಸಂಯೋಜಿತ ಪೋಸ್ಟ್ ಮಾಸ್ಟರ್ ಎನ್.ಎಸ್.ಪ್ರೀತಿ, ರಾಘವೇಂದ್ರ ಹವಳೇರ್, ಕೃಷ್ಣಾ ಕುಮಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT