ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಿಂದ ಈಡಿಗ ಸಮುದಾಯಕ್ಕೆ ಮೋಸ: ಪ್ರಣವಾನಂದ ಸ್ವಾಮೀಜಿ ಕಿಡಿ

ನಿಗಮ ಕೇಳಿದರೆ ಕೋಶ ಕೊಟ್ಟರು
Last Updated 19 ನವೆಂಬರ್ 2022, 12:19 IST
ಅಕ್ಷರ ಗಾತ್ರ

ಶಿವಮೊಗ್ಗ: ‘ನಾರಾಯಣಗುರುಗಳ ಹೆಸರಲ್ಲಿ ನಿಗಮ ಮಾಡಿ ₹500 ಕೋಟಿ ಮೀಸಲಿಡುವಂತೆ ಕೇಳಿದರೆ, ಸರ್ಕಾರ ಸೊಪ್ಪು ಹಾಕಲಿಲ್ಲ. ಮೇಲಿನ ವರ್ಗದವರು ಕೇಳಿದರೆ ನಿಗಮ ಘೋಷಣೆ ಮಾಡುತ್ತಾರೆ. ನಾವು ಹಿಂದುಳಿದ ವರ್ಗದವರು ಕೇಳಿದರೆ ಕೋಶ ಕೊಡುತ್ತಾರೆ‘ ಎಂದುಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನ ಕರದಾಳದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಗಮ ಅಂದರೆ ಅದಕ್ಕೊಬ್ಬರು ಅಧ್ಯಕ್ಷರು ಇರುತ್ತಾರೆ. ಸಮುದಾಯದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣ ಮೀಸಲಿಡಬಹುದು. ಕೋಶ ಅಂದರೆ ತಹಶೀಲ್ದಾರ್ ದರ್ಜೆ ಅಧಿಕಾರಿ ನೇತೃತ್ವ ವಹಿಸುತ್ತಾರೆ. ಬಜೆಟ್‌ನಲ್ಲಿ ಹಣ ಕೊಡುವಂತೆ ಇಲ್ಲ. ಬದಲಿಗೆ ಕಾರ್ಪಸ್ ಫಂಡ್‌ನಲ್ಲಿ ಬದುಕಬೇಕಿದೆ. ಇದು ನಮ್ಮ ವಿರುದ್ಧ (ಈಡಿಗ ಸಮುದಾಯ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ ಷಡ್ಯಂತ್ರ. ಈ ಬಗ್ಗೆ ಅವರೆದುರು ನಿಂತು ಮಾತಾಡುವ ಶಕ್ತಿ ಸಮುದಾಯವನ್ನು ಪ್ರತಿನಿಧಿಸುವ ಐವರು ಶಾಸಕರು, ಇಬ್ಬರು ಸಚಿವರಿಗೆ ಇಲ್ಲ ಎಂದು ಕಿಡಿಕಾರಿದರು.

‘ನಿಗಮದ ವಿಚಾರದಲ್ಲಿ ಸರ್ಕಾರ ಮಾಡಿದ ಮೋಸದ ವಿರುದ್ಧ ಮಾತನಾಡಲು ಮಠಕ್ಕೆ ಅನುದಾನ ಪಡೆದ ಸಮುದಾಯದ ಮಠಾಧೀಶರು ಮುಜುಗರ ಪಡುತ್ತಾರೆ. ಆದರೆ ನಾನು ಹಾಗಲ್ಲ. ಸರ್ಕಾರದ ಜನವಿರೋಧಿ ನೀತಿ ಖಂಡಿಸುತ್ತೇನೆ.ಕೋಶಕ್ಕೂ ನಿಗಮಕ್ಕೂ ವ್ಯತ್ಯಾಸವಿದೆ. ನಮಗೆ ಕೋಶ ಬೇಡ, ನಿಗಮ ಬೇಕು‘ ಎಂದು ಸ್ವಾಮೀಜಿ ಆಗ್ರಹಿಸಿದರು.

ಈಡಿಗರ ಕುಲಕಸುಬು ಸೇಂದಿ ಮಾರಾಟ. ಅದಕ್ಕೆ ರಾಜ್ಯದಲ್ಲಿ ಮತ್ತೆ ಅವಕಾಶ ನೀಡಬೇಕು. ಇಲ್ಲದಿದ್ದರೆ ಅದಕ್ಕೆ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಹೇಳಿದ ಸ್ವಾಮೀಜಿ, 1978ರಲ್ಲಿ ವೀರೇಂದ್ರ ಪಾಟೀಲರ ವಿರುದ್ಧ ಚಿಂಚೋಳಿಯಲ್ಲಿ ನಮ್ಮ ಸಮುದಾಯದ ಬಸಯ್ಯ ಸ್ಪರ್ಧಿಸಿದ್ದರು. ಸೇಂದಿ ಮಾರುವವನೊಬ್ಬ ಚುನಾವಣೆಯಲ್ಲಿ ಸ್ಪರ್ಧಿಸುವಷ್ಟು ಬೆಳೆದ ಎಂಬ ಕೋಪಕ್ಕೆ ಅವರು, ಗೆದ್ದ ನಂತರ ಸೇಂದಿ ಮಾರಾಟ ನಿಷೇಧಿಸಿ ಆದೇಶ ಮಾಡಿದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT